

ಕೇಂದ್ರ ಸರ್ಕಾರ ನಿನ್ನೆ ಬುಧವಾರ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ “ಅಗತ್ಯಕ್ಕಿಂತ ಹೆಚ್ಚು” ಸಂಗ್ರಹವಿದೆ ಎಂದು ತಿಳಿಸಿದ್ದು, ದೇಶೀಯ ಬೇಡಿಕೆಯನ್ನು ಪೂರೈಸಲು ಯಾವುದೇ ಸರಬರಾಜು ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದೆ. ಜೊತೆಗೆ, ಕೈಗಾರಿಕಾ ಬಳಕೆಗಾಗಿ ಅನುದಾನಿತ ಚಿಲ್ಲರೆ ಇಂಧನವನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದೆ.
ವರ್ಷಕ್ಕೆ 258.1 ಮಿಲಿಯನ್ ಟನ್ ಶುದ್ಧೀಕರಣ ಸಾಮರ್ಥ್ಯ ಹೊಂದಿರುವ 22 ರಿಫೈನರಿಗಳೊಂದಿಗೆ ಭಾರತವು ವಿಶ್ವದ ನಾಲ್ಕನೇ ಅತಿದೊಡ್ಡ ಶುದ್ಧೀಕರಣ ಕೇಂದ್ರವಾಗಿದೆ. 2025-26 ಹಣಕಾಸು ವರ್ಷದಲ್ಲಿ ದೇಶೀಯ ಬಳಕೆಗೆ ಅಗತ್ಯವಿದ್ದ 243.2 ಮಿಲಿಯನ್ ಟನ್ ಇಂಧನವನ್ನು ಉತ್ಪಾದಿಸಿದ್ದು, ಜೊತೆಗೆ 61.5 ಮಿಲಿಯನ್ ಟನ್ ಪೆಟ್ರೋಲಿಯಂ ಉತ್ಪನ್ನಗಳನ್ನು ರಫ್ತು ಮಾಡಲಾಗಿದೆ ಎಂದು ತೈಲ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ನಿರಂತರ ಸರಬರಾಜು ಖಚಿತಪಡಿಸಲು ಸಾರ್ವಜನಿಕ ಕ್ಷೇತ್ರದ ತೈಲ ಮಾರುಕಟ್ಟೆ ಕಂಪನಿಗಳು (OMCs), ರಾಜ್ಯ ಸರ್ಕಾರಗಳು ಮತ್ತು ಕೈಗಾರಿಕಾ ಸಂಘಟನೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು, ಫೆಡರೇಷನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (FICCI) ಹಾಗೂ ಕಾನ್ಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ (CII) ಜೊತೆ ನಡೆದ ಪರಿಶೀಲನಾ ಸಭೆಯಲ್ಲಿ ತಳಮಟ್ಟದಲ್ಲಿ ಯಾವುದೇ ಪೆಟ್ರೋಲಿಯಂ ಉತ್ಪನ್ನಗಳ ಕೊರತೆ ಇಲ್ಲ ಎಂಬುದು ಕಂಡುಬಂದಿದೆ ಎಂದು ಸಚಿವಾಲಯ ತಿಳಿಸಿದೆ. ಕೆಲವು ಪ್ರದೇಶಗಳಲ್ಲಿ ಕಾಣುತ್ತಿರುವ ತಾತ್ಕಾಲಿಕ ಒತ್ತಡವು ಸರಬರಾಜಿನ ಕೊರತೆಯಿಂದಲ್ಲ, ಬೆಲೆ ವ್ಯತ್ಯಾಸದ ಲಾಭ ಪಡೆಯುವ ವ್ಯವಹಾರ ಕಾರಣದಿಂದಾಗಿದೆ ಎಂದು ಹೇಳಿದೆ.
ಪಶ್ಚಿಮ ಏಷ್ಯಾದ ಉದ್ವಿಗ್ನತೆಗಳಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯ ಪರಿಣಾಮವನ್ನು ಗ್ರಾಹಕರಿಗೆ ನೇರವಾಗಿ ಹೊರೆಯಾಗದಂತೆ ತಡೆಯಲು, ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ದಿನ ಸುಮಾರು 550 ಕೋಟಿ ರೂಪಾಯಿ ನಷ್ಟವನ್ನು ಪೆಟ್ರೋಲ್, ಡೀಸೆಲ್ ಮತ್ತು ಗೃಹಬಳಕೆಯ LPG ಮೇಲೆ ಭರಿಸುತ್ತಿವೆ ಎಂದು ಸರ್ಕಾರ ಹೇಳಿದೆ.
