ಡಿಡಿಎಲ್‌ಜೆ ಪ್ರದರ್ಶನ ನಿಲ್ಲಿಸಬೇಡಿ ಅಂದ್ರು ಜನ

ಬರೋಬ್ಬರಿ 20 ವರ್ಷಗಳಿಂದ ಮುಂಬೈನ ಮರಾಠ ಮಂದಿರ್‌ನಲ್ಲಿ ಪ್ರದರ್ಶನಗೊಳ್ಳುತ್ತಿದ್ದ ಶಾರುಖ್ ಖಾನ್ ಮತ್ತು ಕಾಜೋಲ್...
ದಿಲ್‌ವಾಲೇ ದುಲ್ಹನಿಯಾ ಲೇಜಾಯೇಂಗೇ
ದಿಲ್‌ವಾಲೇ ದುಲ್ಹನಿಯಾ ಲೇಜಾಯೇಂಗೇ

ಮುಂಬೈ: ಬರೋಬ್ಬರಿ 20 ವರ್ಷಗಳಿಂದ ಮುಂಬೈನ ಮರಾಠ ಮಂದಿರ್‌ನಲ್ಲಿ ಪ್ರದರ್ಶನಗೊಳ್ಳುತ್ತಿದ್ದ ಶಾರುಖ್ ಖಾನ್ ಮತ್ತು ಕಾಜೋಲ್ ಅಭಿನಯದ ದಿಲ್‌ವಾಲೇ ದುಲ್ಹನಿಯಾ ಲೇಜಾಯೇಂಗೇ (ಡಿಡಿಎಲ್ ಜೆ) ಚಿತ್ರ ಪ್ರದರ್ಶನ ಮುಂದುವರಿಸುವಂತೆ ಜನರು ಒತ್ತಾಯಿಸತೊಡಗಿದ್ದಾರಂತೆ!

ಎರಡು ದಿನಗಳ ಹಿಂದೆ ಡಿಡಿಎಲ್ ಜೆ ಪ್ರದರ್ಶನವನ್ನು ನಿಲ್ಲಿಸಲು ಚಿತ್ರಮಂದಿರದ ಮಾಲೀಕ ಮನೋಜ್ ದೇಸಾಯಿ ತೀರ್ಮಾನಿಸಿದ್ದರು. ಇದರಂತೆ ಗುರುವಾರ ಬೆಳಗ್ಗೆ ಇದೇ ಕೊನೆಯ ಪ್ರದರ್ಶನವೆಂಬಂತೆ ಚಿತ್ರ ಪ್ರದರ್ಶನ ಮಾಡಿದ್ದರು. ಈ ಪ್ರದರ್ಶನದಲ್ಲಿ 201 ಪ್ರೇಕ್ಷಕರಿದ್ದರು.

ಆದರೆ ಡಿಡಿಎಲ್ ಜೆ ಪ್ರದರ್ಶನವನ್ನು ನಿಲ್ಲಿಸಿದ್ದೇ ತಡ ಜನರು ಫೋನ್ ಕರೆ ಮಾಡಿ ನೀವು ಹೀಗೆ ಮಾಡಬಾರದಿತ್ತು ಎಂದು ದೇಸಾಯಿಯವರಿಗೆ ಹೇಳಿದ್ದಾರೆ. ಅದೆಷ್ಟು ಕರೆಗಳು ಬಂತೆಂದರೆ ಅದಕ್ಕೆ ಉತ್ತರಿಸಿ ದೇಸಾಯಿ ಸುಸ್ತಾದರು. ಡಿಡಿಎಲ್ ಜೆ ಪ್ರದರ್ಶನ ನಿಲ್ಲಿಸಬೇಡಿ ಎಂದು ನೆಟಿಜನ್‌ಗಳು ಟ್ವೀಟರ್‌ನಲ್ಲಿಯೂ ಮನವಿ ಮಾಡಿಕೊಂಡಿದ್ದಾರೆ.

ಇದೀಗ ಡಿಡಿಎಲ್ ಜೆ ಪ್ರದರ್ಶನವನ್ನು ಮುಂದುವರಿಸಬೇಕೋ ಬೇಡವೋ ಎಂಬ ದಂದ್ವದಲ್ಲಿದ್ದಾರೆ ದೇಸಾಯಿ. ಈ ಬಗ್ಗೆ ತೀರ್ಮಾನ ಕೈಗೊಳ್ಳಲು ಬುಧವಾರ ಯಶ್ ರಾಜ್ ಫಿಲಂಸ್ ಸಂಸ್ಥೆ ಜತೆ ಮಾತುಕತೆ ನಿಗದಿಯಾಗಿದೆ. ಈ ಮಾತುಕತೆಯ ನಂತರವೇ ಡಿಡಿಎಲ್ ಜೆ ಪ್ರದರ್ಶನದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. 

1996ರಲ್ಲಿ ಈ ಸಿನಿಮಾವು `ಅತ್ಯುತ್ತಮ ಚಿತ್ರ', `ಶ್ರೇಷ್ಠ ನಾಯಕ ನಟ', ಶ್ರೇಷ್ಠ ನಾಯಕ ನಟಿ', `ಉತ್ತಮ ನಿರ್ದೇಶಕ' ಸೇರಿದಂತೆ 10 ಫಿಲಂಫೇರ್ ಪ್ರಶಸ್ತಿಗಳನ್ನು ಬಾಚಿತ್ತು. ಈ ಚಿತ್ರ 1995ರ ಅಕ್ಟೋಬರ್ ನಿಂದ ಸತತವಾಗಿ 20 ವರ್ಷ ಪ್ರದರ್ಶನಗೊಂಡಿತ್ತು. ಭಾರತೀಯ ಸಿನಿಮಾದ ಇತಿಹಾಸದಲ್ಲೇ ಸತತ 20 ವರ್ಷ ಪ್ರದರ್ಶನಗೊಂಡ ಏಕೈಕ ಚಿತ್ರ ವೆಂಬ ದಾಖಲೆ ನಿರ್ಮಿಸಿತ್ತು. ಆದಿತ್ಯ ಚೋಪ್ರಾರ ಚೊಚ್ಚಲ ನಿರ್ದೇಶನದ ಈ ಚಿತ್ರವನ್ನು ದಿ. ಯಶ್ ಚೋಪ್ರಾ ನಿರ್ಮಿಸಿದ್ದರು.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com