

ದೇಶದಲ್ಲಿ ಪೂರೈಕೆ ರಕ್ಷಣೆ ಮತ್ತು ಆಹಾರ ಭದ್ರತೆ ಖಚಿತಪಡಿಸುವುದು ಮತ್ತು ಬೆಲೆ ಸ್ಥಿರತೆ ಕಾಯ್ದುಕೊಳ್ಳುವ ಉದ್ದೇಶದಿಂದ, ಉತ್ಪಾದನೆ ಮತ್ತು ಲಭ್ಯತೆ ಆತಂಕಗಳ ನಡುವೆ ಕೇಂದ್ರ ಸರ್ಕಾರ ಸಕ್ಕರೆ ರಫ್ತನ್ನು ಈ ವರ್ಷ ಸೆಪ್ಟೆಂಬರ್ 30ರವರೆಗೆ ಅಥವಾ ಮುಂದಿನ ಆದೇಶದವರೆಗೆ ನಿಷೇಧಿಸಿದೆ.
ಈ ನಿರ್ಧಾರವನ್ನು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯ ಪ್ರಕಟಣೆ ಮೂಲಕ ಘೋಷಿಸಿದೆ. ಈ ಅಧಿಸೂಚನೆಯಡಿ ಹಲವು ಸಕ್ಕರೆ ವರ್ಗಗಳ ರಫ್ತು ಸ್ಥಿತಿಯನ್ನು “ನಿಯಂತ್ರಿತದಿಂದ ನಿಷೇಧಿತ ಎಂದು ಬದಲಿಸಲಾಗಿದೆ.
“ITC (HS) ಕೋಡ್‌ಗಳು 1701 14 90 ಮತ್ತು 1701 99 90 ಅಡಿಯಲ್ಲಿ ಬರುವ ಕಚ್ಚಾ ಸಕ್ಕರೆ, ಬಿಳಿ ಸಕ್ಕರೆ ಮತ್ತು ಶುದ್ಧೀಕೃತ ಸಕ್ಕರೆಯ ರಫ್ತು ನೀತಿಯನ್ನು ತಕ್ಷಣದಿಂದಲೇ ನಿಯಂತ್ರಿತ’ ಯಿಂದ ‘ನಿಷೇಧಿತ’ಕ್ಕೆ ಪರಿಷ್ಕರಿಸಲಾಗಿದೆ. ಇದು 2026ರ ಸೆಪ್ಟೆಂಬರ್ 30ರವರೆಗೆ ಅಥವಾ ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಮುಂದಿನ ಎರಡು ವರ್ಷಗಳ ಕಾಲ ದೇಶೀಯ ಸಕ್ಕರೆ ಲಭ್ಯತೆ ಸಮರ್ಪಕವಾಗಿರಬೇಕು ಮತ್ತು ಬೆಲೆ ನಿಯಂತ್ರಣದಲ್ಲಿರಬೇಕು ಎಂಬುದು ಈ ರಫ್ತು ನಿಷೇಧ ಹಿಂದೆ ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ಭಾರತವು ಜಗತ್ತಿನ ಅತಿದೊಡ್ಡ ಸಕ್ಕರೆ ಉತ್ಪಾದಕ ಮತ್ತು ರಫ್ತುದಾರ ರಾಷ್ಟ್ರಗಳಲ್ಲಿ ಒಂದಾಗಿದೆ. ರಫ್ತು ನಿಲ್ಲಿಸುವ ಮೂಲಕ ದೇಶೀಯ ಬೇಡಿಕೆಗೆ ಆದ್ಯತೆ ನೀಡಿ, ಚಿಲ್ಲರೆ ಸಕ್ಕರೆ ಬೆಲೆಯಲ್ಲಿ ತೀವ್ರ ಏರಿಕೆ ಆಗದಂತೆ ತಡೆಯಲು ಕೇಂದ್ರ ಸರ್ಕಾರ ಮುಂದಾಗಿದೆ.
