ನಂಬಿಕೆ V/S ಪೀಕೆ

ಅದೊಂದು ಧಾರ್ಮಿಕ ಸಭೆ. ಧರ್ಮಗುರು, ರಾಜಕಾರಣಿಯೊಬ್ಬನಿಗೆ ವೇದಿಕೆ ಮೇಲೆ...
ಆಮೀರ್‌ಖಾನ್ ಪೀಕೆ ಚಿತ್ರ
ಆಮೀರ್‌ಖಾನ್ ಪೀಕೆ ಚಿತ್ರ

ದೃಶ್ಯ 1
ಅದೊಂದು ಧಾರ್ಮಿಕ ಸಭೆ. ಧರ್ಮಗುರು, ರಾಜಕಾರಣಿಯೊಬ್ಬನಿಗೆ ವೇದಿಕೆ ಮೇಲೆ ನಿಲ್ಲಿಸಿಕೊಂಡು ಗಾಳಿಯಲ್ಲಿ ಆತನ ಸುತ್ತಲೂ ಕೈಯ್ಯಾಡಿಸುತ್ತಾ ಒಂದು ಚಿನ್ನದ ಸರವನ್ನು ಸೃಷ್ಟಿಸಿ, ರಾಜಕಾರಣಿಯ ಕೊರಳಿಗೆ ಹಾಕುತ್ತಾನೆ. ಇಡೀ ಭಕ್ತಜನ ಸ್ತೋಮ ಮುಗಿಲು ಮುಟ್ಟುವಂತೆ ಚಪ್ಪಾಳೆ ಹೊಡೆಯುತ್ತದೆ. ಅಲ್ಲಪರಲ್ಲಿ, ಭಕ್ತ ಸಮೂಹದಿಂದ ವ್ಯಕ್ತಿಯೊಬ್ಬ ಎದ್ದು ಬಾಬಾರನ್ನು ಪ್ರಶ್ನೆ ಮಾಡುತ್ತಾನೆ.

'ನೀವು ಹೀಗೆ ಗಾಳಿಯಲ್ಲಿ ಕೈಯ್ಯಾಡಿಸಿ ಚಿನ್ನದ ಸರ ಸೃಷ್ಟಿಸುತ್ತೀರಾದರೆ, ನಮ್ಮ ದೇಶದ ಬಡತನ ನೀಗುವಷ್ಟು ಸಂಪತ್ತು ನೀವೇಕೆ ಸೃಷ್ಟಿಸಬಾರದು? ಅಷ್ಟೇ ಏಕೆ, ಸಂಪತ್ತನ್ನು ಸೃಷ್ಟಿಸುವ ನೀವೇಕೆ ಭಕ್ತರಿಂದ ದಾನ ಪಡೆಯುತ್ತೀರಿ?' ಎಂದು ಪ್ರಶ್ನಿಸುತ್ತಾನೆ.

ದೃಶ್ಯ 2

ಅಲ್ಲೊಂದು ಕಾಲೇಜು. ಆ ದಿನ ಪರೀಕ್ಷೆ. ಅಂದು ಬೆಳಿಗ್ಗೆಯೇ ಕಾಲೇಜು ಆವರಣದ ಒಂದು ಮರದ ಕೆಳಗೆ ತ್ರಿಕೋನಾಕಾರದ ಕಲ್ಲಿನ್ನಿಟ್ಟು ಅದಕ್ಕೆ ಅರಿಶಿನ ಕುಂಕುಮ ಬಳಿಯಲಾಗುತ್ತದೆ. ಅದರ ಮುಂದೆ ಒಂದಿಷ್ಟು ಹಣ ಹಾಕಲಾಗುತ್ತದೆ. ಅಷ್ಟು ಸಾಕು. ಕಾಲೇಜಿಗೆ ಆಗಮಿಸುವ ಹಲವಾರು ವಿದ್ಯಾರ್ಥಿಗಳು ಆ ಕಲ್ಲಿಗೆ ದೀರ್ಘ ದಂಡ ನಮಸ್ಕಾರ ಹಾಕುತ್ತಾರೆ, ಪರೀಕ್ಷೆ ಪಾಸು ಮಾಡಿಸೆಂದು ಬೇಡಿ ಹೂವು, ದಕ್ಷಿಣೆ ಎಲ್ಲವನ್ನೂ ಹಾಕುತ್ತಾರೆ! ಇದನ್ನೂ ಅಲ್ಲೊಬ್ಬ ಪ್ರಶ್ನೆ ಮಾಡುತ್ತಾನೆ. ಆದರೆ, ಅವರಿಗೆ ಸಿಗುವುದು ಕಪಾಳ ಮೋಕ್ಷ!

