ಮುಂಬೈ: ನಿರ್ದೇಶಕ ರೋಹಿತ್ ಧವನ್ ಅವರ ಇತ್ತೀಚಿನ ಚಿತ್ರ 'ಡಿಶೂಮ್' ಪಾಕಿಸ್ತಾನದಲ್ಲಿ ನಿಷೇಧಗೊಂಡಿದೆ. ಬಾಲಿವುಡ್ ಸಿನೆಮಾಗಳು ಯಾವುದೇ ದೇಶವನ್ನು ಕೆಟ್ಟದಾಗಿ ಚಿತ್ರೀಕರಿಸುವುದಿಲ್ಲ ಎಂದಿರುವ ಈ ಚಿತ್ರದ ನಟ ವರುಣ್ ಧವನ್ ಈ ನಡೆಯಿಂದ ಬೇಸರವಾಗಿದೆ ಎಂದಿದ್ದಾರೆ.
ಜುನೈದ್ ಅನ್ಸಾರಿ ಎಂಬ ರೂಕಿ ಪೊಲಿಸ್ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ವರುಣ್ ಟ್ವಿಟ್ಟರ್ ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದು ಸಿನೆಮಾ ನಿಷೇಧಿಸಿರುವುದು ತಪ್ಪು ನಡೆ ಎಂದಿದ್ದಾರೆ.
"ಪಾಕಿಸ್ತಾನದಲ್ಲಿ 'ಡಿಶೂಮ್' ನಿಷೇಧವಾಗಿರುವುದಕ್ಕೆ ಬೇಸರವಾಗಿದೆ. ಸಿನೆಮಾ ಕೊನೆಗೆ ಯಾವುದೇ ದೇಶವನ್ನು ಕೆಟ್ಟ ರೀತಿಯಲ್ಲಿ ಚಿತ್ರಿಸುವುದಿಲ್ಲ. ಇದು ತಪ್ಪು ನಿರ್ಧಾರ" ಎಂದು ವರುಣ್ ಟ್ವೀಟ್ ಮಾಡಿದ್ದಾರೆ.
ಶುಕ್ರವಾರ ಬಿಡುಗಡೆಯಾಗಲಿರುವ 'ಡಿಶೂಮ್' ಚಿತ್ರ ಮಧ್ಯ ಪ್ರಾಚ್ಯ ದೇಶದಲ್ಲಿ ಭಾರತೀಯ ಬ್ಯಾಟ್ಸ್ ಮ್ಯಾನ್ ಒಬ್ಬ ಕಳೆದು ಹೋದಾಗ ಅರೇಬಿಯನ್ ಸಮುದ್ರದ ಎರಡೂ ಕಡೆಯ ಪೊಲಿಸ್ ಅಧಿಕಾರಿಗಳು 36 ಘಂಟೆಗಳ ಶೋಧನೆಯ ಸುತ್ತ ಚಿತ್ರ ಸುತ್ತುತ್ತದೆ.
ಈ ಸಿನೆಮಾದಲ್ಲಿ ಜಾನ್ ಅಬ್ರಹಾಂ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಕೂಡ ನಟಿಸಿದ್ದಾರೆ.