ಈ ನಿಷೇಧವು ಕಚ್ಚಾ ಸಕ್ಕರೆ, ಬಿಳಿ ಸಕ್ಕರೆ ಮತ್ತು ಶುದ್ಧೀಕೃತ ಸಕ್ಕರೆಗೆ ಅನ್ವಯಿಸುತ್ತದೆ. ಇವು ITC (HS) ಕೋಡ್‌ಗಳು 1701 14 90 ಮತ್ತು 1701 99 90 ಅಡಿಯಲ್ಲಿ ಬರುತ್ತವೆ.
ಇದಕ್ಕೂ ಮೊದಲು ಸಕ್ಕರೆ ರಫ್ತು “ನಿಯಂತ್ರಣ” ವರ್ಗದಲ್ಲಿದ್ದು, ರಫ್ತಿಗೆ ಸರ್ಕಾರದ ಅನುಮತಿ ಅಗತ್ಯವಿತ್ತು. ಆದರೆ ಹೊಸ ಅಧಿಸೂಚನೆಯಡಿ ರಫ್ತು “ನಿಷೇಧ” ವರ್ಗಕ್ಕೆ ವರ್ಗಾಯಿಸಲಾಗಿದ್ದು, ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ ಭಾರತದಿಂದ ಸಕ್ಕರೆ ಸಾಗಣೆ ಸಂಪೂರ್ಣವಾಗಿ ನಿಲ್ಲಲಿದೆ.
ವ್ಯಾಪಕ ನಿಷೇಧದ ನಡುವೆಯೂ ಸರ್ಕಾರ ಕೆಲವು ವಿನಾಯಿತಿಗಳನ್ನು ನೀಡಿದೆ. CXL ಮತ್ತು TRQ ಕೋಟಾ ವ್ಯವಸ್ಥೆಗಳಡಿ ಯುರೋಪಿಯನ್ ಒಕ್ಕೂಟ ಹಾಗೂ ಅಮೆರಿಕಕ್ಕೆ ಸಕ್ಕರೆ ರಫ್ತು ಮುಂದುವರಿಯಲಿದೆ.
ಭಾರತವು ಜಗತ್ತಿನ ಎರಡನೇ ಅತಿದೊಡ್ಡ ಸಕ್ಕರೆ ಉತ್ಪಾದಕ ಹಾಗೂ ಬ್ರೆಜಿಲ್ ನಂತರದ ಪ್ರಮುಖ ರಫ್ತುದಾರ ರಾಷ್ಟ್ರವಾಗಿರುವುದರಿಂದ, ಈ ಕ್ರಮ ಮಹತ್ವದ್ದಾಗಿದೆ. ಭಾರತದ ರಫ್ತು ನಿಷೇಧವು ಜಾಗತಿಕ ಮಾರುಕಟ್ಟೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಘೋಷಣೆಯ ತಕ್ಷಣವೇ ಜಾಗತಿಕ ಮಾರುಕಟ್ಟೆಗಳು ಪ್ರತಿಕ್ರಿಯಿಸಿವೆ. ನ್ಯೂಯಾರ್ಕ್ ಕಚ್ಚಾ ಸಕ್ಕರೆ ಭವಿಷ್ಯ ವಹಿವಾಟು ದರಗಳು 2 ಪ್ರತಿಶತಕ್ಕಿಂತ ಹೆಚ್ಚು ಏರಿಕೆಯಾದರೆ, ಲಂಡನ್ ಬಿಳಿ ಸಕ್ಕರೆ ಭವಿಷ್ಯ ವಹಿವಾಟು ದರಗಳು 3 ಪ್ರತಿಶತ ಏರಿಕೆ ಕಂಡಿವೆ. ಭಾರತದ ಗೈರುಹಾಜರಿಯಿಂದ ಬ್ರೆಜಿಲ್ ಮತ್ತು ಥೈಲ್ಯಾಂಡ್‌ನ ರಫ್ತುದಾರರಿಗೆ ಲಾಭವಾಗುವ ನಿರೀಕ್ಷೆಯಿದೆ.
Advertisement