
ನವದೆಹಲಿ: ಒಂದು ಕಡೆ ಹಿಂದುತ್ವ ಸಂಘಟನೆಗಳು 'ಪಿಕೆ' ಸಿನೆಮಾದ ವಿರುದ್ಧ ಸಮರ ಸಾರಿದ್ದರೆ, ಬಿಜೆಪಿಯ ಹಿರಿಯ ಮುಖಂಡ ಎಲ್ ಕೆ ಅಡ್ವಾಣಿ ಈ ಸಿನೆಮಾವನ್ನು ಮುಕ್ತಕಂಠದಿಂದ ಪ್ರಶಂಸಿಸಿರುವುದು ಈ ಹಿಂದುತ್ವ ಸಂಘಟನೆಯ ಅಭಿಮಾನಿಗಳನ್ನು ಗೊಂದಲಕ್ಕೆ ಈಡುಮಾಡಿದೆ.
ಅದ್ಭುತವಾದ, ನಿರ್ಭೀತಿಯ ಸಿನೆಮಾ ಇದು. ಎಲ್ಲಾರೂ ನೋಡಲೇಬೇಕು ಎಂದು ಸಲಹೆ ನೀಡಿರುವ ಹಿರಿಯ ಮುತ್ಸದ್ಧಿ ಅಡ್ವಾಣಿ "ಅದ್ಭುತವಾದ ಹಾಗೂ ನಿರ್ಭೀತಿಯ 'ಪಿಕೆ' ಸಿನೆಮಾ ನೀಡಿರುವುದಕ್ಕೆ ವಿಧು ವಿನೋದ್ ಚೋಪ್ರ ಹಾಗೂ ರಾಜಕುಮಾರ್ ಹಿರಾನಿ ಅವರಿಗೆ ಹಾರ್ದಿಕ ಅಭಿನಂದನೆಗಳು" ಎಂದಿದ್ದಾರೆ.
"ಇಂತಹ ವಿಶಾಲವಾದ ವೈವಿಧ್ಯಮಯ ದೇಶವಾದ ಭಾರತದಲ್ಲಿ ಜನ್ಮ ನೀಡಿರುವುದು ನಮ್ಮ ಪುಣ್ಯ. ಜಾತಿಯಾಗಲಿ, ಜನಾಂಗವಾಗಲಿ, ಭಾಷೆಯಾಗಲಿ, ಪ್ರಾದೇಶಿಕತೆಯಾಗಲಿ ಹಾಗು ಧರ್ಮವಾಗಲಿ ನಮ್ಮ ದೇಶದ ಐಕ್ಯತೆಯನ್ನು ಹಾಳು ಮಾಡದಂತೆ ನೋಡಿಕೊಳ್ಳುವುದು ಎಲ್ಲ ರಾಷ್ಟ್ರಭಕ್ತರ ಕರ್ತವ್ಯ" ಎಂದಿದ್ದಾರೆ.
"ನಮ್ಮ ದೇಶ ಎಂದೂ ಬತ್ತದ ಆಧ್ಯಾತ್ಮ ಮತ್ತು ಸನ್ನಡತೆಗೆ ಬೆಲೆ ಕೊಡುತ್ತದೆ. ಯಾವುದೇ ಧರ್ಮವನ್ನು ಸಣ್ಣತನದಿಂದ ನೋಡಬಾರದು, ಅದು ದೇಶಕ್ಕೆ ಮಾಡುವ ಅನ್ಯಾಯವಾಗುತ್ತದೆ" ಎಂದು 'ಪಿಕೆ' ಸಿನೆಮಾವನ್ನು ಧಾರ್ಮಿಕ ದೃಷ್ಟಿಯಿಂದ ವಿರೋಧಿಸುತ್ತಿರುವವರಿಗೆ ಕಿವಿಮಾತು ಹೇಳಿದ್ದಾರೆ.
Advertisement