ಇಡೀ 'ಪಿಕೆ' ಚಿತ್ರ ಗಿರಗಿಟ್ಲೆ ಹಾಕೋದು ಇಂಥ ಆಸ್ತಿಕತೆ-ನಾಸ್ತಿಕತೆ ನಡುವಿನ ತಿಕ್ಕಾಟಗಳ ಬಗ್ಗೆ, ಹುಟ್ಟಿದಾಗಿನಿಂದ ನಮ್ಮ ಜೀವನಗಳಲ್ಲಿ ಬೇರೂರಿರುವ ಧರ್ಮ, ದೇವರು ಎಂಬ ನಂಬಿಕೆಗಳ ಸತ್ಯಾಸತ್ಯತೆಗಳ ಬಗ್ಗೆ ಹಾಗೂ ಶತಶತಮಾನಗಳಿಂದ ಚರ್ಚೆಯಲ್ಲಿರುವ, ಹಲವಾರು ವಿವಾದಗಳಿಗೂ ಕಾರಣವಾಗಿರುವ ದೇವರ ಅಸ್ತಿತ್ವದ ಬಗ್ಗೆ. ಇದನ್ನು ಪ್ರಶ್ನಿಸುವ ಪಾತ್ರದ ಹೆಸರೇ 'ಪಿಕೆ'.

ಈ ಭೂಮಿಯನ್ನು, ಇಲ್ಲಿನ ಜನಜೀವನವನ್ನು ಅಧ್ಯಯನ ಮಾಡುವ ಸಲುವಾಗಿ ಒಬ್ಬ ಅನ್ಯ ಗ್ರಹ ಜೀವಿಯನ್ನು (ಏಲಿಯನ್) ಇಲ್ಲಿಗೆ ಕಳುಹಿಸಲಾಗುತ್ತದೆ. ಹಾಗೆ ಬಂದವನ ಕೊರಳಲ್ಲಿ ಮಿನುಗುವ ಲಾಕೆಟ್ ಇರುತ್ತದೆ. ಆ ಲಾಕೆಟ್, ರಿಮೋಟ್ ಕಂಟ್ರೋಲ್ ಆಗಿದ್ದು, ಆ ಮೂಲಕ ಅವನು ವಾಪಸ್ ಹೋಗಬೇಕೆನಿಸಿದಾಗ ಆ ರಿಮೋಟ್ ಮೂಲಕ ಸಂದೇಶ ಕಳುಹಿಸಿ, ತನ್ನ ಗ್ರಹದ ಆಕಾಶಕಾಯ ತರಿಸಿಕೊಂಡು ವಾಪಸಾಗಬೇಕಿರುತ್ತದೆ.

ಆದರೆ, ಆ ಲಾಕೆಟ್ ಅನ್ನು ಒಬ್ಬ ಅಪಹರಿಸಿಕೊಂಡು ಹೋಗುತ್ತಾನೆ. ತನ್ನ ಲಾಕೆಟ್ ಹುಡುಕುವ ಯತ್ನದಲ್ಲಿ ತೊಡಗುವ ಏಲಿಯನ್, ಪೊಲೀಸರು, ಜನ ಸಾಮಾನ್ಯರನ್ನು ಕೇಳಿ ಕೇಳಿ ಸುಸ್ತಾಗುತ್ತಾನೆ. ಅವರ ಪಡಿಪಾಟಲು ನೋಡಿದ ಕೆಲವರು ದೇವರಿದ್ದಾನೆ, ನಿನಗೆ ನಿನ್ನ ಲಾಕೆಟ್ ಸಿಕ್ಕೇ ಸಿಗುತ್ತೆ ಎನ್ನುತ್ತಾರೆ.

