ಆಪಲ್ ಕಂಪೆನಿಯಿಂದ ಮೊದಲ ಫೋಲ್ಡಬಲ್‌ iPhone 18 ಬಿಡುಗಡೆ; ಭಾರತದಲ್ಲಿ ಇದರ ಬೆಲೆ ಎಷ್ಟು ಗೊತ್ತಾ?

ಮಡಚಬಹುದಾದ iPhone 18 ಸರಣಿ ಅಕ್ಟೋಬರ್ 23ರಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.
iPhone 18
ಐಫೋನ್ 18
Updated on

ಅಮೆರಿಕದ ತಂತ್ರಜ್ಞಾನ ದಿಗ್ಗಜ ಆಪಲ್ ನಿನ್ನೆ ಬುಧವಾರ iPhone 18 ಸರಣಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಕಂಪನಿಯ ಮೊದಲ ಫೋಲ್ಡಬಲ್‌ ಅಂದರೆ ಮಡಚಬಹುದಾದ ಸ್ಮಾರ್ಟ್‌ಫೋನ್ iPhone Duo ಕೂಡ ಸೇರಿದ್ದು, ಇದರ ಆರಂಭಿಕ ಬೆಲೆ 1,999 ಡಾಲರ್ ಆಗಿದೆ. ಅಂದರೆ ಭಾರತದ ಕರೆನ್ಸಿಯಲ್ಲಿ ಆರಂಭಿಕ ಬೆಲೆ 1,90,253.75  ಆಗಿದ್ದು, ಮಡಚಬಹುದಾದ iPhone ಅಕ್ಟೋಬರ್ 23ರಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

ಭಾರತದಲ್ಲಿ iPhone Duo ಬೆಲೆ 256GB ಮಾದರಿಗೆ 2,99,900ರಿಂದ ಆರಂಭವಾಗಲಿದೆ ಎಂದು ವರದಿ ಹೇಳುತ್ತದೆ. 512GB ಮಾದರಿಯ ಬೆಲೆ 3,24,900 ರೂ ಆಗಿದ್ದರೆ, 1TB ಮಾದರಿ 3,74,900 ರೂಪಾಯಿಗೆ ಲಭ್ಯವಾಗಲಿದೆ. ಟಾಪ್‌ಎಂಡ್ 2TB ಮಾದರಿಗೆ 4,49,900 ರೂ ಬೆಲೆ ನಿಗದಿಪಡಿಸಲಾಗಿದೆ. ಈ ಮೂಲಕ ಇದು ಆಪಲ್‌ನ ಪ್ರೀಮಿಯಂ ಮಡಚಬಹುದಾದ ಸ್ಮಾರ್ಟ್‌ಫೋನ್ ಆಗಿ ಹೊರಹೊಮ್ಮಿದೆ.

ಟಿಮ್ ಕುಕ್ ಅವರಿಂದ ಸೆಪ್ಟೆಂಬರ್ 1ರಂದು ಆಪಲ್‌ನ ಸಿಇಒ ಹುದ್ದೆಯನ್ನು ವಹಿಸಿಕೊಂಡಿರುವ ಕಂಪನಿಯ ನೂತನ ಸಿಇಒ ಜಾನ್ ಟರ್ನಸ್, iPhone Duo ಸಂಪೂರ್ಣ ಹೊಸ ವಿನ್ಯಾಸದ iPhone ಆಗಿದ್ದು, ಕಂಪನಿಯ ಈಗಿರುವ ಸಾಧನಗಳ ಪರಿಚಿತ ಅನುಭವವನ್ನು ಉಳಿಸಿಕೊಂಡಿದೆ ಎಂದು ಹೇಳಿದ್ದಾರೆ.

iPhone 18
ಆಂಡ್ರಾಯ್ಡ್ ಬಳಕೆದಾರರೇ ಎಚ್ಚರ! ನಿಮ್ಮ ಫೋನ್‌ನಲ್ಲೂ ಇರಬಹುದು ನಕಲಿ ಆ್ಯಪ್: ಬ್ಯಾಂಕ್ ಖಾತೆ ಖಾಲಿಯಾಗುವ ಮುನ್ನ ತಕ್ಷಣ ಹೀಗೆ ಡಿಲೀಟ್ ಮಾಡಿ!

ದೊಡ್ಡ ಡಿಸ್‌ಪ್ಲೇ ಒದಗಿಸುವುದರ ಜೊತೆಗೆ ಹಿಡಿದುಕೊಳ್ಳಲು ಮತ್ತು ಬಳಸಲು ಅನುಕೂಲವಾಗುವಂತೆ iPhone Duo ವಿನ್ಯಾಸಗೊಳಿಸಲಾಗಿದೆ. ಸಾಧನವನ್ನು ಮಡಚಿದಾಗ ಅದರ ಗಾತ್ರ ಸರಿಸುಮಾರು ಪಾಸ್‌ಪೋರ್ಟ್‌ನಷ್ಟಿರುತ್ತದೆ. ಕೈಯಲ್ಲಿ ಹಿಡಿದಾಗ ಉತ್ತಮ ಅನುಭವ ನೀಡುವಂತೆ ಹಾಗೂ ಒಂದು ಕೈಯಿಂದಲೇ ಬಳಸಲು ಅನುಕೂಲವಾಗುವಂತೆ ಇದರ ವಿನ್ಯಾಸ ರೂಪಿಸಲಾಗಿದೆ.

