

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಮುಂದುವರೆದ ಪರಿಣಾಮ ಕಚ್ಚಾ ತೈಲ ಬೆಲೆಯಲ್ಲಿ ತೀವ್ರ ಏರಿಕೆ ಮತ್ತು ಡಾಲರ್‌ಗೆ ಬೇಡಿಕೆ ಹೆಚ್ಚಳದಿಂದಾಗಿ ಗುರುವಾರ ಅಮೆರಿಕದ ಡಾಲರ್ ಎದುರು ಭಾರತದ ರೂಪಾಯಿ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿತ ಕಂಡಿದೆ.
ಜಾಗತಿಕ ಕಚ್ಚಾ ತೈಲ ಬೆಲೆಗಳು ರಾತ್ರಿಯಿಡೀ ಏರುತ್ತಲೇ ಇದ್ದುದರಿಂದ ಡಾಲರ್ ಎದುರು ರೂಪಾಯಿ ಮೌಲ್ಯ 35 ಪೈಸೆ ಕುಸಿದು ದಿನದ ಕನಿಷ್ಠ ಮಟ್ಟ 92.36 ಕ್ಕೆ ತಲುಪಿತು.
ದೇಶೀಯ ಷೇರು ಮಾರುಕಟ್ಟೆಯ ಕುಸಿತದಿಂದ ಡಾಲರ್ ಮತ್ತಷ್ಟು ಪ್ರಬಲವಾಗುತ್ತಿದ್ದು, ಈಕ್ವಿಟಿ ಮಾರುಕಟ್ಟೆಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆ ಹಿಂತೆಗೆತ ಹೆಚ್ಚುತ್ತಿರುವುದು ವಹಿವಾಟು ದುರ್ಬಲಗೊಳ್ಳಲು ಕಾರಣವಾಗಿದೆ ಎಂದು ಫಾರೆಕ್ಸ್ ವ್ಯಾಪಾರಿಗಳು ತಿಳಿಸಿದ್ದಾರೆ.
ಅಂತರಬ್ಯಾಂಕ್ ವಿದೇಶಿ ವಿನಿಮಯದಲ್ಲಿ ರೂಪಾಯಿ ಮೌಲ್ಯವು 92.25ರಿಂದ ಆರಂಭವಾಯಿತು. ಬಳಿಕ ಕುಸಿತ ಕಂಡು, ಯುಎಸ್ ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠವಾದ 92.36ಕ್ಕೆ ಇಳಿಯಿತು. ಈ ಹಿಂದಿನ, ಅಂದರೆ ಮಾರ್ಚ್ 9ರಂದು ಸಾರ್ವಕಾಲಿಕ ಕನಿಷ್ಠವಾಗಿದ್ದ 92.35 ದರವನ್ನು ಮೀರಿತು.
Advertisement