ಈ ಸಬ್ಸಿಡಿ ರಕ್ಷಣೆ ಚಿಲ್ಲರೆ ಮಾರಾಟ ಮಳಿಗೆಗಳ ಮೂಲಕ ಇಂಧನ ಖರೀದಿಸುವ ಮನೆಮಂದಿ, ಪ್ರಯಾಣಿಕರು ಮತ್ತು ರೈತರಿಗೆ ಉದ್ದೇಶಿತವಾಗಿದೆ ಎಂದು ಹೇಳಿಕೆ ತಿಳಿಸಿದೆ. ಆದರೆ, ಕೈಗಾರಿಕಾ ಖರೀದಿದಾರರು ಸಗಟು ಬಳಕೆದಾರರ ಬದಲು ಚಿಲ್ಲರೆ ಪೆಟ್ರೋಲ್ ಬಂಕ್‌ಗಳಿಂದ ಇಂಧನ ಖರೀದಿಸುವ ಮೂಲಕ ಈ ಬೆಲೆ ಸೌಲಭ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದರಿಂದ ಕೆಲವು ಪ್ರದೇಶಗಳಲ್ಲಿ ಕೃತಕ ಒತ್ತಡ ಮತ್ತು ಲಭ್ಯತೆಯ ಸಮಸ್ಯೆ ಉಂಟಾಗುತ್ತಿದೆ ಎಂದು ಸರ್ಕಾರ ಎಚ್ಚರಿಸಿದೆ.
ಯಾವುದೇ ಪೆಟ್ರೋಲಿಯಂ ಉತ್ಪನ್ನದ ಕೊರತೆ ಇಲ್ಲ. ಕೆಲವು ಪ್ರದೇಶಗಳಲ್ಲಿ ಬೆಲೆ ವ್ಯತ್ಯಾಸದ ಲಾಭ ಪಡೆಯುವ ವ್ಯವಹಾರ ಕಾರಣದಿಂದಾಗಿದೆ ಕೊರತೆಯಂತೆ ಕಾಣುತ್ತಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಖಾಸಗಿ ಇಂಧನ ಮಾರಾಟಗಾರರ ಹೈ-ಸ್ಪೀಡ್ ಡೀಸೆಲ್ ಮಾರಾಟ ಈ ತಿಂಗಳಲ್ಲಿ ಸುಮಾರು 38 ಶೇಕಡಾ ಇಳಿಕೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ. ಇದೇ ವೇಳೆ, ಸಾರ್ವಜನಿಕ ಕ್ಷೇತ್ರದ OMCಗಳ ಮೂಲಕ ಕೈಗಾರಿಕಾ ಸಗಟು ಖರೀದಿ ಸುಮಾರು 29 ಶೇಕಡಾ ಕುಸಿದಿದ್ದು, ಆ ಪ್ರಮಾಣದ ಇಂಧನ ಚಿಲ್ಲರೆ ಮಳಿಗೆಗಳಿಗೆ ವರ್ಗಾವಣೆಯಾಗುತ್ತಿದೆ ಎಂದು ವರದಿಯಾಗಿದೆ.
ಇಂತಹ ದುರುಪಯೋಗವನ್ನು ತಡೆಯಲು ಕೈಗಾರಿಕಾ ಸಂಘಟನೆಗಳು ತಮ್ಮ ಸದಸ್ಯರಲ್ಲಿ ಜಾಗೃತಿ ಮೂಡಿಸಬೇಕು ಎಂದು ಸರ್ಕಾರ ಮನವಿ ಮಾಡಿದೆ. ಜೊತೆಗೆ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕಳ್ಳ ಮಾರಾಟ, ಅಕ್ರಮ ಸಂಗ್ರಹಣೆ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ದುರುಪಯೋಗವನ್ನು ತಡೆಯಲು ವಿಶೇಷ ಜಾರಿಗೆ ಪಡೆಗಳನ್ನು ರಚಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದೆ.
