

ನವದೆಹಲಿ: ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಕಾರ್ಯಾಚರಣೆಯಲ್ಲಿ ಭಾರೀ ಅಡಚಣೆ ಎದುರಿಸಿದ ಮೂರು ತಿಂಗಳ ನಂತರ, ಮಂಗಳವಾರ ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್ ಅವರು ತಕ್ಷಣದಿಂದ ಜಾರಿಗೆ ಬರುವಂತೆ ರಾಜೀನಾಮೆ ನೀಡಿದ್ದಾರೆ.
"ಕಂಪನಿಯು ಹೊಸ ಸಿಇಒ ನೇಮಕವನ್ನು ಘೋಷಿಸುವವರೆಗೆ ವಿಮಾನಯಾನ ವ್ಯವಹಾರಗಳ ನಿರ್ವಹಣೆಯ ಜವಾಬ್ದಾರಿಯನ್ನು ಇಂಡಿಗೋ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಭಾಟಿಯಾ ಅವರು ವಹಿಸಿಕೊಳ್ಳುತ್ತಾರೆ" ಎಂದು ವಿಮಾನಯಾನ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಪೀಟರ್ ಎಲ್ಬರ್ಸ್ ಅವರ ರಾಜೀನಾಮೆಯನ್ನು ಕಂಪನಿಯ ಆಡಳಿತ ಮಂಡಳಿ ಅಂಗೀಕರಿಸಿದ್ದು, ಮಾರ್ಚ್ 10ರ ಸಂಜೆಯಿಂದಲೇ ಅವರನ್ನು ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ.
"ಕಂಪನಿಯ ಸಂಸ್ಕೃತಿಯನ್ನು ಬಲಪಡಿಸಲು, ಕಾರ್ಯಾಚರಣೆಯ ಶ್ರೇಷ್ಠತೆಯನ್ನು ಬಲಪಡಿಸಲು ಮತ್ತು ತನ್ನ ಗ್ರಾಹಕರಿಗೆ ಅಸಾಧಾರಣ ಸೇವೆ, ವಿಶ್ವಾಸಾರ್ಹತೆ ಮತ್ತು ವೃತ್ತಿಪರತೆಯನ್ನು ತಲುಪಿಸುವ ಬದ್ಧತೆಯನ್ನು ಹೆಚ್ಚಿಸಲು ರಾಹುಲ್ ವಿಮಾನಯಾನ ವ್ಯವಹಾರಗಳ ನಿರ್ವಹಣೆಯನ್ನು ವಹಿಸಿಕೊಳ್ಳಲಿದ್ದಾರೆ" ಎಂದು ಇಂಡಿಗೋ ಬ್ರಾಂಡ್ ಹೆಸರಿನಲ್ಲಿ ವಿಮಾನಯಾನ ಸಂಸ್ಥೆಯನ್ನು ನಿರ್ವಹಿಸುವ ಇಂಟರ್‌ಗ್ಲೋಬ್ ಏವಿಯೇಷನ್‌ನ ಅಧ್ಯಕ್ಷ ವಿಕ್ರಮ್ ಸಿಂಗ್ ಮೆಹ್ತಾ, ಅವರು ಹೇಳಿದ್ದಾರೆ.
ಇಂಡಿಗೋ ಕಳೆದ ವರ್ಷ ಡಿಸೆಂಬರ್ ನಲ್ಲಿ ತೀವ್ರ ಸಿಬ್ಬಂದಿ ಕೊರತೆಯಿಂದಾಗಿ, ವಿಶೇಷವಾಗಿ ಪೈಲಟ್‌ಗಳ ಕೊರತೆಯಿಂದಾಗಿ ಸಾವಿರಾರು ವಿಮಾನಗಳನ್ನು ರದ್ದುಗೊಳಿಸಿತು. ಇದರಿಂದ ಲಕ್ಷಾಂತರ ಪ್ರಯಾಣಿಕರು ಪರದಾಡುವಂತಾಗಿತ್ತು. ಈ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವಿಮಾನಯಾನ ನಿಯಂತ್ರಕ ಡಿಜಿಸಿಎ ಇಂಡಿಗೋಗೆ 22 ಕೋಟಿ ರೂ. ವಿಧಿಸಿತ್ತು ಮತ್ತು ಸಿಇಒಗೆ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು.
Advertisement