

India Most Valuable Conglomerates: ಭಾರತದ ಷೇರು ಮಾರುಕಟ್ಟೆಯಲ್ಲಿ ಇತಿಹಾಸ ಸೃಷ್ಟಿಯಾಗಿದೆ.! ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಸಮೂಹವು ಹೊಸ ದಾಖಲೆ ಬರೆದಿದ್ದು, ಜಿಯೋ ಪ್ಲಾಟ್ಫಾರ್ಮ್ಸ್ ಲಿಸ್ಟಿಂಗ್ ಆದ ಒಂದೇ ದಿನದಲ್ಲಿ ದೇಶದ ಅತ್ಯಂತ ಮೌಲ್ಯಯುತ ಉದ್ಯಮ ಸಮೂಹವಾಗಿ ಹೊರಹೊಮ್ಮಿದೆ. ಅದರಲ್ಲೂ, ರಿಲಯನ್ಸ್ ಮತ್ತು ಜಿಯೋ ಒಟ್ಟು ಮಾರುಕಟ್ಟೆ ಮೌಲ್ಯ ಬರೋಬ್ಬರಿ 30 ಲಕ್ಷ ಕೋಟಿ ರೂಪಾಯಿ ಗಡಿ ದಾಟುವ ಮೂಲಕ ಟಾಟಾ ಹಾಗೂ ಅದಾನಿ ಸಾಮ್ರಾಜ್ಯವನ್ನೇ ಹಿಂದೆಹಾಕಿದೆ. ಹಾಗಾದರೆ,ಭಾರತದ ಟಾಪ್ 10 ಕಂಪನಿಗಳ ಯಾವುವು? ಅವುಗಳ ಮೌಲ್ಯ ಎಷ್ಟು ಕೋಟಿ ಗೊತ್ತಾ? ಇಲ್ಲಿದೆ ಆ ಕುರಿತ ವರದಿ:
ಜಿಯೋ ಲಿಸ್ಟಿಂಗ್ ನಿಂದ ರಿಲಯನ್ಸ್ ಮತ್ತೆ ನಂಬರ್ 1
ಅಕ್ಟೋಬರ್ 28 ರಂದು ಜಿಯೋ ಪ್ಲಾಟ್ ಫಾರ್ಮ್ಸ್ ಲಿಸ್ಟ್ ಆಗಿದ್ದು, ಆ ದಿನವೇ ಶೇ 26 ಕ್ಕಿಂತ ಹೆಚ್ಚು ಏರಿಕೆ ಕಂಡಿದೆ. ಷೇರು 1417 ರೂಪಾಯಿಯಲ್ಲಿ ಕ್ಲೋಸ್ ಆಗಿದ್ದು ಕಂಪನಿಯ ಮಾರುಕಟ್ಟೆ ಮೌಲ್ಯ 13.05 ಲಕ್ಷ ಕೋಟಿ ರೂಪಾಯಿ ತಲುಪಿದೆ. ಇದೇ ದಿನ ರಿಲಯನ್ಸ್ ಇಂಡಸ್ಟ್ರೀಸ್ ಮಾರುಕಟ್ಟೆ ಮೌಲ್ಯ 15.68 ಲಕ್ಷ ಕೋಟಿ ರೂಪಾಯಿ ಆಗಿತ್ತು. ಈ ಎರಡು ಕಂಪನಿಗಳೇ ಒಟ್ಟು ಮೌಲ್ಯದ ಶೇ 95 ರಷ್ಟು ಪಾಲು ಹೊಂದಿವೆ.
ಹಾಗಾದ್ರೆ, 30 ಲಕ್ಷ ಕೋಟಿ ಹೇಗೆ ಬಂತು?
ರಿಲಯನ್ಸ್ ಗೆ ಸಂಬಂಧಿಸಿದ 11 ಲಿಸ್ಟೆಡ್ ಕಂಪನಿಗಳ ಒಟ್ಟು ಮೌಲ್ಯ 30.25 ಲಕ್ಷ ಕೋಟಿ ರೂಪಾಯಿ ಅಂದರೆ ಸುಮಾರು 318 ಬಿಲಿಯನ್ ಡಾಲರ್ ಆಗಿದೆ. ಇದರಲ್ಲಿ ಜಿಯೋ ಫೈನಾನ್ಷಿಯಲ್ ಸರ್ವಿಸಸ್, ನೆಟ್ ವರ್ಕ್ 18, ಜಸ್ಟ್ ಡಯಲ್, ಹಾಥ್ ವೇ ಸೇರಿದಂತೆ ಇತರ 9 ಕಂಪನಿಗಳು ಸುಮಾರು 1.52 ಲಕ್ಷ ಕೋಟಿ ಕೊಡುಗೆ ನೀಡಿವೆ. ಈ ಒಟ್ಟು ಮೌಲ್ಯ ನೆಟ್ ಫ್ಲಿಕ್ಸ್, ಟೊಯೋಟಾ ಮತ್ತು ಎಸ್ಎಪಿ ನಂತಹ ಜಾಗತಿಕ ದೈತ್ಯ ಕಂಪನಿಗಳ ಮೌಲ್ಯಕ್ಕಿಂತಲೂ ಹೆಚ್ಚಾಗಿದೆ.