ಈ ಬಾರಿ ಆಪಲ್ iPhone 18 Pro ಮತ್ತು iPhone 18 Pro Max ಮಾದರಿಗಳನ್ನು ಮಾತ್ರ ಬಿಡುಗಡೆ ಮಾಡಿದ್ದು, ಮೂಲ iPhone 18 ಮಾದರಿಯನ್ನು ಬಿಡುಗಡೆ ಮಾಡಿಲ್ಲ. ಸಾಮಾನ್ಯವಾಗಿ ಎರಡು ಮೂಲ ಮಾದರಿಗಳು ಮತ್ತು ಎರಡು Pro ಮಾದರಿಗಳನ್ನು ಬಿಡುಗಡೆ ಮಾಡುತ್ತಿದ್ದ ಕಂಪನಿಯ iPhone ತಂತ್ರಗಾರಿಕೆಯಲ್ಲಿ ಇದೊಂದು ಮಹತ್ವದ ಬದಲಾವಣೆಯಾಗಿದೆ.

ಆಪಲ್ ತನ್ನ Pro ಮಾದರಿಗಳ ಬೆಲೆಯನ್ನೂ ಹೆಚ್ಚಿಸಿದೆ. ಭಾರತದಲ್ಲಿ iPhone 18 Pro ಆರಂಭಿಕ ಬೆಲೆ 1,64,900 ರೂಪಾಯಿ ಆಗಿದ್ದರೆ, iPhone 18 Pro Max ಬೆಲೆ 1,79,900 ರೂಪಾಯಿಯಿಂದ ಆರಂಭವಾಗಲಿದೆ.

iPhone 18
Phone Storage ಫುಲ್ ಆಗಿದ್ಯಾ? ಯಾವುದೇ ಆ್ಯಪ್ ಡಿಲೀಟ್ ಮಾಡದೆ ಸ್ಟೋರೇಜ್ ಖಾಲಿ ಮಾಡುವ ಸಿಂಪಲ್ ಹ್ಯಾಕ್ಸ್ ಇಲ್ಲಿದೆ

iPhone 18 Pro ಮತ್ತು iPhone 18 Pro Max ಮಾದರಿಗಳು 256GB, 512GB, 1TB ಮತ್ತು 2TB ಸ್ಟೋರೇಜ್ ಆಯ್ಕೆಗಳಲ್ಲಿ ಲಭ್ಯವಾಗಲಿವೆ. ಎರಡೂ ಮಾದರಿಗಳು Burgundy, Glacier, Silver ಮತ್ತು Black ಬಣ್ಣಗಳಲ್ಲಿ ಬಿಡುಗಡೆಯಾಗಿವೆ.

Apple Watch Series 12 ಬೆಲೆ 56,900 ರೂಪಾಯಿಯಿಂದ ಆರಂಭವಾಗಲಿದೆ. ಸೆಪ್ಟೆಂಬರ್ 9ರಿಂದ ಮುಂಗಡ ಬುಕ್ಕಿಂಗ್ ಆರಂಭವಾಗಿರುವ AirPods 5 ಬೆಲೆ 14,900 ರೂಪಾಯಿ ಆಗಿದ್ದು, ಸೆಪ್ಟೆಂಬರ್ 18, ಶುಕ್ರವಾರದಿಂದ ಮಳಿಗೆಗಳಲ್ಲಿ ಲಭ್ಯವಾಗಲಿದೆ.

ಸ್ಮಾರ್ಟ್‌ಫೋನ್ ತಯಾರಕರು ಹೆಚ್ಚಿನ ಬಿಡಿಭಾಗಗಳ ವೆಚ್ಚವನ್ನು ಎದುರಿಸುತ್ತಿರುವ ಸಂದರ್ಭದಲ್ಲಿ, ಅದರಲ್ಲೂ ಸುಧಾರಿತ ಚಿಪ್‌ಗಳು ಮತ್ತು ಇತರ ಪ್ರಮುಖ ಹಾರ್ಡ್‌ವೇರ್‌ಗಳ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಈ ಬೆಲೆ ಏರಿಕೆಯಾಗಿದೆ.

ಸ್ಯಾಮ್‌ಸಂಗ್ ಸೇರಿದಂತೆ ಇತರ ಪ್ರಮುಖ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳು ತಮ್ಮ ಪ್ರೀಮಿಯಂ ಸಾಧನಗಳ ಬೆಲೆಗಳನ್ನು ಹೆಚ್ಚಿಸಿರುವ ಬೆನ್ನಲ್ಲೇ ಆಪಲ್ ಕೂಡ ಬೆಲೆ ಏರಿಕೆ ಮಾಡಿದೆ. ತಂತ್ರಜ್ಞಾನ ಮತ್ತು ಬಿಡಿಭಾಗಗಳ ಹೆಚ್ಚುತ್ತಿರುವ ವೆಚ್ಚ ಇದಕ್ಕೆ ಕಾರಣವಾಗಿದೆ.

