ಮುಂಬೈ: ಖ್ಯಾತ ಸಾಹಸ ನಿರ್ದೇಶಕ ವೀರು ದೇವಗನ್ ಅವರ ಪುತ್ರ ನಟ ಅಜಯ್ ದೇವಗನ್ ಅವರಿಗೆ ಬಾಲಿವುಡ್ ನಲ್ಲಿ ನಿರ್ದೇಶನವಾಗುವ ನೀರಸ ಆಕ್ಷನ್ ದೃಶ್ಯಗಳು ಬೇಸರ ತಂದಿದ್ದವಂತೆ. ಆದುದರಿಂದಲೇ ತಾವೇ ನಟಿಸಿ ನಿರ್ದೇಶಿಸಿರುವ 'ಶಿವಾಯ್' ನಲ್ಲಿ ಹೊಸತನದ ಆಕ್ಷನ್ ದೃಶ್ಯಗಳನ್ನು ಒಳಗೊಂಡಿರುವುದಾಗಿ ಹೇಳಿದ್ದಾರೆ.
"ನನಗೆ ಸಾಹಸ ದೃಶ್ಯಗಳು ಸುಲಭವಾಗಿ ಒಗ್ಗುತ್ತವೆ. ಸಾಮಾನ್ಯವಾಗಿ ನಮ್ಮ ಸಿನೆಮಾಗಳಲ್ಲಿ ಕಾಣುವ ಸಾಹಸ ದೃಶ್ಯಗಳಿಂದ ಬೇಸರನಾಗಿದ್ದೆ. ಆದುದರಿಂದ ಒಂದು ಹೆಜ್ಜೆ ಮುಂದಿಡುವ ಅವಶ್ಯಕತೆ ಇತ್ತು" ಎಂದು ಅಜಯ್ ಹೇಳಿದ್ದಾರೆ.
ತಮ್ಮ ಸಿನೆಮಾಗಳಲ್ಲಿ ಸಾಹಸ ದೃಶ್ಯಗಳಿಗೆ ಹೆಸರಾಗಿರುವ ಅಜಯ್ ದೇವಗನ್, ತಾವೆಂದು ಬದಲಿಯನ್ನು ಬಳಸುವುದಿಲ್ಲ ಅದಕ್ಕೆ 'ಶಿವಾಯ್' ಚಿತ್ರೀಕರಣ ತ್ರಾಸದಾಯಕವಾಗಿತ್ತು ಎನ್ನುತ್ತಾರೆ.
"ಆದರೆ ಎಲ್ಲವು ಸುಸೂತ್ರವಾಗಿ ನಡೆಯಿತು. ಸಣ್ಣಪುಟ್ಟ ಗಾಯಗಳಾಗುತ್ತಿದ್ದವು ಮತ್ತೆ ಮುಂದುವರೆಯುತ್ತಿದ್ದೆವು. ಗಂಭೀರವಾದದ್ದು ಏನು ತೊಂದರೆಯಾಗಲಿಲ್ಲ" ಎಂದು ಅವರು ತಿಳಿಸುತ್ತಾರೆ.
2008 ರಲ್ಲಿ 'ಯು ಮಿ ಔರ್ ಹಮ್' ನಿರ್ದೇಶಿಸಿದ ನಂತರ ಅಜಯ್ ದೇವಗನ್ ನಿರ್ದೇಶನದ ಎರಡನೇ ಚಿತ್ರ 'ಶಿವಾಯ್'. ಐದು ವರ್ಷದ ಹಿಂದೆ ಇಂತಹ ಸಿನೆಮಾ ಮಾಡಲು ಕಷ್ಟವಾಗುತ್ತಿತ್ತು ಎನ್ನುತ್ತಾರೆ 47 ವರ್ಷದ ನಟ.