

ಹೊಸದಾಗಿ ಬಿಡುಗಡೆಯಾದ ಐಫೋನ್ 18 ಪ್ರೊ ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್ ಖರೀದಿಸಲು ದೇಶಾದ್ಯಂತ ಆ್ಯಪಲ್ ಸ್ಟೋರ್‌ಗಳ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಜಮಾಯಿಸಿದ್ದು, ಓರ್ವ ಗ್ರಾಹಕರು ಐಫೋನ್ ಬಿಡುಗಡೆ ಸಮಾರಂಭವನ್ನು ‘ಹಬ್ಬ’ಕ್ಕೆ ಹೋಲಿಸಿದ್ದಾರೆ.
ಐಫೋನ್ 18 ಪ್ರೊ ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್ ಇಂದು ಶುಕ್ರವಾರ ದೇಶಾದ್ಯಂತ ಮಾರಾಟಕ್ಕೆ ಬಂದಿದ್ದು, ನೋಯ್ಡಾ, ಬೆಂಗಳೂರು ಮತ್ತು ಮಹಾರಾಷ್ಟ್ರದ ಆ್ಯಪಲ್ ಸ್ಟೋರ್‌ಗಳಲ್ಲಿ ಗ್ರಾಹಕರು ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಂತು ನೂತನ ಫೋನ್ ಖರೀದಿಸಲು ಉತ್ಸುಕತೆ ತೋರಿದರು.
ಐಫೋನ್ 7ರಿಂದಲೂ ಐಫೋನ್ ಖರೀದಿಸುತ್ತಿರುವ ಬೆಂಗಳೂರಿನ ರಾಹುಲ್ ಎಂಬ ಗ್ರಾಹಕರು ಬೆಳಗ್ಗೆ ಸುಮಾರು 5 ಗಂಟೆಗೆ ಆ್ಯಪಲ್ ಸ್ಟೋರ್‌ಗೆ ಬಂದಿದ್ದು, ಪ್ರತಿವರ್ಷದ ಐಫೋನ್ ಬಿಡುಗಡೆ ತನಗೆ ‘ಹಬ್ಬದಂತಿದೆ’ ಎಂದು ಹೇಳಿದ್ದಾರೆ.
ನಾನು ಬೆಳಗ್ಗೆ ಸುಮಾರು 5 ಗಂಟೆಯಿಂದ ಇಲ್ಲಿದ್ದೇನೆ. ದೊಡ್ಡ ಸರತಿ ಸಾಲು ಇತ್ತು. ಹರಿಯಾಣ, ದೆಹಲಿ ಮತ್ತು ಮುಂಬೈನಿಂದಲೂ ಜನರು ಐಫೋನ್ ಖರೀದಿಸಲು ಬಂದಿದ್ದಾರೆ. ನಾನು ಬಹಳ ವರ್ಷಗಳಿಂದ ಐಫೋನ್ ಖರೀದಿಸುತ್ತಿದ್ದೇನೆ. ನನ್ನ ಮೊದಲ ಐಫೋನ್ ಐಫೋನ್ 7 ಆಗಿತ್ತು. ಅದಾದ ಬಳಿಕ ನಿರಂತರವಾಗಿ ಐಫೋನ್ ಖರೀದಿಸುತ್ತಿದ್ದೇನೆ, ಐಫೋನ್ ಬಿಡುಗಡೆ ನನಗೆ ಹಬ್ಬದಂತಿದೆ. ಪ್ರತಿವರ್ಷವೂ ಐಫೋನ್ ಖರೀದಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ನೋಯ್ಡಾದಲ್ಲಿ ಹೊಸ ಐಫೋನ್ ಮಾದರಿಗಳ ಅಧಿಕೃತ ಮಾರಾಟ ಆರಂಭವಾಗುತ್ತಿದ್ದಂತೆ ಡಿಎಲ್‌ಎಫ್ ಮಾಲ್‌ನಲ್ಲಿರುವ ಆ್ಯಪಲ್ ಸ್ಟೋರ್‌ಗೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರು.
ಪಂಜಾಬ್‌ನಿಂದ ಬಂದಿದ್ದ ಮತ್ತೊಬ್ಬ ಖರೀದಿದಾರರು ಬೆಳಗ್ಗೆ 6 ಗಂಟೆಯಿಂದಲೇ ಸರತಿ ಸಾಲಿನಲ್ಲಿ ಕಾಯುತ್ತಿದ್ದುದಾಗಿ ತಿಳಿಸಿದರು. ಮುಂಚಿತವಾಗಿ ಬುಕ್ಕಿಂಗ್ ಮಾಡಿದ್ದರಿಂದ ಮೊದಲ ಐಫೋನ್ 18 ಪ್ರೊ ಮ್ಯಾಕ್ಸ್ ನ್ನು ಪಡೆಯಲು ಸಾಧ್ಯವಾಯಿತು.