

After Bank Loan Closure: ಇವತ್ತು ಪ್ರತಿಯೊಬ್ಬರು ಒಂದಲ್ಲಾ ಒಂದು ಕೆಲಸಕ್ಕೆ ಬ್ಯಾಂಕ್‌ಗಳಿಂದ ಸಾಲ ಪಡೆಯುತ್ತಾರೆ. ಆದರೆ, ಬ್ಯಾಂಕ್‌ನಿಂದ ಪಡೆದ ಸಾಲವನ್ನು ಸಂಪೂರ್ಣವಾಗಿ ಮರುಪಾವತಿಸಿದ ತಕ್ಷಣ ನಮ್ಮೆಲ್ಲಾ ಜವಾಬ್ದಾರಿ ತೀರಿತು ಅಂದುಕೊಳ್ಳುವುದು ತಪ್ಪಾಗುತ್ತದೆ. ಯಾಕಂದ್ರೆ, ಸಾಲದ ಕೊನೆಯ ಕಂತು ಪಾವತಿಸಿದ ಮೇಲೆಯೂ ಬ್ಯಾಂಕ್ ಕಡೆಯಿಂದ ಕೆಲವು ಪ್ರಮುಖ ದಾಖಲೆಗಳನ್ನು ಸಂಗ್ರಹಿಸುವುದು ಅತ್ಯಗತ್ಯ. ಅದರಂತೆ, ಈ ದಾಖಲೆಗಳು ಭವಿಷ್ಯದಲ್ಲಿ ಉದ್ಭವಿಸಬಹುದಾದ ಕಾನೂನು ತೊಡಕುಗಳು ಹಾಗೂ ಹಣಕಾಸಿನ ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸುತ್ತವೆ. ಹಾಗಾದ್ರೆ, ಆ ದಾಖಲೆಗಳು ಯಾವುವು ಗೊತ್ತಾ? ಇಲ್ಲಿದೆ ಆ ಕುರಿತ ವರದಿ:
1. ನೋ ಡ್ಯೂಸ್ ಸರ್ಟಿಫಿಕೇಟ್ (NDC / NOC):
ಇದು ಅತ್ಯಂತ ಪ್ರಮುಖವಾದ ದಾಖಲೆಯಾಗಿದೆ. ನೀವು ಸಾಲದ ಸಂಪೂರ್ಣ ಮೂಲ ಮೊತ್ತ, ಬಡ್ಡಿ ಮತ್ತು ಇತರೆ ಶುಲ್ಕಗಳನ್ನು ಪಾವತಿಸಿದ್ದೀರಿ ಹಾಗೂ ಬ್ಯಾಂಕ್‌ಗೆ ನಿಮ್ಮಿಂದ ಯಾವುದೇ ಬಾಕಿ ಹಣ ಬರಬೇಕಾಗಿಲ್ಲ ಎಂಬುದನ್ನು ಇದು ಅಧಿಕೃತವಾಗಿ ದೃಢೀಕರಿಸುತ್ತದೆ.
2. ಸಾಲ ಮುಕ್ತಾಯ ಪತ್ರ:
ನಿಮ್ಮ ಸಾಲದ ಖಾತೆಯನ್ನು ಬ್ಯಾಂಕ್ ಅಧಿಕೃತವಾಗಿ ಮತ್ತು ಶಾಶ್ವತವಾಗಿ ಮುಚ್ಚಿದೆ ಎಂಬುದಕ್ಕೆ ಈ ಪತ್ರವೇ ಸಾಕ್ಷಿ. ಭವಿಷ್ಯದಲ್ಲಿ ಬ್ಯಾಂಕ್ ಯಾವುದೇ ತಾಂತ್ರಿಕ ದೋಷದಿಂದಾಗಿ ಮತ್ತೆ ಹಣ ಕೇಳದಂತೆ ತಡೆಯಲು ಇದು ಸಹಕಾರಿ.
3. ಸಾಲದ ಅಂತಿಮ ಸ್ಟೇಟ್ಮೆಂಟ್:
ಸಾಲ ಪ್ರಾರಂಭವಾದಾಗಿನಿಂದ ಕೊನೆಯ ಕಂತಿನವರೆಗೆ ನೀವು ಪಾವತಿಸಿದ ಎಲ್ಲಾ EMI ಮತ್ತು ಶುಲ್ಕಗಳ ಸಂಪೂರ್ಣ ವಿವರಗಳು ಇದರಲ್ಲಿರುತ್ತವೆ. ಇದರಲ್ಲಿ ಬಾಕಿ ಮೊತ್ತ Zero ಎಂದು ನಮೂದಾಗಿರುವುದನ್ನು ಖಚಿತಪಡಿಸಿಕೊಳ್ಳಿ.