ಭಾರತದ ಶುದ್ಧೀಕರಣ ಸಾಮರ್ಥ್ಯ, ಸಾರ್ವಜನಿಕ ಕ್ಷೇತ್ರದ ಇಂಧನ ಕಂಪನಿಗಳ ಸಮನ್ವಯಿತ ಕಾರ್ಯಾಚರಣೆ ಮತ್ತು ಕೇಂದ್ರ-ರಾಜ್ಯಗಳ ಸಹಕಾರವು ದೇಶದ “ಇಂಧನ ಭದ್ರತಾ ವ್ಯವಸ್ಥೆಯ” ಪ್ರಮುಖ ಆಧಾರವಾಗಿದೆ ಎಂದು ಸರ್ಕಾರ ಪುನರುಚ್ಚರಿಸಿದೆ.
ಜನರು ಅಧಿಕೃತ ಮಾಹಿತಿಯನ್ನು ಮಾತ್ರ ನಂಬಬೇಕು ಮತ್ತು ಅಕ್ರಮ ವ್ಯವಹಾರದಿಂದ ಉಂಟಾಗಿರುವ ಗೊಂದಲಗಳನ್ನು ನಿಜವಾದ ಇಂಧನ ಕೊರತೆಯಂತೆ ಪರಿಗಣಿಸಬಾರದು ಎಂದು ಸರ್ಕಾರ ಮನವಿ ಮಾಡಿದೆ.
ಅಗತ್ಯ ವಸ್ತುಗಳ ಕಾಯ್ದೆ ಹಾಗೂ ಸಂಬಂಧಿತ ನಿಯಂತ್ರಣ ಆದೇಶಗಳಡಿ, ಚಿಲ್ಲರೆ ಗ್ರಾಹಕರಿಗಾಗಿ ಉದ್ದೇಶಿತ ಪೆಟ್ರೋಲಿಯಂ ಉತ್ಪನ್ನಗಳನ್ನು ಅಕ್ರಮವಾಗಿ ಸಂಗ್ರಹಿಸುವುದು, ಕಳ್ಳಸಂತೆ ಮಾರಾಟ ಮಾಡುವುದು ಅಥವಾ ಬೇರೆಡೆಗೆ ವರ್ಗಾಯಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಅಂತಾರಾಷ್ಟ್ರೀಯ ಪರಿಸ್ಥಿತಿಯನ್ನು ಸರ್ಕಾರ ನಿಕಟವಾಗಿ ಗಮನಿಸುತ್ತಿದೆ. ಭಾರತದ ಶುದ್ಧೀಕರಣ ಸಾಮರ್ಥ್ಯ, ಸಾರ್ವಜನಿಕ ಕ್ಷೇತ್ರದ ತೈಲ ಮಾರುಕಟ್ಟೆ ಕಂಪೆನಿಗಳು(OMC's) ಶಿಸ್ತಿನ ಕಾರ್ಯಾಚರಣೆ ಹಾಗೂ ಕೇಂದ್ರ, ರಾಜ್ಯಗಳು ಮತ್ತು ಕೈಗಾರಿಕಾ ವಲಯಗಳ ಸಮನ್ವಯವು ಈ ಅವಧಿಯಲ್ಲಿ ಇಂಧನ ಭದ್ರತೆಯ ಕಾರ್ಯನಿರ್ವಹಣಾ ವ್ಯವಸ್ಥೆಯಾಗಿದೆ ಎಂದು ಹೇಳಿದೆ.
ಇರಾನ್ ಯುದ್ಧದಿಂದ ಉಂಟಾದ ಹೆಚ್ಚಿದ ಇಂಧನ ವೆಚ್ಚದ ಭಾಗವನ್ನು ಗ್ರಾಹಕರಿಗೆ ವರ್ಗಾಯಿಸಲಾಗುತ್ತಿರುವ ಹಿನ್ನೆಲೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪ್ರತಿ ಲೀಟರ್‌ಗೆ ಸುಮಾರು 7.5 ರೂಪಾಯಿ ಹೆಚ್ಚಳವಾಗಿದ್ದು, CNG ದರವು ಪ್ರತಿ ಲೀಟರ್‌ಗೆ 6 ರೂಪಾಯಿ ಏರಿಕೆಯಾಗಿದೆ.
Advertisement