ಟಾಟಾ ಮತ್ತು ಅದಾನಿ ಸಮೂಹದ ಸ್ಥಿತಿ ಏನು?
ಜಿಯೋ ಲಿಸ್ಟಿಂಗ್ಗೂ ಮುನ್ನ ಟಾಟಾ ಸಮೂಹವೇ ಅಗ್ರಸ್ಥಾನದಲ್ಲಿತ್ತು. ಅಕ್ಟೋಬರ್ 28 ರ ಲೆಕ್ಕಾಚಾರದ ಪ್ರಕಾರ ಟಾಟಾ ಸಮೂಹದ ಒಟ್ಟು ಮಾರುಕಟ್ಟೆ ಮೌಲ್ಯ 25.39 ಲಕ್ಷ ಕೋಟಿ ರೂಪಾಯಿಗೆ ಇಳಿದಿದೆ. ಅದಾನಿ ಸಮೂಹ 16.8 ಲಕ್ಷ ಕೋಟಿ ರೂಪಾಯಿಯೊಂದಿಗೆ ಮೂರನೇ ಸ್ಥಾನದಲ್ಲಿದೆ. ಭಾರ್ತಿ ಟೆಲಿಕಾಂ ಸಮೂಹ 13.98 ಲಕ್ಷ ಕೋಟಿ ಮತ್ತು ಬಜಾಜ್ ಸಮೂಹ 13.32 ಲಕ್ಷ ಕೋಟಿ ಮೌಲ್ಯದೊಂದಿಗೆ ನಂತರದ ಸ್ಥಾನದಲ್ಲಿವೆ. ಟಾಟಾ ಸಮೂಹದ ಮೌಲ್ಯ 2026 ರಲ್ಲಿ ಶೇ 12.9 ರಷ್ಟು ಕುಸಿದಿರುವುದು ಈ ಬದಲಾವಣೆಗೆ ಕಾರಣವಾಗಿದೆ.
ಭಾರತದ ಟಾಪ್ 10 ಕಂಪನಿಗಳ ಪಟ್ಟಿ
ಪ್ರಸ್ತುತ ಅಂಕಿ ಅಂಶಗಳ ಪ್ರಕಾರ ಭಾರತದ ಟಾಪ್ 10 ಅತ್ಯಂತ ಮೌಲ್ಯಯುತ ಕಂಪನಿಗಳ ಪಟ್ಟಿ ಹೀಗಿದೆ...
ರಿಲಯನ್ಸ್ ಇಂಡಸ್ಟ್ರೀಸ್ - 15.67 ಲಕ್ಷ ಕೋಟಿ
ಜಿಯೋ ಪ್ಲಾಟ್‌ಫಾರ್ಮ್ಸ್ - 13.05 ಲಕ್ಷ ಕೋಟಿ
ಭಾರ್ತಿ ಏರ್‌ಟೆಲ್ - 12.16 ಲಕ್ಷ ಕೋಟಿ
ಎಚ್‌ಡಿಎಫ್‌ಸಿ ಬ್ಯಾಂಕ್ - 10.58 ಲಕ್ಷ ಕೋಟಿ
ಐಸಿಐಸಿಐ ಬ್ಯಾಂಕ್ - 9.86 ಲಕ್ಷ ಕೋಟಿ
ಟಿಸಿಎಸ್ - 8.89 ಲಕ್ಷ ಕೋಟಿ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ - 8.83 ಲಕ್ಷ ಕೋಟಿ
ಬಜಾಜ್ ಫೈನಾನ್ಸ್ - 5.71 ಲಕ್ಷ ಕೋಟಿ
ಎಲ್ ಅಂಡ್ ಟಿ - 5.23 ಲಕ್ಷ ಕೋಟಿ
ಎಲ್ಐಸಿ - 4.94 ಲಕ್ಷ ಕೋಟಿ
ಇದರ ನಂತರ ಇನ್ಫೋಸಿಸ್ 4.55 ಲಕ್ಷ ಕೋಟಿಯೊಂದಿಗೆ 11ನೇ ಸ್ಥಾನದಲ್ಲಿದೆ.