ಪದ್ಮಾವತಿ ಚಿತ್ರ ಶೂಟಿಂಗ್ ವೇಳೆ ನಿರ್ದೇಶಕ ಬನ್ಸಾಲಿ ಮೇಲೆ ಹಲ್ಲೆ: ಬಾಲಿವುಡ್ ಖಂಡನೆ

ಬಾಲಿವುಡ್ ನ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಯವರ ಮುಂದಿನ ಚಿತ್ರ ಪದ್ಮಾವತಿಯಲ್ಲಿ ಇತಿಹಾಸದ ವಿಷಯಗಳನ್ನು...
ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ, ಉದ್ರಿಕ್ತ ಗುಂಪು
ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ, ಉದ್ರಿಕ್ತ ಗುಂಪು
ಜೈಪುರ: ಬಾಲಿವುಡ್ ನ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಯವರ ಮುಂದಿನ ಚಿತ್ರ ಪದ್ಮಾವತಿಯಲ್ಲಿ ಇತಿಹಾಸದ ವಿಷಯಗಳನ್ನು ತಿರುಚಿ ತಮಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುತಿದ್ದಾರೆ ಎಂದು ಆರೋಪಿಸಿ ಜನರ ಗುಂಪು ಹಲ್ಲೆ ಮಾಡಿರುವ ಘಟನೆ ರಾಜಸ್ತಾನದ ಜೈಪುರದಲ್ಲಿ ನಿನ್ನೆ ನಡೆದಿದೆ. 
ಪದ್ಮಾವತಿ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ರಜಪೂತ್ ಕರ್ಣಿ ಸೇನಾ ಕಾರ್ಯಕರ್ತರು ಚಿತ್ರೀಕರಣದ ಸಂದರ್ಭದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಘಟನೆ ವೇಳೆ ಚಿತ್ರೀಕರಣದ ಪರಿಕರಗಳಿಗೂ ಹಾನಿ ಮಾಡಲಾಗಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.
ರಾಣಿ ಪದ್ಮಿನಿ ಕತೆಯನ್ನೊಳಗೊಂಡ ಚಿತ್ರ ಇದಾಗಿದ್ದು, ಕತೆಯನ್ನೇ ತಿರುಚಿ ಚಿತ್ರೀಕರಿಸಲಾಗುತ್ತಿದೆ ಎಂದು ಆರೋಪಿಸಿ ಬನ್ಸಾಲಿ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಚಿತ್ರೀಕರಣದಲ್ಲಿ ಪದ್ಮಿನಿ ಮತ್ತು ಪ್ರಿಯಕರ ಅಲಾಉದ್ದೀನ್ ಖಿಲ್ಜಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಈ ಘಟನೆ ನಡೆಯುವಾಗ ಅಲ್ಲಿದ್ದರು ಎನ್ನಲಾಗಿದೆ.
ಕತೆಯಲ್ಲಿರುವ ಒಂದಿಷ್ಟು ದೃಶ್ಯಗಳಿಗೆ ಕತ್ತರಿ ಹಾಕಬೇಕೆನ್ನುವುದು ಪ್ರತಿಭಟನಾಕಾರರ ಒತ್ತಾಯವಾಗಿತ್ತು. ಘಟನೆ ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಆ ಸ್ಥಳದಲ್ಲಿ ಚಿತ್ರೀಕರಣ ನಡೆಸದಂತೆ ಬನ್ಸಾಲಿಯವರಿಗೆ ಪೊಲೀಸರು ಸೂಚಿಸಿದರು.
ಬಾಲಿವುಡ್ ಖಂಡನೆ: ಸಂಜಯ್ ಲೀಲಾ ಬನ್ಸಾಲಿಯವರ ಮೇಲಿನ ಹಲ್ಲೆಗೆ ಇಡೀ ಬಾಲಿವುಡ್ ಚಿತ್ರರಂಗ ಆಕ್ರೋಶ ವ್ಯಕ್ತಪಡಿಸಿ ಖಂಡಿಸಿದೆ.ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಟ, ನಟಿಯರು, ನಿರ್ದೇಶಕ, ನಿರ್ಮಾಪಕರು, ತಂತ್ರಜ್ಞರು ಒತ್ತಾಯಿಸಿದ್ದಾರೆ.
ತನಿಖೆ ನಡೆಸಲಿರುವ ಸರ್ಕಾರ: ಸಂಜಯ್ ಲೀಲಾ ಬನ್ಸಾಲಿಯವರ ಮೇಲಿನ ಹಲ್ಲೆಯನ್ನು ಖಂಡಿಸಿರುವ ರಾಜಸ್ತಾನ ಸರ್ಕಾರ ಸಿಟ್ಟು, ಆಕ್ರೋಶವನ್ನು ವ್ಯಕ್ತಪಡಿಸಲು ಕಾನೂನು ಮುರಿಯುವುದು ಸರಿಯಲ್ಲ. ನಿರ್ದೇಶಕರ ಮೇಲಿನ ಹಲ್ಲೆ ಘಟನೆಗೆ ಸಂಬಂಧಪಟ್ಟಂತೆ ತನಿಖೆ ನಡೆಸಲಾಗುವುದು ಎಂದು ರಾಜಸ್ತಾನ ಗೃಹ ಸಚಿವ ಗುಲಾಬ್ ಸಿಂಗ್ ಕಟಾರಿಯಾ ಭರವಸೆ ನೀಡಿದ್ದಾರೆ. 
ಪದ್ಮಾವತಿ ಚಿತ್ರೀಕರಣದ ವೇಳೆ ನಡೆಸಲಾದ ಹಲ್ಲೆಯನ್ನು ಸಮರ್ಥಿಸಿಕೊಂಡ ರಜಪೂತ್ ಕರ್ನಿ ಸೇನಾ, ಪೂರ್ವಜರ ಇತಿಹಾಸವನ್ನು ತಿರುಚಲು ನಾವು ಬಿಡುವುದಿಲ್ಲ. ರಜಪೂತ ವಂಶಾವಳಿಗೆ ಅವಮಾನ ಮಾಡಿದರೆ ಅದನ್ನು ನೋಡಿಕೊಂಡು ಸಹಿಸಿಕೊಂಡು ಕೂರಲು ಸಾಧ್ಯವಿಲ್ಲ ಎಂದು ಸೇನಾದ ಸ್ಥಾಪಕ ಲೋಕೇಂದ್ರ ಸಿಂಗ್ ಕಾಳ್ವಿ ತಿಳಿಸಿದ್ದಾರೆ. 
ಬನ್ಸಾಲಿಯವರಿಗೆ ಜರ್ಮನಿಗೆ ಹೋಗಿ ಹಿಟ್ಲರ್ ವಿರುದ್ಧ ಸಿನಿಮಾ ಮಾಡುವ ಧೈರ್ಯವಿದೆಯೇ? ಜೋಧಾ ಅಕ್ಬರ್ ಚಿತ್ರ ತಯಾರಿಸುವಾಗಲೂ ಇದೇ ರೀತಿಯಾಯಿತು. ನಾವು ವಿರೋಧ ವ್ಯಕ್ತಪಡಿಸಿದ್ದೆವು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com