ಹಾಕಿ ಆಡಲು ಹೋಗುತ್ತೇನೆಂದು ಮನೆಯಲ್ಲಿ ಸುಳ್ಳು ಹೇಳಿ ಶೂಟಿಂಗ್ ಗೆ ಹೋಗುತ್ತಿದ್ದ ಅಮೀರ್ ಖಾನ್

ತ್ರಿ ಈಡಿಯಟ್ಸ್ ಚಿತ್ರದಲ್ಲಿ ಸೂಪರ್ ಸ್ಟಾರ್ ಅಮೀರ್ ಖಾನ್ ಯುವ ಎಂಜಿನಿಯರ್ ವಿದ್ಯಾರ್ಥಿಯಾಗಿ...
18ನೇ ಮುಂಬೈ ಚಲನಚಿತ್ರೋತ್ಸವದಲ್ಲಿ ಬಾಲಿವುಡ್ ನಟ ಅಮೀರ್ ಖಾನ್ ತಮ್ಮ ಪುತ್ರಿ ಇರಾ ಖಾನ್ ಜೊತೆ
18ನೇ ಮುಂಬೈ ಚಲನಚಿತ್ರೋತ್ಸವದಲ್ಲಿ ಬಾಲಿವುಡ್ ನಟ ಅಮೀರ್ ಖಾನ್ ತಮ್ಮ ಪುತ್ರಿ ಇರಾ ಖಾನ್ ಜೊತೆ
ತ್ರಿ ಈಡಿಯಟ್ಸ್ ಚಿತ್ರದಲ್ಲಿ ಸೂಪರ್ ಸ್ಟಾರ್ ಅಮೀರ್ ಖಾನ್ ಯುವ ಎಂಜಿನಿಯರ್ ವಿದ್ಯಾರ್ಥಿಯಾಗಿ ಪ್ರೇಕ್ಷಕರನ್ನು ರಂಜಿಸಿದ್ದು ಗೊತ್ತೇ ಇದೆ. ಆದರೆ ನಿಜ ಜೀವನದಲ್ಲಿ ಅಮೀರ್ ಖಾನ್ ಎಂಜಿನಿಯರ್ ಆಗಲಿಲ್ಲ. ಅವರ ಪೋಷಕರಿಗೆ ತಮ್ಮ ಮಗ ಎಂಜಿನಿಯರ್ ಆಗಬೇಕೆಂಬ ಆಸೆಯಿತ್ತಂತೆ. 
ನಿರ್ದೇಶಕ ತಹಿರ್ ಹುಸೇನ್ ಮತ್ತು ಚಿತ್ರ ನಿರ್ಮಾಪಕ ನಾಸಿರ್ ಹುಸೇನ್ ಅವರ ಅಳಿಯನಾದ ಅಮೀರ್ ಖಾನ್ ತಾವು ಸಿನಿಮಾ ಹಿನ್ನೆಲೆಯ ಕುಟುಂಬದಿಂದ ಬಂದವರಾಗಿದ್ದರೂ ಕೂಡ ಅವರ ಮನೆಯವರಿಗೆ ಅಮೀರ್ ಸಿನಿಮಾ ಕ್ಷೇತ್ರಕ್ಕೆ ಬರುವುದು ಇಷ್ಟವಿರಲಿಲ್ಲವಂತೆ.
'' ಆ ಸಮಯದಲ್ಲಿ ಪ್ರತಿಯೊಬ್ಬರೂ ಸಿನಿಮಾ ಕ್ಷೇತ್ರ ಒಳ್ಳೆಯದಲ್ಲ ಎಂದೇ ಹೇಳುತ್ತಿದ್ದರು. ನನ್ನ ಕುಟುಂಬದವರೇ ಆದ ನಾಸಿರ್ ಸಾಹಿಬ್ ಮತ್ತು ನನ್ನ ತಂದೆ ಸಿನಿಮಾ ಮಾಡಬೇಡ ಎಂದಿದ್ದರು. ಸಿನಿಮಾ ಕ್ಷೇತ್ರವೆಂದರೆ ಅದು ಚಂಚಲವಾದದ್ದು ಎಂದು ಮಾವ ನಾಸಿರ್, ಅಪ್ಪ, ಅಮ್ಮ ಎಲ್ಲರೂ ವಿರೋಧಿಸಿದ್ದರು ಎಂದು 51 ವರ್ಷದ ನಟ ಅಮೀರ್ ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಪ್ಯಾನಲ್ ಚರ್ಚೆಯಲ್ಲಿ ಹೇಳಿದ್ದಾರೆ.
