
ಮುಂಬೈ: ರಣಬೀರ್-ದೀಪಿಕಾರ ಕೆಮಿಸ್ಟ್ರಿ ತುಂಬಾ ಅದ್ಭುತವಾಗಿ ಮೂಡಿಬಂದಿದೆ. ತೆರೆಯ ಮೇಲೆ ಅವರಿಬ್ಬರನ್ನು ನೋಡೋಕೆ ನಿಜಕ್ಕೂ ಖುಷಿಯಾಗುತ್ತದೆ ಅಂತ ರಣಬೀರ್ ತಾಯಿ ನೀತು ಕಪೂರ್ ಹಾಡಿ ಹೊಗಳಿದ್ದಾರೆ.
ಕೆಲವು ವರ್ಷಗಳ ಹಿಂದೆ ತನ್ನ ಮಗ ದೀಪಿಕಾ ಪಡುಕೋಣೆ ಜೊತೆ ಡೇಟಿಂಗ್ ಮಾಡುತ್ತಿದ್ದಾಗ ನೀತು ಅಪಸ್ವರ ಎತ್ತಿದ್ದರು. ಅವರಿಬ್ಬರ ಸಂಬಂಧವನ್ನು ನೀತು ಒಪ್ಪಿರಲಿಲ್ಲ, ನಂತರ ರಣಬೀರ್-ದೀಪಿಕಾ ನಿಜ ಜೀವನದಲ್ಲಿ ದೂರವಾಗಿ ತೆರೆಯ ಮೇಲೆ ಜೋಡಿಯಾಗಿ ಹಲವು ಚಿತ್ರಗಳನ್ನು ಮಾಡುತ್ತಾ ಬಂದಿದ್ದಾರೆ. ಅವುಗಳಲ್ಲಿ ಹೆಚ್ಚಿನ ಚಿತ್ರಗಳು ಪ್ರೇಕ್ಷಕರಿಗೆ ಇಷ್ಟವಾಗಿ ಯಶಸ್ಸನ್ನೂ ಕಂಡಿವೆ.
ರಣಬೀರ್ ಮತ್ತು ದೀಪಿಕಾ ಅಭಿನಯದ ಹೊಸ ಚಿತ್ರ ತಮಾಶಾ ನವೆಂಬರ್ ನಲ್ಲಿ ಬಿಡುಗಡೆಯಾಗಲಿದೆ. ಅದರ ಟ್ರೈಲರ್ ಈಗಾಗಲೇ ಬಿಡುಗಡೆಗೊಂಡಿದೆ. ಅದನ್ನು ವೀಕ್ಷಿಸಿರುವ ನೀತು ಕಪೂರ್, ಟ್ರೈಲರ್ ನ್ನು ನಾನು ಇಷ್ಟಪಟ್ಟೆ. ಚಿತ್ರವನ್ನು ನೋಡಲು ಕಾತರಳಾಗಿರುವುದಾಗಿ ಹೇಳಿದ್ದಾರೆ.
ಇದೊಂದು ಸುಂದರ ಮತ್ತು ಸೂಕ್ಷ್ಮವಾದ ಪ್ರೇಮ ಕಥೆಯಾಗಿದ್ದು, ರಣಬೀರ್ ಮತ್ತು ದೀಪಿಕಾ ಸುಂದರವಾಗಿ ಕಾಣಿಸುತ್ತಿದ್ದಾರೆ. ಅವರಿಬ್ಬರು ತೆರೆಯ ಮೇಲೆ ಬಂದರೆ ವಿದ್ಯುತ್ ಸಂಚಾರವಾದಂತೆ ಅನುಭವವಾಗುತ್ತದೆ. ದೀಪಿಕಾ ಅದ್ಭುತ ನಟಿಯಾಗಿ ಮಾಗಿದ್ದಾರೆ ಎಂದು ನೀತು ಡಿಂಪಲ್ ಬ್ಯೂಟಿಯನ್ನು ಹಾಡಿ ಹೊಗಳಿದ್ದಾರೆ.ಹಳೆಯದ್ದನ್ನು ಮರೆತು ಹೊಸದನ್ನು ಸ್ವೀಕರಿಸುವ ನಿಯಮವನ್ನು ನೀತು ಕಪೂರ್ ಅನುಸರಿಸುತ್ತಿರುವಂತಿದೆ.
Advertisement