
ಮುಂಬೈ: ಅಕ್ಟೋಬರ್ ೨೦೧೨ ರಲ್ಲಿ ನಟ ಸೈಫ್ ಅಲಿ ಖಾನ್ ಅವರನ್ನು ಮದುವೆಯಾಗಿದ್ದ ಬಾಲಿವುಡ್ ನಟಿ ಕರಿನಾ ಕಪೂರ್ ಅವರು ತಾಯಿಯಾಗುವಾಸೆಯನ್ನು ವ್ಯಕ್ತಪಡಿಸಿದ್ದಾರೆ ಆದರೆ ಅದು ೨-೩ ವರ್ಷಗಳ ನಂತರ ಎಂದಿದ್ದಾರೆ.
"ಸದ್ಯಕ್ಕೆ ಮಕ್ಕಳನ್ನು ಹೊಂದುವ ಯಾವುದೇ ಯೋಜನೆಗಳಿಲ್ಲ ಮತ್ತು ಆ ವಿಷಯದ ಬಗ್ಗೆ ಸ್ಪಷ್ಟವಾಗಿದ್ದೇನೆ. ಮುಂದೊಂದು ದಿನ ತಾಯಿಯಾಗುತ್ತೇನೆ ಆದರೆ ಅದು ಮುಂದಿನ ೨-೩ ವರ್ಷಗಳಲ್ಲಿರುವುದಿಲ್ಲ" ಎಂದು 'ಭಜರಂಗಿ ಭಾಯಿಜಾನ್' ಸಿನೆಮಾದ ಯಶಸ್ಸು ಸಂಭ್ರಮಾಚರಣೆ ವೇಳೆ ತಿಳಿಸಿದ್ದಾರೆ.
ಐದು ವರ್ಷದ ಗೆಳೆತನದ ನಂತರ ಸೈಫ್ ಅವರನ್ನು ಮದುವೆಯಾದ ಮೇಲೂ ನಟಿ ಎಲ್ಲ ತರಹದ ಪಾತ್ರಗಳಲ್ಲಿ ನಟಿಸಿ ತಮ್ಮ ವೃತ್ತಿಪರ ಜೀವನವನ್ನು ಎಂದಿನಂತೆ ಮುಂದುವರೆಸಿದ್ದಾರೆ.
"ಮದುವೆಯಾದರೂ, ನಾನು ಒಳ್ಳೆಯ ಮನರಂಜನೆಯ ಮತ್ತು ವ್ಯವಹಾರಾತ್ಮಕ ಸಿನೆಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ. ಸರಿದೂಗುವುದು ಕಷ್ಟ. ನಟಿಯಾಗಿ ಎಲ್ಲವನ್ನೂ ಮಾಡುವುದು ಮುಖ್ಯ" ಎಂದು 'ಜಬ್ ವಿ ಮೆಟ್' ನಟಿ ತಿಳಿಸಿದ್ದಾರೆ.
ರಣಧೀರ್ ಕಪೂರ್ ಮತ್ತು ಬಭಿತಾ ಅವರ ಪುತ್ರಿ ಕರೀನಾ, ೧೫-೧೬ ವರ್ಷಗಳಿಂದ ಚಿತ್ರೋದ್ಯಮದಲ್ಲಿದ್ದಾರೆ. ತಮ್ಮ ವೃತ್ತಿಜೀವನವನ್ನು ಹಿಂದಿರುಗಿ ನೋಡಿದರೆ ಹೆಮ್ಮೆಯೆನಿಸುತ್ತದೆ ಎಂದಿದ್ದಾರೆ.
"ಅನಿಲ್ ಕಪೂರ್ ಪತ್ನಿಯ ಪಾತ್ರದಲ್ಲಿ (ಬೇವಫಾ) ನಟಿಸಿ ಈಗ ಆರ್ ಭಾಲ್ಕಿ ಅವರ ಮುಂದಿನ ಸಿನೆಮಾದಲ್ಲಿ ಅರ್ಜುನ್ ಕಪೂರ್ ಸಂಗಾತಿಯಾಗಿ ನಟಿಸುತ್ತಿರುವ ನನ್ನ ಪಯಣ ಸುದೀರ್ಘವಾದದ್ದು. ಚಿತ್ರೋದ್ಯಮದ ಎಲ್ಲ ಖಾನ್ ಗಳ ಜೊತೆಗೂ ನಾನು ಕೆಲಸ ಮಾಡುತ್ತಿದ್ದೇನೆ. ಬಹಳ ಚಿಕ್ಕ ವಯಸ್ಸಿಗೇ ಉದ್ಯಮಕ್ಕೆ ನಾನು ಪಾದಾರ್ಪಣೆ ಮಾಡಿದ್ದೇನೆ" ಎಂದು ಅವರು ತಿಳಿಸಿದ್ದಾರೆ.
"ನನ್ನ ಪ್ರೀತಿಪಾತ್ರರನ್ನು ಕಳೆದುಕೊಳ್ಳುವ ಭಯ ಬಿಟ್ಟರೆ ನನಗೆ ಬೇರ್ಯಾವ ಭಯವೂ ಇಲ್ಲ. ನನ್ನ ಸ್ಥಾನದ ಬಗ್ಗೆ ನಾನು ಹೆಚ್ಚು ಚಿಂತಿಸಲಾರೆ ನನಗೆ ಕುಟುಂಬ ಮುಖ್ಯ" ಎಂದು ನಟಿ ತಿಳಿಸಿದ್ದಾರೆ.
Advertisement