ಸ್ಥಿರವಾಗಿರುವ ಉದ್ಯೋಗವನ್ನು ಹೊಂದಲು ತಮ್ಮ ಕುಟುಂಬದವರು ಬಯಸಿದ್ದರು. ಸಿನಿಮಾದಲ್ಲಿ ಒಮ್ಮೆ ಮೇಲೆದ್ದರೆ, ಮತ್ತೆ ಕೆಳಗಿಳಿಯುತ್ತೀರಿ, ಅಲ್ಲಿ ಸ್ಥಿರತೆಯೆಂಬುದಿಲ್ಲ. ಅದೇ ಎಂಜಿನಿಯರ್, ಡಾಕ್ಟರ್, ಸಿ.ಎ ಆದರೆ ಉದ್ಯೋಗದಲ್ಲಿ ಭದ್ರತೆಯೆಂಬುದಿರುತ್ತದೆ ಎಂದು ಅಪ್ಪ-ಅಮ್ಮನ ಅಭಿಪ್ರಾಯವಾಗಿತ್ತು ಎಂದರು.
ಮನೆಯವರಿಗೆ ಮತ್ತು ಪೋಷಕರಿಗೆ ಗೊತ್ತಿಲ್ಲದೆ ಸಿನಿಮಾ ಮತ್ತು ಟೆಲಿವಿಷನ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಗುಟ್ಟಾಗಿ ಕೋರ್ಸ್ ಗೆ ಸೇರಿಕೊಂಡೆ. ಫಿಲ್ಮ್ ನಲ್ಲಿ ಡಿಪ್ಲೊಮಾ ಓದಿದೆ. ಮನೆಯವರಿಗೆ ಹೊರೆಯಾಗಿ ಬದುಕುವುದು ನನಗಿಷ್ಟವಿರಲಿಲ್ಲ. ನನ್ನ ಸ್ವಂತ ಶ್ರಮ, ಪ್ರತಿಭೆಯಿಂದ ಜೀವನದಲ್ಲಿ ಗುರುತಿಸಿಕೊಳ್ಳುವ ಛಲವಿತ್ತು ಎಂದು ಹೇಳುತ್ತಾರೆ ಅಮೀರ್.
ಅಮೀರ್ 10ನೇ ತರಗತಿ ಮುಗಿಸುವಷ್ಟರ ಹೊತ್ತಿಗೆ ಪರನೊಯ ಎಂಬ ಆದಿತ್ಯ ಭಟ್ಟಾಚಾರ್ಯ ನಿರ್ದೇಶಿಸಿದ 40 ನಿಮಿಷಗಳ ಕಿರು ಚಿತ್ರದಲ್ಲಿ ನಟಿಸಿದ್ದರಂತೆ. ಆ ಚಿತ್ರದಲ್ಲಿ ನಟಿಸಿದ್ದು ಮುಂದೆ ನನಗೆ ನಟನಾಗಿ ಆಸಕ್ತಿ ಹುಟ್ಟಿಸಿತು ಎನ್ನುತ್ತಾರೆ. ಆ ಚಿತ್ರವನ್ನು ನೋಡಿ ಹಿರಿಯ ನಟಿ ಶಬಾನಾ ಆಜ್ಮಿ ಹೊಗಳಿದ್ದರಂತೆ.
''ನನ್ನ ಮನೆಯಲ್ಲಿ ಯಾರಿಗೂ ಚಿತ್ರದ ಶೂಟಿಂಗ್ ನಲ್ಲಿ ಭಾಗವಹಿಸಲು ಹೋಗುತ್ತಿದ್ದೇನೆಂದು ಗೊತ್ತಿರಲಿಲ್ಲ. ಹಾಕಿ ಆಡಲು ಹೋಗುತ್ತೇನೆಂದು ಸುಳ್ಳು ಹೇಳಿ ಹೋಗುತ್ತಿದ್ದೆ. ಶಬಾನಾ ಅವರು ಚಿತ್ರ ನೋಡಿ ಅದರ ಬಗ್ಗೆ ಕೇಳಿದರು. ಆ ಸಮಯದಲ್ಲಿ ಅವರು ನನ್ನ ತಂದೆಯ ಜತೆ ಖೂನ್ ಕಿ ಫುಕಾರ್ ಎಂಬ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದರು. ಆಗ ಅವರು ನೀನು ತಾಹಿರ್ ಸಹಾಬ್ ಅವರ ಮಗನೇ ಎಂದು ಕೇಳಿದರು. ನಾನು ಖಂಡಿತಾ ಅವರಲ್ಲಿ ನಿಮ್ಮ ಮಗ ಅದ್ಭುತ ನಟ ಎಂದು ಹೇಳಬೇಕು ಎಂದರು. ಆಗ ನಾನು ಇಲ್ಲ ನೀವು ಹೇಳಬಾರದು ಎಂದೆ. ಅದಕ್ಕವರು, ಇಲ್ಲ ನೀನು ಉತ್ತಮ ನಟ ನೀನು ನಟಿಸಬೇಕು ಎಂದು ಉತ್ತೇಜನ ನೀಡಿದರು ಎಂದು ಅಮೀರ್ ಮೆಲುಕು ಹಾಕುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com