ವೈಶಿಷ್ಟ್ಯಗಳ ವಿಚಾರದಲ್ಲಿ ಆಪಲ್ iPhone 18 Proನಲ್ಲಿ ಹಲವು ಪ್ರಮುಖ ಅಪ್‌ಗ್ರೇಡ್‌ಗಳನ್ನು ಮಾಡಿದೆ. ಹೊಸ ತಲೆಮಾರಿನ ಮಾದರಿಯಲ್ಲಿ ಬ್ಯಾಟರಿ ಬಾಳಿಕೆ ಮತ್ತು ಕ್ಯಾಮೆರಾ ಕಾರ್ಯಕ್ಷಮತೆಯಲ್ಲಿ ಗಮನಾರ್ಹ ಸುಧಾರಣೆಗಳನ್ನು ಮಾಡಲಾಗಿದೆ.

ಬ್ಯಾಟರಿ ವಿಚಾರದಲ್ಲಿ iPhone 18 Proನಲ್ಲಿ ಬ್ಯಾಟರಿ ದಕ್ಷತೆಯನ್ನು ಸಾಧಿಸಲಾಗಿದೆ. ಹೊಸ A20 Pro ಸಿಲಿಕಾನ್, ಸಿಸ್ಟಂ ಮಟ್ಟದ ಸುಧಾರಣೆಗಳು ಮತ್ತು ಮರುವಿನ್ಯಾಸಗೊಳಿಸಲಾದ ಬ್ಯಾಟರಿ ಇದಕ್ಕೆ ನೆರವಾಗಿವೆ. ಗಾತ್ರದಲ್ಲಿ ಚಿಕ್ಕದಾಗಿದ್ದರೂ iPhone 18 Pro, iPhone 17 Pro Maxನಷ್ಟೇ ಇಡೀ ದಿನದ ಬ್ಯಾಟರಿ ಬಾಳಿಕೆಯನ್ನು ಒದಗಿಸುತ್ತದೆ ಎಂದು ಆಪಲ್ ಹೇಳಿದೆ.

iPhone 18 Proನಲ್ಲಿ ಗರಿಷ್ಠ 36 ಗಂಟೆಗಳವರೆಗೆ ವೀಡಿಯೊ ಪ್ಲೇಬ್ಯಾಕ್ ಸೌಲಭ್ಯವಿದ್ದರೆ, iPhone 18 Pro Maxನಲ್ಲಿ 45 ಗಂಟೆಗಳವರೆಗೆ ವೀಡಿಯೊ ಪ್ಲೇಬ್ಯಾಕ್ ಲಭ್ಯವಾಗಲಿದೆ. iPhone ಇತಿಹಾಸದಲ್ಲೇ ಬ್ಯಾಟರಿ ಬಾಳಿಕೆಯಲ್ಲಿ ಇದುವರೆಗಿನ ಅತಿದೊಡ್ಡ ಹೆಚ್ಚಳ ಇದಾಗಿದೆ ಎಂದು ಆಪಲ್ ಹೇಳಿದೆ.

ಕ್ಯಾಮೆರಾ ವ್ಯವಸ್ಥೆಯಲ್ಲೂ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಹಲವು ವರ್ಷಗಳಲ್ಲೇ ಕ್ಯಾಮೆರಾದಲ್ಲಿ ಮಾಡಲಾಗಿರುವ ಅತಿದೊಡ್ಡ ಸುಧಾರಣೆ ಇದಾಗಿದೆ ಎಂದು ಆಪಲ್ ಹೇಳಿದೆ. iPhone 18 Proನಲ್ಲಿ ಹೊಸ 48 ಮೆಗಾಪಿಕ್ಸೆಲ್ Fusion ಮುಖ್ಯ ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಇದರಲ್ಲಿ ವೇರಿಯಬಲ್ ಅಪರ್ಚರ್ ಸೌಲಭ್ಯವಿದೆ. ಇದರಿಂದ ಬೆಳಕಿನ ಪ್ರಮಾಣ ಮತ್ತು ಡೆಪ್ತ್ ಆಫ್ ಫೀಲ್ಡ್ ಮೇಲೆ ಬಳಕೆದಾರರಿಗೆ ಹೆಚ್ಚಿನ ನಿಯಂತ್ರಣ ದೊರೆಯಲಿದೆ.

ಹೊಸ iPhone ಮಾದರಿಗಳ ಜೊತೆಗೆ ಆಪಲ್ Apple Watch Series 12 ಮತ್ತು Apple Watch Ultra 4ನ್ನೂ ಪರಿಚಯಿಸಿದೆ. ಕಂಪನಿಯು 129 ಡಾಲರ್ ಬೆಲೆಯ AirPods 5ನ್ನೂ ಬಿಡುಗಡೆ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com