ಹೃತಿಕ್ ನ ಫಿಟ್ನೆಸ್ ಟೀಚರ್

ತಿನ್ನೋ ಊಟದಿಂದ ಹಿಡಿದು, ಮಾಡುವ ವ್ಯಾಯಾಮದ ತನಕ ಹೃತಿಕ್ ಗೆ ಫಿಟ್ನೆಸ್ ಟೀಚರ್ ಆಗಿರುವವಳು ಮರಿಕಾ...
ಮರಿನಾ ಮತ್ತು ಹೃತಿಕ್
ಮರಿನಾ ಮತ್ತು ಹೃತಿಕ್

ತಿನ್ನೋ ಊಟದಿಂದ ಹಿಡಿದು, ಮಾಡುವ ವ್ಯಾಯಾಮದ ತನಕ ಹೃತಿಕ್ ಗೆ ಫಿಟ್ನೆಸ್ ಟೀಚರ್ ಆಗಿರುವವಳು ಮರಿಕಾ ಜೋಹಾನ್ಸನ್. ಸ್ವೀಡನ್ನಿನ ಈ ಟ್ರೈನರ್ ಬಾಲಿವುಡ್ ನಲ್ಲಿ ಅನೇಕರಿಗೆ ಗುರು.

ದಾಲ್, ರೋಟಿ ತಿಂದು ಮೈಕೈ ತುಂಬಿಸಿಕೊಳ್ಳೋದಿಲ್ಲ ಹಿಂದಿ ಸ್ಟಾರ್‍ಗಳು. ಡೈಲಿ ಇವರ ಹೊಟ್ಟೆ ಸೇರೋದು ವಿದೇಶಿ ಮಹಿಳೆ ಫಿಕ್ಸ್ ಮಾಡಿದ ಊಟ! ಇವರ ಮೈನಲ್ಲಿ ಸಿಕ್ಸ್  ಪ್ಯಾಕ್, ಎಯ್ಟ್ ಪ್ಯಾಕ್ ಎದ್ದಿದ್ದರೆ ಅದಕ್ಕೂ ಕಾರಣ ಈ ಫಾರಿನ್ ಲೇಡಿ! ಅಚ್ಚರಿಯಂದ್ರೆ ಪುರುಷ ಸ್ಟಾರ್‍ಗಳು ಇವಳ ವಿರುದ್ಧ ಫೈಟ್  ಮಾಡಿದರೂ ಗೆಲ್ಲೋದು ಇವಳೇನೆ! ವಿದೇಶದಿಂದ ಪುರ್ರನೆ ತುಂಡುಪೀಸಿನಲ್ಲಿ ಹಾರಿಬಂದ ಸನ್ನಿ ಲಿಯೋನ್ ಇಲ್ಲಿ ಹೆಚ್ಚು ಸುದ್ದಿ ಆಗುತ್ತಾಳೆ. ಆದ್ರೆ, ಸ್ವೀಡನ್ನಿನಿಂದ ಬಂದ ಮರಿಕಾ ಜೋಹಾನ್ಸನ್ ತೆರೆಯ ಹಿಂದಿದ್ದೇ ಸ್ಟಾರ್‍ಗಳ ಸುದ್ದಿಗೆ ಕಾರಣಳಾಗ್ತಾಳೆ!

