

ಹೊಸ ವರ್ಷಕ್ಕೆ ಕಮರ್ಷಿಯಲ್ ಸಿಲಿಂಡರ್ ಬೆಲೆ ಏರಿಕೆಯಾಗಿದೆ. 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 111 ರೂಪಾಯಿ ಹೆಚ್ಚಿಸಿದ್ದು, ಇಂದು ಜನವರಿ 1 ರಿಂದ ಜಾರಿಗೆ ಬರಲಿದೆ. ಈ ಹೆಚ್ಚಳವು ದೇಶಾದ್ಯಂತ ಹೊಟೇಲ್ ಗಳು, ರೆಸ್ಟೋರೆಂಟ್‌ಗಳು ಮತ್ತು ಸಣ್ಣ ವ್ಯವಹಾರಗಳಿಗೆ ನಿರ್ವಹಣಾ ವೆಚ್ಚವನ್ನು ಹೆಚ್ಚಿಸುವ ನಿರೀಕ್ಷೆಯಿದೆ.
ಪರಿಷ್ಕರಣೆಯ ನಂತರ, ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಈಗ 1,691.50 ರೂಪಾಯಿಗೆ ಏರಿಕೆಯಾಗಿದೆ. ಇದು 1,580.50 ರೂಪಾಯಿಗಳಷ್ಟಿತ್ತು. ಕೋಲ್ಕತ್ತಾದಲ್ಲಿ 1,684 ರೂ.ಗಳಿಂದ 1,795 ರೂಪಾಯಿಗಳಿಗೆ ಏರಿದ್ದರೆ, ಮುಂಬೈನಲ್ಲಿ 1,531 ರೂಪಾಯಿಗಳಿಂದ 1,642.50 ರೂಪಾಯಿಗಳಿಗೆ ಏರಿಕೆಯಾಗಿದೆ.
ಗೃಹ ಬಳಕೆ ಸಿಲಿಂಡರ್ ದರದಲ್ಲಿ ಇಲ್ಲ ಹೆಚ್ಚಳ
14 ಕೆಜಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ, ಇದು ಗೃಹಬಳಕೆಯ ಗ್ರಾಹಕರಿಗೆ ಖುಷಿಯ ವಿಚಾರ. ನಗರಗಳಲ್ಲಿ ಅಡುಗೆ ಅನಿಲ ಬೆಲೆಗಳು ಬದಲಾಗದೆ ಉಳಿದಿದ್ದು, 850 ರಿಂದ 960 ರೂಪಾಯಿಗಳವರೆಗೆ ಇದೆ.
ಪ್ರಸ್ತುತ, ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ 853 ರೂ, ಮುಂಬೈನಲ್ಲಿ 852.50 ರೂ, ಲಕ್ನೋದಲ್ಲಿ 890.50 ರೂ, ಅಹಮದಾಬಾದ್‌ನಲ್ಲಿ 860 ರೂ, ಹೈದರಾಬಾದ್‌ನಲ್ಲಿ 905 ರೂ, ವಾರಣಾಸಿಯಲ್ಲಿ 916.50 ರೂ ಮತ್ತು ಪಾಟ್ನಾದಲ್ಲಿ 951 ರೂ ಆಗಿದೆ. ಬೆಂಗಳೂರಿನಲ್ಲಿ 855 ರೂಪಾಯಿ 50 ಪೈಸೆಯಾಗಿದೆ.
ನಗರಗಳಲ್ಲಿ ಪರಿಷ್ಕೃತ ವಾಣಿಜ್ಯ ಎಲ್‌ಪಿಜಿ ದರಗಳು
ಇಂಡಿಯನ್ ಆಯಿಲ್‌ನ ವೆಬ್‌ಸೈಟ್ ಪ್ರಕಾರ, 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಈಗ ಪಾಟ್ನಾದಲ್ಲಿ 1,953.50 ರೂ., ನೋಯ್ಡಾದಲ್ಲಿ 1,691 ರೂ., ಲಕ್ನೋದಲ್ಲಿ 1,814 ರೂ., ಭೋಪಾಲ್‌ನಲ್ಲಿ 1,696 ರೂ. ಮತ್ತು ಗುರುಗ್ರಾಮ್‌ನಲ್ಲಿ 1,708.50 ರೂ, ಬೆಂಗಳೂರಿನಲ್ಲಿ 1654 ರೂಪಾಯಿ ಆಗಿದೆ.
ಎಲ್‌ಪಿಜಿ ಬೆಲೆಗಳು ಆಮದು ಸಮಾನತೆ ಬೆಲೆ (IPP), ಜಾಗತಿಕ ಇಂಧನ ದರಗಳು, ರೂಪಾಯಿ-ಡಾಲರ್ ವಿನಿಮಯ ದರ, ಸರಕು ಸಾಗಣೆ ವೆಚ್ಚಗಳು, ವಿಮೆ ಮತ್ತು ಸ್ಥಳೀಯ ತೆರಿಗೆಗಳು ಸೇರಿದಂತೆ ಬಹು ಅಂಶಗಳಿಂದ ಪ್ರಭಾವಿತವಾಗಿವೆ. ರಾಜ್ಯ ಮಟ್ಟದ ತೆರಿಗೆಗಳು ಮತ್ತು ಲಾಜಿಸ್ಟಿಕ್ಸ್ ವೆಚ್ಚಗಳಲ್ಲಿನ ವ್ಯತ್ಯಾಸಗಳು ಬೆಲೆಗಳಲ್ಲಿ ವ್ಯತ್ಯಾಸಗಳಿಗೆ ಕಾರಣವಾಗುತ್ತವೆ.
Advertisement