ನವದೆಹಲಿ: ರುಡ್‌ಯಾರ್ಡ್ ಕಿಪ್ಲಿಂಗ್ ಅವರ ಕಾದಂಬರಿ ಜಂಗಲ್‌ಬುಕ್ ದೆಹಲಿ ದೂರದರ್ಶನದಲ್ಲಿ ಧಾರವಾಹಿಯಾಗಿ ಮೂಡಿ ಬಂದು ಜನಮನಗೆದ್ದಿತ್ತು. 90ರ ದಶಕದಲ್ಲಿ ಮಕ್ಕಳ ಇಷ್ಟ ಧಾರವಾಹಿಯಾಗಿದ್ದ ಜಂಗಲ್‌ಬುಕ್ ಇದೀಗ ಚಲನಚಿತ್ರವಾಗಿ ಏಪ್ರಿಲ್ 8ನೇ ತಾರೀಖಿಗೆ ತೆರೆಗೆ ಬರಲಿದೆ.
ಪ್ರಸ್ತುತ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ. ಈ ಬಗ್ಗೆ ಸುದ್ದಿ ಮಾಧ್ಯಮವೊಂದರಲ್ಲಿ ಮಾತನಾಡಿದ ಸೆನ್ಸಾರ್ ಮಂಡಳಿ ಮುಖ್ಯಸ್ಥ, ಈ ಸಿನಿಮಾದಲ್ಲಿ ಬಳಸಿರುವ 3ಡಿ ಇಫೆಕ್ಟ್ ಭಯಾನಕವಾಗಿದೆ. ಅಂದರೆ ಹೆತ್ತವರ ಜತೆಯಲ್ಲಿ ಕುಳಿತೇ ಮಕ್ಕಳು ಸಿನಿಮಾ ನೋಡಬೇಕಿದೆ ಎಂದಿದ್ದಾರೆ.
ಕಾದಂಬರಿಯನ್ನು ಓದಿ ಖುಷಿಯಾಗಿದೆ ಎಂದು ಸಿನಿಮಾ ನೋಡಲು ಹೋಗಬೇಡಿ. ಅಲ್ಲಿ ಮಕ್ಕಳಿಗೆ ನೋಡಲು ಸಾಧ್ಯವಾಗುವಂತ ದೃಶ್ಯಾವಳಿ ಇದೆ ಎಂದು ನಿಮಗೆ ಮನವರಿಕೆಯಾದರೆ ಮಾತ್ರ ಅವರನ್ನು ಕರೆದುಕೊಂಡು ಹೋಗಿ. 3ಡಿ ಆಗಿರುವುದರಿಂದ ಅಲ್ಲಿರುವ ಪ್ರಾಣಿಗಳೆಲ್ಲಾ ಪ್ರೇಕ್ಷಕರ ಮುಂದೆಯೇ ಬಂದಂತೆ ಭಾಸವಾಗುತ್ತದೆ. ಇದು ಮಕ್ಕಳಲ್ಲಿ ಭಯ ಹುಟ್ಟಿಸುತ್ತದೆ ಎಂದು ನಿಹ್ಲಾನಿ ಹೇಳಿದ್ದಾರೆ.
ನಿಹ್ಲಾನಿ ಈ ರೀತಿ ಹೇಳಿಕೆ ನೀಡಿರುವುದಕ್ಕೆ ಚಿತ್ರರಂಗದವರೇ ಅಸಮಧಾನ ವ್ಯಕ್ತಪಡಿಸಿದ್ದು, ಸೆನ್ಸಾರ್ ಮಂಡಳಿ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯಬೇಕೆಂಬ ಕೂಗು ಕೂಡಾ ಕೇಳಿ ಬಂದಿದೆ.