ಬಾಲಿವುಡ್‍ನ ಮುಂಚೂಣಿ ತಾರೆಗಳಿಗೆ ಮರಿಕಾ ಫಿಟ್ನೆಸ್ ಟ್ರೈನರ್ ಮತ್ತು ಡಯಟಿಷಿಯನ್. ಒಂದೊಮ್ಮೆ ಟ್ರ್ಯಾಕಿನಲ್ಲಿ ಓಡಿದ ಅಥ್ಲೀಟ್ ಇವಳು. ಕೊನೆಗೆ ಬಾಡಿ ಬಿಲ್ಡಿಂಗ್‍ನಲ್ಲಿ ಶಿಖರ ತಲುಪಿದಳು. ಈಗ ಪರ್ಮನೆಂಟಾಗಿ ಮುಂಬೈನಲ್ಲಿ ಸೆಟ್ಲಾಗಿ,ಹಿಂದಿ ತಾರೆಗಳ ಬಾಡಿಯ ಶೇಪ್ ಅನ್ನೇ ಬದಲಿಸುತ್ತಿದ್ದಾಳೆ. ಇವಳದ್ದೊಂದು ಜನಪ್ರಿಯ ಟಿಪ್ಸ್ ಇದೆ. `ಸಿಕ್ಸ್ ಪ್ಯಾಕ್ ಮೀಲ್ಸ್' ಅಂತ. ಕೆಲವು ವರ್ಕೌಟ್‍ಗಳ ಜೊತೆಗೆ ದಿನದಲ್ಲಿ 4ರಿಂದ 6 ಸಲ ಸ್ವೀಕರಿಸುವ ಊಟ ಸೂಚಿಸುತ್ತಾಳೆ. ಅದರಲ್ಲಿ ಕ್ಲಾಸಿಕ್ ಅಮೆರಿಕನ್, ಮೆಕ್ಸಿಕನ್, ಥಾಯ್, ಇಂಡಿಯನ್ ಫುಡ್‍ಗಳೆಲ್ಲ ಮಿಕ್ಸ್ ಆಗಿರುತ್ತೆ. ಹೃತಿಕ್ ರೋಶನ್,ರಣಬೀರ್ ಕಪೂರ್, ಕತ್ರಿನಾ ಕೈಫ್, ಆಲಿಯಾ ಭಟ್, ಸಿದ್ದಾರ್ಥ ಮಾಲ್ಹೋತ್ರಾ,ವರುಣ್ ಧವನ್ ಮನೆಯ ಬಾಣಸಿಗರಿಗೆ ಈ  ಸಿಕ್ಸ್ ಪ್ಯಾಕ್ ಮೀಲ್ಸ್'ನ ಕುಕ್ ಟ್ರೈನಿಂಗ್ ಕೊಟ್ಟಿದ್ದಾಳೆ ಮರಿಕಾ. ಈ ಸ್ಟಾರ್‍ಗಳು ಯಾವ ದೇಶಕ್ಕೆ ಹೋದಾಗ ಏನ್ ತಿನ್ಬೇಕೆಂಬುದನ್ನೂ ಇವಳೇ ಹೇಳುತ್ತಾಳೆ.

ಹೃತಿಕ್  ಫೇವರಿಟ್
ಇವಳ ಫಿಟ್ನೆಸ್ ಪಾಠಕ್ಕೆ ಹೃತಿಕ್ ರೋಶನ್ ಎಷ್ಟು ಫಿದಾ ಆಗಿದ್ದಾನಂದ್ರೆ ತನ್ನ ಕುಟುಂಬಕ್ಕೇ ಈಕೆಯನ್ನು ಟ್ರೈನರ್ ಆಗಿ ನೇಮಿಸಿಕೊಂಡಿದ್ದಾನೆ. ಹೃತಿಕ್‍ನ ಹಿಂದಿನ ಸಿನಿಮಾ `ಬ್ಯಾಂಗ್‍ಬ್ಯಾಂಗ್'ನ ಕಥೆಗೆ ದೇಹ ದಂಡನೆ ಅಷ್ಟು ಅಗತ್ಯವಿರಲಿಲ್ಲ.ಆದರೆ, ಮುಂದಿನ `ಮೊಹೆಂಜೋದಾರೋ'ದ ಕೆಲವು ದೃಶ್ಯಗಳಲ್ಲಿ ಅಂಗಿ ಕಳಚಿ, ದೇಹ ಪ್ರದರ್ಶನ ಮಾಡಬೇಕಿದೆ ಹೃತಿಕ್. ನಿರ್ದೇಶಕ ಅಶುತೋಷ್ ಗೋವಾರಿಕರ್, ಹೃತಿಕ್‍ಗೆ ಇನ್ನಷ್ಟು ಫಿಟ್ ಆಗಲು ಸೂಚಿಸಿದ್ದಾರಂತೆ. ಹೀಗಾಗಿ ಹೃತಿಕ್, ಮರಿಕಾ ಮಾರ್ಗದರ್ಶನದಲ್ಲಿ ಮತ್ತಷ್ಟು ಪಳಗುತ್ತಿದ್ದಾರೆ. `ಕ್ರಿಷ್ 3' ವೇಳೆಯೂ ಹೃತಿಕ್‍ಗೆ ಈಕೆಯೇ ಜಿಮ್ ಕ್ಲಾಸ್ ತೆಗೆದುಕೊಂಡಿದ್ದಳು.

