ರಜಪೂತರನ್ನು ಅವಹೇಳನ ಮಾಡಿರುವ ಕವಿ ಮತ್ತು ಗೀತರಚನೆಕಾರ ಜಾವೇದ್ ಅಖ್ತರ್ ವಿರುದ್ಧ ಕೇಸ್ ದಾಖಲಿಸುವಂತೆ ಕಾರ್ಣಿ ಸೇನೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ವಿವಾದದ ಕೇಂದ್ರ ಬಿಂದುವಾಗಿರುವ ಪದ್ಮಾವತಿ ಚಿತ್ರವನ್ನು ರಾಜಸ್ಥಾನದಲ್ಲಿ ನಿಷೇಧಿಸಬೇಕು ಎಂದು ಕಾರ್ಣಿ ಸೇನೆ ಆಗ್ರಹಿಸಿದ್ದು ಇದೇ ವೇಳೆ ರಜಪೂತರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಜಾವೇದ್ ಅಖ್ತರ್ ವಿರುದ್ಧ ಕೇಸ್ ದಾಖಲಿಸುವಂತೆ ಸೇನೆ ಪೊಲೀಸರಿಗೆ ದೂರು ನೀಡಿದೆ.
ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ಜಾವೇದ್ ಅಖ್ತರ್ ಈ ವೇಳೆ ಪದ್ಮಾವತಿ ಚಿತ್ರವನ್ನು ಸಮರ್ಥಿಸಿಕೊಂಡಿದ್ದರು. ಜತೆಗೆ ರಜಪೂತ ಆಡಳಿತಗಾರರು ಬ್ರಿಟೀಷರ ಅಧಿಕಾರದಲ್ಲಿ 200 ವರ್ಷ ಕಾಲ ಸೇವೆ ಸಲ್ಲಿಸಿದ್ದರೇ ಹೊರತು ಅವರ ವಿರುದ್ಧ ಹೋರಾಡಲಿಲ್ಲವೆಂದು ಪ್ರಶ್ನಿಸಿದ್ದರು.
ಜಾವೇದ್ ಅಖ್ತರ್ ಅಭಿಪ್ರಾಯ ರಜಪೂತರ ಇತಿಹಾಸವನ್ನು ಅಪಹಾಸ್ಯ ಮಾಡಿದೆ ಎಂದು ಕಾರ್ಣಿ ಸೇನೆ ಹೇಳಿದೆ. ಒಂದು ನಿರ್ದಿಷ್ಟ ಸಮುದಾಯವನ್ನು ಅವಮಾನಿಸಲು ಅಖ್ತರ್ ಉದ್ದೇಶಪೂರ್ವಕವಾಗಿ ಪ್ರಯತ್ನಿಸಿದ್ದಾರೆ ಎಂದು ಅವರ ವಿರುದ್ಧ ದೂರು ಸಲ್ಲಿಸಿದ್ದು ಕಠಿಣ ಶಿಕ್ಷೆಗೆ ಆಗ್ರಹಿಸಿದ್ದಾರೆ.