ಇನ್ನೂ ಕೆಲವರು ದೇವರಲ್ಲಿ ಬೇಡು ಆ ಲಾಕೆಟ್ ಸಿಗುತ್ತೆ ಎನ್ನುತ್ತಾರೆ. ಆಗ ಅವನಿಗೆ, 'ಈ ಭೂಮಿಯ ಜನರ ಕಷ್ಟವನ್ನು ನೀಗಿಸಲು ಒಬ್ಬಾತನಿದ್ದಾನೆ. ಅವನನ್ನು ಬೇಡಿಕೊಂಡರೆ, ಕೇಳಿದ್ದೆಲ್ಲಾ ಸಿಗುತ್ತೆ' ಅನ್ನೋ ಭಾವ ಮೂಡುತ್ತದೆ. ಅಲ್ಲಿಂದ ಶುರವಾಗುತ್ತೆ ಅವರ ಅನ್ವೇಷಣೆ.

ಈ ಅನ್ವೇಷಣೆಯಲ್ಲಿ, ಅವನು ಧರ್ಮ, ದೇವರು, ವ್ರತ, ಪೂಜೆ, ಪುನಸ್ಕಾರ ಮುಂತಾದ ವಿಚಾರಗಳನ್ನು ಒಂದೊಂದಾಗಿ ಅರಿಯುವುದರ ಜೊತೆಗೆ, ಧರ್ಮದ ವಿಚಾರದಲ್ಲಿ ಜನರ ನಂಬಿಕೆಯೊಡನೆ ಆಟವಾಡುವ, ಅವರನ್ನು ಮೂರ್ಖರನ್ನಾಗಿಸುವ ಕುತಂತ್ರಿ ಸ್ವಾಮೀಜಿಗಳೂ ಆತನಿಗೆ ಕಾಣುತ್ತಾರೆ. ಧರ್ಮದ ಹೆಸರಿನಲ್ಲಿ ಹಿಂಸೆಗಿಳಿಯುವವರ ಕ್ರೌರ್ಯವೂ ಕಾಣುತ್ತದೆ.

ದೇವರು ಒಳ್ಳೆಯದು ಮಾಡ್ತಾನೆಂದು ಅನ್ನೋ ನಂಬಿಕೆಯಿಂದ ಮಾಡಲೇಬೇಕಾದ ಕೆಲಸ-ಕಾರ್ಯಗಳನ್ನು ಬಿಟ್ಟು ಗುಡಿಗಂಡಾರ ಸುತ್ತಿ ಸಮಯ ಹಾಳು ಮಾಡುವ ಭಕ್ತರೂ ಸಿಗುತ್ತಾರೆ. ಈ ಎಲ್ಲವನ್ನೂ ಅವನು ಪ್ರಶ್ನಿಸುತ್ತಾನೆ. ನಂಬಿಕೆಗಳ ಪ್ರತಿಯೊಂದು ಮುಖಗಳನ್ನು ವಾಸ್ತವತೆಯ ದೃಷ್ಟಿಕೋನದಿಂದ ಪರೀಕ್ಷಿಸುತ್ತಾನೆ. ಸರಿ ಎನಿಸಿದ್ದನ್ನು ಒಪ್ಪಿಕೊಳ್ಳುತ್ತಾನೆ, ತಪ್ಪು ಎನಿಸಿದ್ದನ್ನು ಗಟ್ಟಿಯಾಗಿ ಹೇಳುತ್ತಾನೆ. ಈತನ ಈ ಸತ್ಯ ಪರೀಕ್ಷೆಗಳಿಗೆ ನೆರವಾಗುವ ಟಿವಿ ಪತ್ರಕರ್ತೆ ಆತನ ದನಿಯನ್ನು ವಿಶ್ವಕ್ಕೇ ಮುಟ್ಟಿಸುತ್ತಾಳೆ.

