

ಮುಂಬೈ: ವಿದೇಶಿ ಹೂಡಿಕೆದಾರರಿಂದ ನಿರಂತರವಾಗಿ ಹರಿದುಬರುತ್ತಿರುವ ಬಂಡವಾಳ ಮತ್ತು ತುಸು ನಿಯಂತ್ರಿತ ಮಟ್ಟದಲ್ಲಿರುವ ಕಚ್ಚಾ ತೈಲ ಬೆಲೆಗಳು ಭಾರತೀಯ ಷೇರು ಮಾರುಕಟ್ಟೆಯಲ್ಲಿ ಆಶಾವಾದ ಮೂಡಿಸಿವೆ. ಹೀಗಾಗಿ ಇಂದು ಶುಕ್ರವಾರ ಆರಂಭಿಕ ವಹಿವಾಟಿನಲ್ಲಿ ಏರಿಳಿತ ಕಂಡಿದ್ದ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಬಳಿಕ ಏರಿಕೆ ದಾಖಲಿಸಿದವು.
30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 33 ಅಂಕಗಳ ಏರಿಕೆಯೊಂದಿಗೆ 79,343.06ರಲ್ಲಿ ವಹಿವಾಟು ನಡೆಸಿತು. 50 ಷೇರುಗಳ ಎನ್ಎಸ್ಇ ನಿಫ್ಟಿ 52.95 ಅಂಕಗಳ ಕುಸಿತದೊಂದಿಗೆ 24,477.40ರಲ್ಲಿ ವಹಿವಾಟು ನಡೆಸಿತು.
ನಂತರ ಎರಡೂ ಪ್ರಮುಖ ಸೂಚ್ಯಂಕಗಳು ಚೇತರಿಸಿಕೊಂಡು ವೇಗ ಪಡೆದುಕೊಂಡವು. ಸೆನ್ಸೆಕ್ಸ್ 443.87 ಅಂಕಗಳ ಏರಿಕೆಯೊಂದಿಗೆ 79,760.10ರಲ್ಲಿ ವಹಿವಾಟು ನಡೆಸಿದರೆ, ನಿಫ್ಟಿ 81 ಅಂಕಗಳ ಏರಿಕೆಯೊಂದಿಗೆ 24,612.85ಕ್ಕೆ ತಲುಪಿತು.
ಸೆನ್ಸೆಕ್ಸ್ನ 30 ಕಂಪನಿಗಳ ಪೈಕಿ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಷೇರುಗಳು ಶೇ.4ಕ್ಕೂ ಹೆಚ್ಚು ಏರಿಕೆ ಕಂಡವು. ಸೆಪ್ಟೆಂಬರ್ಗೆ ಅಂತ್ಯಗೊಂಡ ಎರಡನೇ ತ್ರೈಮಾಸಿಕದಲ್ಲಿ ಕಂಪನಿಯು ತೆರಿಗೆ ನಂತರದ ಏಕೀಕೃತ ಲಾಭದಲ್ಲಿ (PAT) ಶೇ.25ರಷ್ಟು ಹೆಚ್ಚಳ ದಾಖಲಿಸಿ, 4,587.88 ಕೋಟಿ ರೂ. ಲಾಭ ಗಳಿಸಿರುವುದಾಗಿ ನಿನ್ನೆ ಪ್ರಕಟಿಸಿತ್ತು. ವಿಶೇಷವಾಗಿ ವಾಹನ ವಿಭಾಗದ ಉತ್ತಮ ಆದಾಯ ಬೆಳವಣಿಗೆಯಿಂದ ಈ ಸಾಧನೆ ಸಾಧ್ಯವಾಗಿದೆ. ಪಶ್ಚಿಮ ಏಷ್ಯಾ ಸಂಘರ್ಷದಿಂದ ಉಂಟಾಗಿರುವ ಸರಕುಗಳ ಬೆಲೆ ಏರಿಕೆಯ ಒತ್ತಡದ ನಡುವೆಯೂ ಕಂಪನಿ ಈ ಬೆಳವಣಿಗೆ ಕಂಡಿದೆ.
ಟೈಟನ್, ಎಚ್ಸಿಎಲ್ ಟೆಕ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಇನ್ಫೋಸಿಸ್ ಮತ್ತು ಭಾರ್ತಿ ಏರ್ಟೆಲ್ ಷೇರುಗಳೂ ಏರಿಕೆ ಕಂಡವು. ಏಷ್ಯನ್ ಪೇಂಟ್ಸ್, ಪವರ್ ಗ್ರಿಡ್, ಬಜಾಜ್ ಫೈನಾನ್ಸ್ ಮತ್ತು ಭಾರತ್ ಎಲೆಕ್ಟ್ರಾನಿಕ್ಸ್ ಷೇರುಗಳು ಕುಸಿತ ಕಂಡವು.
ಜಾಗತಿಕ ತೈಲ ಮಾನದಂಡವಾಗಿರುವ ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್ಗೆ ಶೇ.2.35ರಷ್ಟು ಏರಿಕೆಯಾಗಿ 100.6 ಡಾಲರ್ಗೆ ತಲುಪಿತು.
ಷೇರು ವಿನಿಮಯ ಕೇಂದ್ರದ ಅಂಕಿಅಂಶಗಳ ಪ್ರಕಾರ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FII) ನಿನ್ನೆ 14,974.68 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.
