ನವದೆಹಲಿ: ಕಿರುತೆರೆ ನಟಿ ಪ್ರತ್ಯೂಷಾ ಬ್ಯಾನರ್ಜಿ ಆತ್ಮಹತ್ಯೆ ಪ್ರಕರಣದಲ್ಲಿ ಆಕೆಯ ಸ್ನೇಹಿತ ರಾಹುಲ್ ರಾಜ್ ಸಿಂಗ್ ಗೆ ನೀಡಿರುವ ಜಾಮೀನನ್ನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
ರಾಹುಲ್ ರಾಜ್ ಸಿಂಗ್ ಜಾಮೀನು ರದ್ದುಗೊಳಿಸುವಂತೆ ಕೋರಿ ಪ್ರತ್ಯೂಷಾ ತಾಯಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಸಿ ಘೋಶ್ ಹಾಗೂ ನ್ಯಾಯಮೂರ್ತಿ ಅಮಿತವ ರಾಯ್ ಅವರನ್ನೊಳಗೊಂಡ ಸುಪ್ರೀಂ ಪೀಠ, ನಿರೀಕ್ಷಿಣಾ ಜಾಮೀನು ರದ್ದುಗೊಳಿಸಲು ನಿರಾಕರಿಸಿದೆ.
ತಮ್ಮ ಮಗಳ ಮೃತ ದೇಹದ ಮೇಲೆ ಗಾಯದ ಗುರುತುಗಳಿದ್ದವು, ಇದು ಆಕೆಯ ಮೇಲೆ ಹಲ್ಲೆ ನಡೆಸಿರುವುದಕ್ಕೆ ಸಾಕ್ಷಿಯಾಗಿದೆ, ಹೀಗಾಗಿ ರಾಹುಲ್ ರಾಜ್ ಸಿಂಗ್ ಗೆ ಹೈಕೋರ್ಟ್ ನೀಡಿರುವ ಜಾಮೀನನ್ನು ರದ್ದುಗೊಳಿಸಬೇಕೆಂದು ಪ್ರತ್ಯೂಷಾ ತಾಯಿ ಸೋಮ ಬ್ಯಾನರ್ಜಿ ಅವರು ಕೋರ್ಟ್ ಗೆ ಮನವಿ ಮಾಡಿದ್ದರು.
ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ, ಆಕೆಯನ್ನು ರಾಹುಲ್ ಕೊಲೆ ಮಾಡಿದ್ದಾನೆ. ಹೀಗಾಗಿ ಆತನನ್ನು ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಬೇಕೆಂದು ಸೋಮ ಬ್ಯಾನರ್ಜಿ ಮನವಿಯಲ್ಲಿ ತಿಳಿಸಿದ್ದಾರೆ. ಏಪ್ರಿಲ್ 25 ರಂದು ಹೈಕೋರ್ಟ್ ರಾಹುಲ್ ರಾಜ್ ಸಿಂಗ್ ಗೆ ನಿರೀಕ್ಷಣಾ ಜಾಮೀನು ನೀಡಿತ್ತು.