ಆದರೆ, ಕಥೆ ಇಷ್ಟಕ್ಕೇ ಮುಗಿಯೋಲ್ಲ. ಚಿತ್ರದಲ್ಲಿ ಇನ್ನೂ, ಹಲವಾರು ವಿಶೇಷಗಳಿವೆ. 'ಪಿಕೆ'ಯ ಮಾತುಗಳನ್ನು ಜನರು ಅರ್ಥ ಮಾಡಿಕೊಳ್ತಾರಾ? ಅದರಿಂದೇನಾದರೂ ಬದಲಾವಣೆ ಆಗುತ್ತಾ? 'ಪಿಕೆ'ಗೆ ಆತನ ಲಾಕೆಟ್ ಸಿಗುತ್ತಾ? ಅದರ ಮೂಲಕ ಆತ ತನ್ನ ಗ್ರಹಕ್ಕೆ ವಾಪಸ್ ಹೋಗ್ತಾನಾ? ಎಂಬುದು ಸಸ್ಪೆನ್ಸ್. ಇದನ್ನು ತಿಳಿಯಬೇಕಾದರೆ, ನೀವು ಚಿತ್ರ ನೋಡಲೇಬೇಕು.

ಈ ಎಲ್ಲಕ್ಕಿಂತ ಮುಖ್ಯವಾಗಿ ಗಮನ ಸೆಳೆಯೋದು ಚಿತ್ರದ ಸಂಭಾಷಣೆ. ತಿಳಿ ಹಾಸ್ಯದ ಮೂಲಕ, ದೇವರ ಹೆಸರಿನಲ್ಲಿ ನಡೆಯುವ ಅನಾಚಾರಗಳನ್ನು, ಅರ್ಥವಿಲ್ಲದ ಆಚರಣೆಗಳನ್ನು ಪ್ರಶ್ನಿಸುವ ಸಂಭಾಷಣೆ ಪ್ರೇಕ್ಷಕರಿಗೆ ಕಚಗುಳಿ ಇಡುತ್ತವೆ. ಅಲ್ಲದೆ, ನೋಡುಗರ ನಂಬಿಕೆಗಳನ್ನು ತಮ್ಮ ತಮ್ಮಲ್ಲೇ ಒಮ್ಮೆ ಪ್ರಶ್ನಿಸುವಂತೆ ಮಾಡುತ್ತವೆ.

ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಗೆದ್ದಿರೋದು ಇಲ್ಲೇ. ಒಂದು ವಿವಾದಾತ್ಮಕ ಕಾನ್ಸೆಪ್ಟ್ ಇಟ್ಟುಕೊಂಡು, ಅದನ್ನು ಯಾವುದೇ ಸಮುದಾಯದವರಿಗೂ ನೋವಾಗದಂತೆ ಹೇಳಲು ಪ್ರಯತ್ನಿಸಿರುವುದು ಸ್ವಾಗತಾರ್ಹ. ಅದರಲ್ಲೂ ವಿವಿಧ ಧರ್ಮಗಳಲ್ಲಿರುವ ವೈರುಧ್ಯಗಳನ್ನೂ ಎತ್ತಿ ತೋರಿಸಿರುವುದು ಅವರ ಸಾಮಾಜಿಕ ಗ್ರಹಿಕೆಗೊಂದು ಸಾಕ್ಷಿ. ಒಬ್ಬ ನಿರ್ದೇಶಕನಿಗೆ ಇರಬೇಕಾದ ಗುಣ ಅದು. ಇದರಲ್ಲಿ ರಾಜ್ ಕುಮಾರ್ ಹಿರಾನಿ ಗೆದ್ದಿದ್ದಾರೆ.

ಆದರೆ, ಇದರ ಜೊತೆಗೇ ಕೆಲವೊಂದು ನಕಾರಾತ್ಮಕ ಅಂಶಗಳೂ ಚಿತ್ರದಲ್ಲಿವೆ. ಚಿತ್ರದ ಪರಿಕಲ್ಪನೆ ಚೆನ್ನಾಗಿದ್ದರೂ ಅದನ್ನು ಸಾಕಷ್ಟು ಪರಿಣಾಮಕಾರಿಯಾಗಿ ಮಾಡುವಲ್ಲಿ ನಿರ್ದೇಶಕರು ಎಡವಿದ್ದಾರೆ. ಚಿತ್ರಕಥೆಯನ್ನು ಸ್ವಲ್ಪ ಬಿಗಿಗೊಳಿಸಿದ್ದರೆ ಚಿತ್ರವನ್ನು ಮತ್ತಷ್ಟು ಸುಂದರವಾಗಿಸಬಹುದಿತ್ತು. ಇದು ಇಡೀ ಚಿತ್ರದ ಪ್ರಮುಖ ನೆಗೆಟಿವ್ ಅಂಶ.

