
ಹೈದರಾಬಾದ್ : ಬಾಲಿವುಡ್ ಕಿಂಗ್ ಖಾನ್ ಶಾರೂಕ್ ಹೈದರಾಬಾದಿನಲ್ಲಿ 'ದಿಲ್ ವಾಲೇ' ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವುದನ್ನು ಅರಿತ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರನ್ನು ಭೇಟಿಯಾಗುವ ಇಂಗಿತ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಇದಕ್ಕೆ ಶಾರೂಕ್ ತಕ್ಷಣವೇ ಟ್ವೀಟ್ ನಲ್ಲಿ ಪ್ರತಿಕ್ರಿಯಿಸಿದ್ದರು. ಇದೀಗ ಇಬ್ಬರೂ 'ದಿಲ್ ವಾಲೇ' ಚಿತ್ರದ ಸೆಟ್ ನಲ್ಲಿ ಭೇಟಿಯಾಗಿ ಸಂತಸ ಹಂಚಿಕೊಂಡಿದ್ದಾರೆ. ಶಾರೂಕ್ ಖಾನ್ ಹಾಗೂ ಸೈನಾ ನೆಹ್ವಾಲ್ ಇಬ್ಬರೂ ಟ್ವೀಟರ್ ನಲ್ಲಿ ತಮ್ಮ ಭೇಟಿಯ ಚಿತ್ರಗಳನ್ನು ಹಾಕಿಕೊಂಡಿದ್ದಾರೆ.ಸೈನಾ ನೆಹ್ವಾಲ್ ಶಾರೂಕ್ ಖಾನ್ ಜೊತೆ ಬ್ಯಾಡ್ಮಿಂಟನ್ ರಾಕೆಟ್ ಹಿಡಿದುಕೊಂಡು ಇಬ್ಬರು ಒಟ್ಟಿಗೆ ಸೆಲ್ಫಿ ತೆಗೆದುಕೊಂಡಿರುವ ಚಿತ್ರಗಳನ್ನು ಅಪ್ ಲೋಡ್ ಮಾಡಿದ್ದಾರೆ. ಜೊತೆಗೆ ಸೈನಾ ನೆಹ್ವಾಲ್ ಶಾರೂಖ್ ರನ್ನು ಹೊಗಳಿ ಟ್ವೀಟ್ ಮಾಡಿದ್ದಾರೆ. ಇನ್ನು ಸೈನಾ ನೆಹ್ವಾಲ್ ಅವರ ಕುಟುಂಬ ಸದಸ್ಯರೂ ಇದ್ದರೆಂದು ಹೇಳಲಾಗಿದ್ದು, ರೋಹಿತ್ ಶೆಟ್ಟಿ ನಿರ್ದೇಶನದ 'ದಿಲ್ ವಾಲೇ' ಚಿತ್ರದ ಚಿತ್ರೀಕರಣವನ್ನು ಇವರೆಲ್ಲರೂ ವೀಕ್ಷಿಸಿದ್ದಾರೆ. ಇದಕ್ಕೆ ಅವಕಾಶ ಮಾಡಿಕೊಟ್ಟ ನಿರ್ದೇಶಕ ರೋಹಿತ್ ಶೆಟ್ಟಿಯವರಿಗೆ ಧನ್ಯವಾದ ತಿಳಿಸಿ ಸೈನಾ ನೆಹ್ವಾಲ್ ಟ್ವೀಟ್ ಮಾಡಿದ್ದಾರೆ.ಕ್ರೀಡಾಭಿಮಾನಿಯೂ ಆಗಿರುವ ಶಾರೂಕ್ ಖಾನ್, ವಿಶ್ವ ಕ್ರಮಾಂಕದಲ್ಲಿ ಸೈನಾ ನೆಹ್ವಾಲ್ ಅಗ್ರ ಸ್ಥಾನ ಗಳಿಸಿದ ವೇಳೆ ಅವರನ್ನು ಅಭಿನಂದಿಸಿ ಟ್ವೀಟ್ ಮಾಡಿದ್ದರು. ಸೈನಾ ನೆಹ್ವಾಲ್ ಅದ್ಭುತ ಆಟಗಾರ್ತಿಯಾಗಿದ್ದು, ಅವರು ಪ್ರೀತಿ ಭರಿತ ಕುಟುಂಬ ಹೊಂದಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. 'ದಿಲ್ ವಾಲೇ' ಚಿತ್ರದ ನಾಯಕಿ ಕಾಜೋಲ್ ಅವರನ್ನು ಈ ಹಿಂದೆಯೇ ಭೇಟಿಯಾಗಿದ್ದ ಸೈನಾ ನೆಹ್ವಾಲ್, ತಾನು ಅವರ ಅಪ್ಪಟ ಅಭಿಮಾನಿ ಎಂದು ಹೇಳಿಕೊಂಡಿದ್ದರು.
Advertisement