ಸಿಬಿಎಫ್ ಸಿ ಅನುಮತಿ ಇಲ್ಲದೆಯೇ 'ಪದ್ಮಾವತಿ' ಪ್ರದರ್ಶನಕ್ಕೆ ಪ್ರಸೂನ್ ಜೋಶಿ ಅಸಮಾಧಾನ

ದೀಪಿಕಾ ಪಡುಕೋಣೆ ಅಭಿನಯದ 'ಪದ್ಮಾವತಿ' ಚಿತ್ರದ ಬಿಡುಗಡೆ ವಿರೋಧಿಸಿ ದೇಶದ ಹಲವೆಡೆ ಪ್ರತಿಭಟನೆಗಳು ನಡೆಯುತ್ತಿದ್ದು, ವಿರೋಧದ ನಡುವೆ....
ಪ್ರಸೂನ್ ಜೋಶಿ
ಪ್ರಸೂನ್ ಜೋಶಿ
ಮುಂಬೈ: ದೀಪಿಕಾ ಪಡುಕೋಣೆ ಅಭಿನಯದ 'ಪದ್ಮಾವತಿ' ಚಿತ್ರದ ಬಿಡುಗಡೆ ವಿರೋಧಿಸಿ ದೇಶದ ಹಲವೆಡೆ ಪ್ರತಿಭಟನೆಗಳು ನಡೆಯುತ್ತಿದ್ದು, ವಿರೋಧದ ನಡುವೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ(ಸಿಬಿಎಫ್‌ಸಿ)ಯ ಅನುಮತಿ ಇಲ್ಲದೆ ಚಿತ್ರ ಪ್ರದರ್ಶಿಸಿರುವುದರ ಬಗ್ಗೆ ಸಿಬಿಎಫ್ ಸಿ ಅಧ್ಯಕ್ಷ ಪ್ರಸೂನ್ ಜೋಶಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪದ್ಮಾವತಿ ಚಿತ್ರದ ಅರ್ಜಿಯನ್ನು ವಾಪಸ್ ಕಳುಹಿಸಲಾಗಿದೆ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಜೋಶಿ ಅವರು, ಪರಿಶೀಲನೆಗಾಗಿ ಚಿತ್ರದ ನಿರ್ಮಾಪಕರು ಅರ್ಜಿ ಸಲ್ಲಿಸಿದ್ದಾರೆ. ಆದರೆ ಚಿತ್ರ ಪೇಪರ್ ಕೆಲಸ ಅಪೂರ್ಣವಾಗಿದೆ ಎಂದು ಅವರೇ ಹೇಳಿರುವುದಾಗಿ ಸಿಬಿಎಫ್ ಸಿ ಮುಖ್ಯಸ್ಥರು ತಿಳಿಸಿದ್ದಾರೆ.
ಪರಿಶೀಲನೆಗಾಗಿ ಮಾತ್ರ ಪದ್ವಾವತಿ ಚಿತ್ರ ಅರ್ಜಿ ಬಂದಿದೆ. ಇದು ಚಿತ್ರ ನಿರ್ಮಾಪಕರಿಗೆ ಗೊತ್ತು ಮತ್ತು ಪೇಪರ್ ಕೆಲಸ ಅಪೂರ್ಣವಾಗಿದೆ. ಚಿತ್ರ ಕಾಲ್ಪನಿಕವೇ ಅಥವಾ ಐತಿಹಾಸಿಕ ಎಂಬುದನ್ನು ಸ್ಪಷ್ಟಪಡಿಸದೆ ಆ ಸ್ಥಳವನ್ನು ಖಾಲಿ ಬಿಡಲಾಗಿದೆ. ಹೀಗಾಗಿ ಆ ಕುರಿತು ದಾಖಲೆಗಳನ್ನು ಒದಗಿಸುವಂತೆ ಸರಳವಾಗಿ ಮತ್ತು ನ್ಯಾಯಸಮ್ಮತವಾಗಿ ಕೇಳಲಾಗುವುದು ಎಂದು ಜೋಶಿ ಅವರು ಇಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿಬಿಎಫ್ ಸಿ ವಿರುದ್ಧದ ಆರೋಪಗಳ ಬಗ್ಗೆ ಅಚ್ಚರಿ ವ್ಯಕ್ತಪಡಿಸಿರುವ ಜೋಶಿ ಅವರು, ಸಿಬಿಎಫ್ ಸಿ ಒಂದು ಜವಾಬ್ದಾರಿಯುತವಾದ ಸಂಸ್ಥೆಯಾಗಿದ್ದು, ಚಿತ್ರೋದ್ಯಮ ಮತ್ತು ಸಮಾಜದ ಬಗ್ಗೆ ಉತ್ತಮ ಹಿತಾಸಕ್ತಿಯನ್ನು ಹೊಂದಿದೆ. ಯಾರಿಗೂ ತೊಂದರೆ ಕೊಡುವ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ಪದ್ಮಾವತಿ ಚಿತ್ರವನ್ನು ಮಾಧ್ಯಮ ಪ್ರತಿನಿಧಿಗಳಿಗಾಗಿ ಶುಕ್ರವಾರ ಮತ್ತು ಶನಿವಾರ ಪ್ರದರ್ಶಿಸಿದ ಬಗ್ಗೆ ಜೋಶಿಯವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿಬಿಎಫ್ ಸಿ ಅನುಮತಿಗಾಗಿ ಪದ್ಮಾವತಿ ಚಿತ್ರದ ನಿರ್ಮಾಕರು ಸಲ್ಲಿಸಿದ್ದ ಅರ್ಜಿ ಅಪೂರ್ಣವಾದ ಹಿನ್ನೆಲೆಯಲ್ಲಿ ಅದನ್ನು ಸೆನ್ಸಾರ್ ಮಂಡಳಿ ವಾಪಸ್ ಕಳುಹಿಸಿದೆ ಎಂದು ಮಾಧ್ಯಮಗಳ ವರದಿ ಮಾಡಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com