
ಮುಂಬೈ: ಕ್ರಿಕೆಟರ್ ಮಹೇಂದ್ರ ಸಿಂಗ್ ಧೋನಿ ಅವರ ಜೀವನದ ಮೇಲೆ ರೂಪುಗೊಳ್ಳುತ್ತಿರುವ ಬಯೋಪಿಕ್ ನಲ್ಲಿ ಧೋನಿ ಪಾತ್ರದಲ್ಲಿ ನಟಿಸುತ್ತಿರುವ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್, "ಧೋನಿ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು ಮತ್ತು ಅದ್ಭುತ ವ್ಯಕ್ತಿ" ಎಂದು ಬಣ್ಣಿಸಿದ್ದಾರೆ.
'ಎಂ ಎಸ್ ಧೋನಿ- ದ ಅನ್ ಟೋಲ್ಡ್ ಸ್ಟೋರಿ' ಸಿನೆಮಾದಲ್ಲಿ ಸುಶಾಂತ್ ನಾಯಕ ನಟ. ವಿಶ್ವ ಟ್ವೆಂಟಿ೨೦ ಸರಣಿಯಲ್ಲಿ ಬಾಂಗ್ಲಾ ವಿರುದ್ಧ ಭಾರತ ಜಯಗಳಿಸಿದ ಮೇಲೆ ಟ್ವೀಟ್ ಮಾಡಿದ ಸುಶಾಂತ್ ಈ ಕ್ರಿಕೆಟ್ ದಂತಕಥೆಯ (ಧೋನಿ) ಮೇಲೆ ಇನ್ನೂ ೧೦೦ ಸಿನೆಮಾಗಳನ್ನು ಮಾಡಿದರೂ ಸಾಕಾಗುವುದಿಲ್ಲ ಎಂದಿದ್ದಾರೆ.
"ನಾವು ನಿಮ್ಮ ಬಗ್ಗೆ ೧೦೦ ಸಿನೆಮಾಗಳನ್ನು ಮಾಡಬಹುದು ಮತ್ತು ಅಷ್ಟು ಸಾಕಾಗುವುದಿಲ್ಲ. ನೀವು ಅತ್ಯುತ್ತಮ ಆಟಗಾರರಲ್ಲಿ ಒಬ್ಬರು ಮತ್ತು ಅದ್ಭುತ ವ್ಯಕ್ತಿ. ಎಂಎಸ್ ನಾವು ನಿಮ್ಮನ್ನು ಪ್ರೀತಿಸುತ್ತೇವೆ" ಎಂದು ಸುಶಾಂತ್ ಗುರುವಾರ ಟ್ವೀಟ್ ಮಾಡಿದ್ದಾರೆ.
ಈ ಬಯೋಪಿಕ್ ಅನ್ನು ನೀರಜ್ ಪಾಂಡೆ ನಿರ್ದೇಶಿಸುತ್ತಿದ್ದಾರೆ. ಈ ಸಿನೆಮಾದಲ್ಲಿ ನಟಿಸಲು ಭಾರತೀಯ ಮಾಜಿ ವಿಕೆಟ್ ಕೀಪರ್ ಕಿರಣ್ ಮೋರೆ ಅವರಿಂದ ತರಬೇತು ಪಡೆಯುತ್ತಿದ್ದು, ಧೋನಿ ಅವರ ವಿಶಿಷ್ಟ ಕ್ರಿಕೆಟ್ 'ಹೆಲಿಕ್ಯಾಪಟರ್ ಶಾಟ್' ಕಲಿಯುವ ವೇಳೆ ತಮ್ಮ ಪಕ್ಕೆಲಬಿಗೆ ಗಾಯ ಮಾಡಿಕೊಂಡಿದ್ದಾರೆ.
ಫಾಕ್ಸ್ ಸ್ಟಾರ್ ಸ್ಟುಡಿಯೋಸ್ ನಿರ್ಮಿಸುತ್ತಿರುವ ಈ ಸಿನೆಮಾ ಸೆಪ್ಟಂಬರ್ ೨ರಂದು ಬಿಡುಗಡೆಯಾಗಲಿದ್ದು, ಕಿಯರ ಅದ್ವಾನಿ, ಅನುಪಮ್ ಖೇರ್ ಮತ್ತು ಹೇರ್ರಿ ತಂಗ್ರಿ ಕೂಡ ತಾರಾಗಣದಲ್ಲಿದ್ದಾರೆ.
Advertisement