ಏಷ್ಯಾದ ಮಾರುಕಟ್ಟೆಗಳಲ್ಲಿ ದಕ್ಷಿಣ ಕೊರಿಯಾದ ಕೋಸ್ಪಿ, ಜಪಾನ್ನ ನಿಕ್ಕಿ 225, ಶಾಂಘೈನ ಎಸ್ಎಸ್ಇ ಕಾಂಪೋಸಿಟ್ ಮತ್ತು ಹಾಂಗ್ಕಾಂಗ್ನ ಹ್ಯಾಂಗ್ಸೆಂಗ್ ಸೂಚ್ಯಂಕಗಳು ಗಣನೀಯ ಕುಸಿತದೊಂದಿಗೆ ವಹಿವಾಟು ನಡೆಸಿದವು.
ಅಮೆರಿಕದ ಷೇರು ಮಾರುಕಟ್ಟೆಗಳು ಭಾರಿ ಕುಸಿತದೊಂದಿಗೆ ವಹಿವಾಟು ಅಂತ್ಯಗೊಳಿಸಿದವು. ನಾಸ್ಡಾಕ್ ಕಾಂಪೋಸಿಟ್ ಶೇ.5.52ರಷ್ಟು ಕುಸಿದರೆ, ಎಸ್ಆ್ಯಂಡ್ಪಿ 500 ಶೇ.4.36 ಮತ್ತು ಡೌ ಜೋನ್ಸ್ ಇಂಡಸ್ಟ್ರಿಯಲ್ ಅವರೇಜ್ ಶೇ.3.44ರಷ್ಟು ಕುಸಿತ ದಾಖಲಿಸಿದವು.
ಅಮೆರಿಕದ ಮಾರುಕಟ್ಟೆಗಳಲ್ಲಿ ಕಂಡುಬಂದಿರುವ ಭಾರಿ ಕುಸಿತ ಇಂದು ಬಹುತೇಕ ಇತರ ಮಾರುಕಟ್ಟೆಗಳ ಮೇಲೂ ಪರಿಣಾಮ ಬೀರಲಿದೆ. ಆದರೆ ಭಾರತವು ಇದರ ಪರಿಣಾಮವನ್ನು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಎದುರಿಸುವ ಸಾಧ್ಯತೆಯಿದೆ ಎಂದು ಜಿಯೋಜಿತ್ ಇನ್ವೆಸ್ಟ್ಮೆಂಟ್ಸ್ ಲಿಮಿಟೆಡ್ನ ಮುಖ್ಯ ಹೂಡಿಕೆ ತಂತ್ರಜ್ಞ ವಿ.ಕೆ. ವಿಜಯಕುಮಾರ್ ಹೇಳಿದರು.
ವಿಶೇಷವಾಗಿ ಕೃತಕ ಬುದ್ಧಿಮತ್ತೆ (AI) ಆಧಾರಿತ ಷೇರು ವಹಿವಾಟಿನಲ್ಲಿ ತೀವ್ರ ಕುಸಿತ ಕಂಡಿರುವ ತಂತ್ರಜ್ಞಾನ ವಲಯದ ಹಿನ್ನಡೆಯು ಭಾರತಕ್ಕೆ ಅನುಕೂಲಕರವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಕಳೆದ ಐದು ವಹಿವಾಟು ದಿನಗಳಲ್ಲಿ ಎಫ್ಐಐಗಳು 35,781 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿರುವುದನ್ನು ಗಮನಿಸಬೇಕು. ದೇಶೀಯ ಸಾಂಸ್ಥಿಕ ಹೂಡಿಕೆದಾರರು (ಡಿಐಐ) ಷೇರುಗಳನ್ನು ಮಾರಾಟ ಮಾಡಿ ಲಾಭ ಕಾಯ್ದಿರಿಸುತ್ತಿದ್ದರೂ, ಜಾಗತಿಕ ಮಾರುಕಟ್ಟೆಯ ಬದಲಾದ ಪರಿಸ್ಥಿತಿಯಲ್ಲಿ ಎಫ್ಐಐಗಳ ಖರೀದಿ ಮುಂದುವರಿಯುವ ಸಾಧ್ಯತೆಯಿರುವುದರಿಂದ ಭಾರತೀಯ ಮಾರುಕಟ್ಟೆ ಸ್ಥಿರವಾಗಿ ಉಳಿಯುವ ನಿರೀಕ್ಷೆಯಿದೆ ಎಂದು ವಿಜಯಕುಮಾರ್ ಹೇಳಿದರು.
ಸೆನ್ಸೆಕ್ಸ್ 2,008.61 ಅಂಕಗಳು ಅಥವಾ ಶೇ.2.60ರಷ್ಟು ಏರಿಕೆಯಾಗಿ 79,310.01ರಲ್ಲಿ ವಹಿವಾಟು ಅಂತ್ಯಗೊಳಿಸಿತ್ತು. ನಿಫ್ಟಿ 576 ಅಂಕಗಳು ಅಥವಾ ಶೇ.2.40ರಷ್ಟು ಏರಿಕೆಯಾಗಿ 24,536.60ರಲ್ಲಿ ಕೊನೆಗೊಂಡಿತ್ತು.
ಸತತ ಆರು ವಹಿವಾಟು ಅವಧಿಗಳಲ್ಲಿ ಸೆನ್ಸೆಕ್ಸ್ ಒಟ್ಟು 6,063.98 ಅಂಕಗಳು ಅಥವಾ ಶೇ.8.27ರಷ್ಟು ಏರಿಕೆ ಕಂಡಿದ್ದರೆ, ನಿಫ್ಟಿ 1,837.75 ಅಂಕಗಳು ಅಥವಾ ಶೇ.8ರಷ್ಟು ಏರಿಕೆ ದಾಖಲಿಸಿದೆ.