
ಬೆಂಗಳೂರು: ಬಿಹಾರದ ದಾಶ್‌ರಥ್ ಮಾಂಜಿ ಅವರ ಕಥೆಯನ್ನು ಕೇಳಿದಾಗ ಅದನ್ನು ಸಿನಿಮಾ ಮಾಡಬೇಕೆಂದು ಅನಿಸಿತು. ಅದೇ ಮಾಂಜಿ ದ ಮೌಂಟೇನ್ ಮ್ಯಾನ್, ನೈಜ ಕಥೆಯನ್ನಾಧಾರಿತ ಸಿನಿಮಾ ಇದು. ಪ್ರಸ್ತುತ ಚಿತ್ರ ಎಲ್ಲರಿಗೂ ಪ್ರೇರಣೆ ನೀಡಲಿದೆ ಎಂದರು ನಿರ್ದೇಶಕ ಕೇತನ್ ಮೆಹ್ತಾ.
ಅಗಸ್ಟ್ 21ಕ್ಕೆ ತೆರೆಕಾಣಲಿರುವ ಮಾಂಜಿ ದ ಮೌಂಟೇನ್ ಮ್ಯಾನ್ ಎಂಬ ಹಿಂದೀ ಚಲನಚಿತ್ರದ ಪ್ರಚಾರಕ್ಕಾಗಿ ಅವರು ಬೆಂಗಳೂರಿಗೆ ಇಂದು ಆಗಮಿಸಿ ಪತ್ರಿಕಾಗೋಷ್ಠಿ ನಡೆಸಿದರು.
ಅವರೊಂದಿಗೆ ಪ್ರಸ್ತುತ ಸಿನಿಮಾದ ನಾಯಕ ನಟ ನವಾಜುದ್ದೀನ್ ಸಿದ್ದಿಖೀ ಮತ್ತು ನಾಯಕಿ ರಾಧಿಕಾ ಆಪ್ಟೆ ಕೂಡಾ ಉಪಸ್ಥಿತರಿದ್ದರು.
ಮಾಂಜಿ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೇನೆ ಎಂದು ರಾಧಿಕಾ ಆಪ್ಟೆ ಹೇಳಿದ್ದಾರೆ.
15 ವರ್ಷಗಳಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ನಾನು ಪಟ್ಟ ಶ್ರಮಕ್ಕೀಗ ಉತ್ತಮ ಫಲ ದೊರೆಯುತ್ತಿದೆ. ಮಾಂಜಿ ಒಂದು ಉತ್ತಮ ಚಿತ್ರ. ಅದು ಎಲ್ಲರ ಮೇಲೂ ಪ್ರಭಾವ ಬೀಳಲಿದೆ ಎಂದು ನವಾಜುದ್ದೀನ್ ಸಿದ್ದಿಖೀ ಹೇಳಿದರು.
ಚಿತ್ರದ ಅನುಭವಗಳ ಬಗ್ಗೆ ಹೇಳಿ ಎಂದು ಕೇಳಿದಾಗ, ಅಷ್ಟೊಂದು ದೊಡ್ಡ ಬೆಟ್ಟವನ್ನು ಅಗೆಯಬೇಕಲ್ಲಾ..ಅದಕ್ಕೆ ಆಗಾಗ ನಮ್ಮ ಹೀರೋಯಿನ್ ನ್ನು ಕರೆತಂದು ನಿಲ್ಲಿಸಿ, ಆದರೆ ಮಾತ್ರ ಬೆಟ್ಟ ಅಗೆಯುತ್ತೇನೆ ಎಂದು ನಿರ್ದೇಶಕರಿಗೆ ಹೇಳಿದ್ದೆ ಎಂದು ನವಾಜುದ್ದೀನ್ ನಗೆ ಚಟಾಕಿ ಹಾರಿಸಿದರು.
ತನ್ನ ಪತ್ನಿಗಾಗಿ ದೊಡ್ಡ ಬೆಟ್ಟವನ್ನು 22 ವರ್ಷಗಳ ಕಾಲ ಅಗೆದು ದಾರಿ ನಿರ್ಮಿಸಿದ ದಾಶ್‌ರಥ್ ಮಾಂಜಿ ಎಂಬ ರಿಯಲ್ ಹೀರೋನ ಕಥೆಯಾಗಿದೆ ಬಹು ನಿರೀಕ್ಷಿತ ಚಿತ್ರ ಮಾಂಡಿ ದ ಮೌಂಟೇನ್ ಮ್ಯಾನ್.
Advertisement