ಪ್ಲಸ್ಸು ಮೈನಸ್ಸು

  • ಇಡೀ ಚಿತ್ರದ ಜೀವಾಳ ಅಂದ್ರೆ ಅದು ಆಮೀರ್‌ಖಾನ್‌ರ ಅಭಿನಯ. ವಿಶೇಷವಾದ ಮೇಕಪ್, ಕಾಸ್ಟ್ಯೂಮ್‌ಗಳು ಮಾತ್ರವಲ್ಲದೇ ಅಭಿನಯದಲ್ಲೂ ಮಿಂಚಿರುವ ಆಮೀರ್ ಖಾನ್ ಅವರಿಗೇ ಫುಲ್ ಮಾರ್ಕ್ಸ್.
  • ಚಿತ್ರದ ಪರಿಕಲ್ಪನೆಗಿಂತಲೂ, ಚಿತ್ರವನ್ನು ವಿವಾದಗಳಿಂದ ಹೊರತು ಪಡಿಸುವುದಕ್ಕೇ ಸಾಕಷ್ಟು ಶ್ರಮ ಹಾಕಿರುವುದರಿಂದ ಚಿತ್ರಕಥೆ ಜಾಳಾಗಲು, ಬಿಗಿ ಕಳೆದುಕೊಳ್ಳಲು ಪ್ರಮುಖ ಕಾರಣವಿರಬಹುದು.
  • ನಿರ್ದೇಶಕ ರಾಜ್‌ಕುಮಾರ್ ಹಿರಾನಿಯವರ ಪ್ರತಿ ಚಿತ್ರದಲ್ಲೂ ವಿಶೇಷ ಪಾತ್ರವೊಂದು ನಟ ಬೋಮನ್ ಇರಾನಿಗೆ ಮೀಸಲಾಗಿರುತ್ತದೆ. ಈ ಪಾತ್ರ ಯಾವಾಗಲೂ ನಾಯಕನ ವಿರುದ್ಧವೇ ಇರುತ್ತದೆ. ಆದರೆ, ಈ ಚಿತ್ರದಲ್ಲಿ ಹಾಗಿಲ್ಲ. ಫಾರ್ ಎ ಚೇಂಜ್ ಈ ಚಿತ್ರದಲ್ಲಿ ಬೋಮನ್ ಇರಾನಿ-ನಾಯಕ ಆಮೀರ್ ಪರವಾಗಿರುತ್ತದೆ. ಇದು ಕೊಂಚ ನಿರಾಸೆ ಮೂಡಿಸುತ್ತದೆ.
  • 'ಲಗೇ ರಹೋ ಮುನ್ನಾಭಾಯಿ'ಯಲ್ಲಿ ರೇಡಿಯೋ ಮಾಧ್ಯಮವನ್ನು ಹಿರಾನಿ ಅವರು ಚಿತ್ರಕಥೆಯಲ್ಲಿ ಸಮರ್ಥವಾಗಿ ಬಳಸಿಕೊಂಡಿದ್ದರು. ಈ ಚಿತ್ರದಲ್ಲಿ ಟಿವಿಯನ್ನು ಬಳಸಲು ಮುಂದಾಗಿದ್ದಾರೆ. ಆದರೆ, ಈ ಐಡಿಯಾವನ್ನು ಸಮರ್ಥವಾಗಿ ಬಿಂಬಿಸುವಲ್ಲಿ ಅವರು ಸಫಲರಾಗಿಲ್ಲ.
  • ಸಂಜಯ್ ದತ್ ಪಾತ್ರವನ್ನು ವಿಶೇಷವಾಗಿ ರಚಿಸಲಾಗಿದ್ದರೂ, ಆ ಪಾತ್ರ ದ್ವಿತೀಯಾರ್ಧದಲ್ಲಿ ಸಾಯುತ್ತದೆ. ಇದು ಪ್ರೇಕ್ಷಕರಿಗೆ ಖಂಡಿತಾ ಬೇಸರ ಮೂಡಿಸುವ ಅಂಶ.
- ಚೇತನ್.ಓ.ಆರ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com