ಉಡ್ತಾ ಪಂಜಾಬ್ ಆಯ್ತು ಈಗ ಅನುರಾಗ್ ಕಶ್ಯಪ್ ರ ಮತ್ತೊಂದು ಚಿತ್ರಕ್ಕೆ ಅಡ್ಡಿ!

ಉಡ್ತಾ ಪಂಜಾಬ್ ಚಿತ್ರದ ವಿವಾದ ಮುಕ್ತಾಯಗೊಳ್ಳುತ್ತಿದ್ದಂತೆಯೇ ಅನುರಾಗ್ ಕಶ್ಯಪ್ ಅವರ ಮತ್ತೊಂದು ಚಿತ್ರಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ ಕಂಟಕ ಎದುರಾಗಿದೆ.
ಹಾರಮ್ ಕೋರ್
ಹಾರಮ್ ಕೋರ್

ನವದೆಹಲಿ: ಉಡ್ತಾ ಪಂಜಾಬ್ ಚಿತ್ರದ ವಿವಾದ ಮುಕ್ತಾಯಗೊಳ್ಳುತ್ತಿದ್ದಂತೆಯೇ ಅನುರಾಗ್ ಕಶ್ಯಪ್ ಅವರ ಮತ್ತೊಂದು ಚಿತ್ರಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ ಕಂಟಕ ಎದುರಾಗಿದೆ. ಅನುರಾಗ್ ಕಶ್ಯಪ್ ನಿರ್ಮಾಣದ, ನಾಸಿರುದ್ದೀನ್ ಶಾ ಅಭಿನಯದ ಚಿತ್ರ ಹಾರಮ್ ಕೋರ್ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಅಡ್ಡಿ ಉಂಟಾಗಿದ್ದು, ಚಿತ್ರದ ಕಥಾವಸ್ತುವಿನ ಬಗ್ಗೆಯೇ ಚಲನಚಿತ್ರ ಪ್ರಮಾಣೀಕರಣ ಮಂಡಳಿ ತಗಾದೆ ತೆಗೆದಿದೆ. ಹರಾಮ್ ಕೋರ್ ಚಿತ್ರ ಶಿಕ್ಷಕ ಹಾಗೂ ವಿದ್ಯಾರ್ಥಿನಿಯ ನಡುವೆ ನಡೆಯುವ ಪ್ರೇಮಕಥೆಯಾಗಿದ್ದು, ಚಿತ್ರಕಥೆ ಬಗ್ಗೆ ಸೆನ್ಸಾರ್ ಮಂಡಳಿ ಕ್ಯಾತೆ ತೆಗೆದಿದೆ.

ಶಿಕ್ಷಕರಿಗೆ ಸಮಾಜದಲ್ಲಿ ಅತ್ಯಂತ ಗೌರವಯುತ ಸ್ಥಾನ ಇದೆ, ಆದರೆ ಇದಕ್ಕೆ ವ್ಯತಿರಿಕ್ತವಾಗಿ ಚಿತ್ರದಲ್ಲಿ ಶಿಕ್ಷಕ- ವಿದ್ಯಾರ್ಥಿನಿಯರ ಸಂಬಂಧವನ್ನು ಆಕ್ಷೇಪಾರ್ಹ ರೀತಿಯಲ್ಲಿ ತೋರಿಸಲಾಗಿದೆ ಎಂಬ ಕಾರಣ ನೀಡಿ ಹರಾಮ್ ಕೋರ್ ಚಿತ್ರಕ್ಕೆ ಪ್ರಮಾಣಪತ್ರ ನೀಡಲು ಸೆನ್ಸಾರ್ ಮಂಡಳಿ ನಿರಾಕರಿಸಿದೆ.   

ಶಿಕ್ಷಕ- ಅಪ್ರಾಪ್ತ ವಿದ್ಯಾರ್ಥಿನಿಯರ ಸಂಬಂಧವನ್ನು ಆಕ್ಷೇಪಾರ್ಹ ರೀತಿಯಲ್ಲಿ ಚಿತ್ರಿಸುವುದಷ್ಟೇ ಅಲ್ಲದೇ, ಅಪ್ರಾಪ್ತರಿಂದ ಆಕ್ಷೇಪಾರ್ಹ ರೀತಿಯಲ್ಲಿ ಸಂಭಾಷಣೆ ಕೇಳಿಬಂದಿದೆ, ಆದ್ದರಿಂದ ಚಿತ್ರಕ್ಕೆ ಪ್ರಮಾಣಪತ್ರವನ್ನು ನಿರಾಕರಿಸಲಾಗಿದೆ ಎಂದು ಸೆನ್ಸಾರ್ ಮಂಡಳಿ ಸ್ಪಷ್ಟನೆ ನೀಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅನುರಾಗ್ ಕಶ್ಯಪ್ ಸಿಬಿಎಫ್ ಸಿ ಆದೇಶವನ್ನು ಎಫ್ ಸಿಎಟಿಗೆ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಹರಾಮ್ ಕೋರ್ ಚಿತ್ರವನ್ನು ಶ್ಲೋಕ್ ಶರ್ಮಾ ನಿರ್ದೇಶಿಸಿದ್ದು, ಅನುರಾಗ್ ಕಶ್ಯಪ್ ಮತ್ತು ಗುಣೀತ್ ಮೋಂಗಾ ಸಿಖ್ಯಾ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com