ಮರಿಕಾ ಮೆನು ಏನು?
ಉತ್ಕೃಷ್ಟ ಪ್ರೊಟೀನ್‍ಯುಕ್ತ ಆಹಾರ; ಚಿಕನ್, ಬೀಫ್, ಮೊಟ್ಟೆಯ ಬಿಳಿಭಾಗ,ಮೀನು ಮತ್ತು ಪ್ರೊಟೀನ್ ಶೇಕ್ಸ್,ಕಾರ್ಬೋಹೈಡ್ರೇಟ್ಸ್ ಹೆಚ್ಚಿರುವ ಆಹಾರ;ಬ್ರೌನ್ ರೈಸ್, ಸಿಹಿ ಆಲೂಗಡ್ಡೆ, ಓಟ್ಸ್, ಗೋದಿ,ಪಾಸ್ತಾಗಳು ಇವಳ `ಸಿಕ್ಸ್ ಪ್ಯಾಕ್ ಮೀಲ್ಸ್'ನ ಹೈಲೈಟ್ಸ್. ಇಷ್ಟೆಲ್ಲದರ ಜೊತೆಗೆ ಜಿಮ್ ನಲ್ಲಿ ಕನಿಷ್ಠ 5 ತಾಸು ಕಳೆಯಬೇಕಂತೆ. ವರ್ಕೌಟ್ ಮಾಡಿ ಕ್ಯಾಲೊರಿ ಕಳಕೊಂಡಷ್ಟು ನೀವು ಸ್ಟ್ರಾಂಗ್ ಆಗ್ತೀರಿ ಅಂತಾಳೆ ಮರಿಕಾ. ಜಿಮ್ ನಲ್ಲಿ ನೀವು ಆರಾಮವಾಗಿ ಕಸರತ್ತು ಮಾಡದೆ, ಫೇವರಿಟ್ ಭಾಗಗಳಿಗಷ್ಟೇ ವ್ಯಾಯಾಮ ಕೊಡದೇ ಇಡೀ ದೇಹವನ್ನು ಪರಿಗಣಿಸಬೇಕಾಗುತ್ತದೆ. ದೇಹದ ತೂಕ ಕಳೆದುಕೊಳ್ಳಲು ವ್ಯಾಯಾಮವೇ ಬೇಕಂತಿಲ್ಲ,ನಿತ್ಯ ಸ್ವೀಟ್ಸ್ ತಿಂದರೂ ಸಾಕು ಅನ್ನೋದು ಮರಿಕಾ ಸೂಚಿಸುವ ಸೂತ್ರ. http://marikajohassaon.com ಎಂಬ ತನ್ನದೇ ವೆಬ್‍ಸೈಟಿನಲ್ಲಿ ಈಕೆ ಸಕಲ ಫಿಟ್ನೆಸ್ ಸೂತ್ರಗಳನ್ನು ತೆರೆದಿಟ್ಟಿದ್ದಾಳೆ.

ಮರಿಕಾ ಮೊನ್ನೆಯಷ್ಟೇ ಒಂದು ಪುಸ್ತಕ ಬರೆದಿದ್ದಾಳೆ. `ಹೆಲ್ತಿ ಕಿಚನ್' ಅಂತ. ಇದನ್ನು ಬಿಡುಗಡೆ ಮಾಡಿದವನು ನಟ ಸಿದ್ದಾರ್ಥ ಮಾಲ್ಹೋತ್ರಾ. ಈಗ ಗೊತ್ತಾಯ್ತಲ್ಲ, ಬಾಲಿವುಡ್ ನ ಸಿಕ್ಸ್ ಪ್ಯಾಕ್ ಸ್ಟಾರ್ ಗಳ ಹಿಂದೆ ಯಾರಿದ್ದಾರೆ ಅಂತ!

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com