4. ಮೂಲ ದಾಖಲೆಗಳ ವಾಪಸಾತಿ:
ನೀವು ಗೃಹ ಸಾಲ ಅಥವಾ ಆಸ್ತಿ ಅಡಮಾನ ಸಾಲ ಪಡೆದಾಗ ಬ್ಯಾಂಕ್‌ನಲ್ಲಿ ಇಟ್ಟಿದ್ದ ಸೇಲ್ ಡೀಡ್, ಮದರ್ ಡೀಡ್, ಕಂದಾಯ ರಸೀದಿಗಳು ಮತ್ತು ಇತರೆ ಮೂಲ ದಾಖಲೆಗಳನ್ನು ಸುರಕ್ಷಿತವಾಗಿ ಮರಳಿ ಪಡೆಯಿರಿ. ಸಾಲ ಪಡೆಯುವಾಗ ನೀಡಿದ್ದ ದಾಖಲೆಗಳ ಪಟ್ಟಿಯೊಂದಿಗೆ ಇವುಗಳನ್ನು ತಾಳೆ ನೋಡಿ.
5. ಹೊಣೆಗಾರಿಕೆ ಮುಕ್ತ ಪತ್ರ ಅಥವಾ ಗಿರವಿ ರದ್ದು ಪತ್ರ:
ನಿಮ್ಮ ಆಸ್ತಿಯ ಮೇಲಿದ್ದ ಬ್ಯಾಂಕಿನ ಹಕ್ಕನ್ನು ರದ್ದುಗೊಳಿಸಿರುವ ಪತ್ರವನ್ನು ಪಡೆದುಕೊಳ್ಳಿ. ಗೃಹ ಸಾಲವಾಗಿದ್ದರೆ, ಉಪ-ನೋಂದಣಾಧಿಕಾರಿ ಕಚೇರಿಗೆ ಹೋಗಿ ಬ್ಯಾಂಕಿನ ಹೆಸರಲ್ಲಿದ್ದ ಅಡಮಾನ ಹಕ್ಕನ್ನು ಅಧಿಕೃತವಾಗಿ ರದ್ದುಗೊಳಿಸಬೇಕು.
6. ಹೈಪೋಥಿಕೇಶನ್ ರದ್ದತಿ ಪತ್ರ (ವಾಹನ ಸಾಲಕ್ಕೆ)
ನೀವು ಕಾರು ಅಥವಾ ಬೈಕ್ ಸಾಲ ಪಡೆದಿದ್ದರೆ, ನಿಮ್ಮ ಆರ್ಸಿ ಬುಕ್‌ನಲ್ಲಿ ಬ್ಯಾಂಕಿನ ಹೆಸರು ಇರುತ್ತದೆ. ಸಾಲ ತೀರಿದ ನಂತರ ಬ್ಯಾಂಕ್ ನೀಡುವ ಫಾರ್ಮ್ 35 ಮತ್ತು NOC ಅನ್ನು ಪಡೆದುಕೊಂಡು, ಆರ್‌ಟಿಒ ಕಚೇರಿಯಲ್ಲಿ ವಾಹನದ ಮೇಲಿನ ಬ್ಯಾಂಕ್ ಹಕ್ಕನ್ನು ರದ್ದುಪಡಿಸಬೇಕು.
7. ಹಿಂಪಡೆಯದ ಚೆಕ್‌ಗಳ ವಾಪಸಾತಿ:
ಸಾಲ ಪಡೆಯುವಾಗ ಸುರಕ್ಷತೆಗಾಗಿ ಅಥವಾ EMI ಪಾವತಿಗಾಗಿ ನೀವು ಬ್ಯಾಂಕ್‌ಗೆ ಸಹಿ ಮಾಡಿ ನೀಡಿದ್ದ ಬಳಕೆಯಾಗದ ಪೋಸ್ಟ್-ಡೇಟೆಡ್ ಚೆಕ್‌ಗಳನ್ನು ಮರೆಯದೇ ಮರಳಿ ಪಡೆಯಿರಿ ಅಥವಾ ಅವುಗಳನ್ನು ನಿಮ್ಮ ಸಮ್ಮುಖದಲ್ಲೇ ಹರಿದು ಹಾಕಲು ತಿಳಿಸಿ.
ಇದರೊಂದಿಗೆ ಸಾಲ ತೀರಿಸಿದ 20 ರಿಂದ 30 ದಿನಗಳ ನಂತರ ನಿಮ್ಮ CIBIL ವರದಿಯನ್ನು ಪರಿಶೀಲಿಸಿ. ಅಲ್ಲಿ ನಿಮ್ಮ ಸಾಲದ ಖಾತೆಯು Closed ಎಂದು ನಮೂದಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.