ಮುಂಬೈ: ಬಾಲಿವುಡ್ ನಲ್ಲಿ ಭಾರೀ ಸುದ್ದಿ ಮಾಡಿದ 2013ರಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ನಟಿ ಜಿಯಾಖಾನ್ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ಆರಂಭದಲ್ಲಿ ಬಾಯ್`ಫ್ರೆಂಡ್ ಸೂರಜ್ ಪಂಚೋಲಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದಿಸಿದ ಆರೋಪ ಕೇಳಿಬಂದಿತ್ತು. ಆತನೇ ಆಕೆಯ ಸಾವಿಗೆ ಕಾರಣ ಎಂದು ಜಿಯಾಳ ಕುಟುಂಬದವರು ಆರೋಪಿಸಿದ್ದರು. ತನಿಖೆ ನಡೆಸಿದ ಸಿಬಿಐ ಜಿಯಾಖಾನ್ ಸಾವು ಆತ್ಮಹತ್ಯೆಗೆ ಸಂಬಂಧಿಸಿದೆ ಎಂದು ವರದಿ ನೀಡಿತ್ತು.
ಇದೀಗ, ಜಿಯಾ ತಾಯಿ ರಾಬಿಯಾ ನೇಮಿಸಿದ್ದ ಇಂಗ್ಲೆಂಡಿನ ವಿದೇಶಿ ವಿಧಿ ವಿಜ್ಞಾನ ತಜ್ಞನೊಬ್ಬ ಜಿಯಾಖಾನ್ ಅವರದ್ದು ಆತ್ಮಹತ್ಯೆಯಲ್ಲ, ನೇಣು ಹಾಕಲಾಗಿದೆ ಎಂದು ಹೇಳಿದ್ದಾನೆ ಎಂದು ಇಂಗ್ಲಿಷ್ ಪತ್ರಿಕೆಯೊಂದರಲ್ಲಿ ವರದಿ ಬಂದಿದೆ.
ಜಿಯಾಖಾನ್ ಸಾವಿನ ಕುರಿತಂತೆ ಸಿಬಿಐ ನೀಡಿದ್ದ ವರದಿ ಬಗ್ಗೆ ಅಸಮಾಧಾನಗೊಂಡಿದ್ದ ತಾಯಿ ರಾಬಿಯಾ, ಜೇಸನ್ ಪೇಯ್ನ್ ಜೇಮ್ಸ್ ಎಂಬ ಬ್ರಿಟಿಷ್ ವಿಧಿವಿಜ್ಞಾನ ತಜ್ಞರ ಮೊರೆಹೋಗಿದ್ದರು. ಈ ವರದಿಯನ್ನು ರಾಬಿಯಾ ನಾಳೆ ಮುಂಬೈ ಸೆಷನ್ಸ್ ಕೋರ್ಟ್ ಮಂಡಿಸಲಿದ್ದು, ನ್ಯಾಯಾಲಯ ಏನು ಹೇಳುತ್ತದೋ ಕಾದು ನೋಡಬೇಕು.