ಕಂಗನಾ ರನೌತ್-ಹೃತಿಕ್ ರೋಷನ್
ಬಾಲಿವುಡ್
ಕೊನೆಗೂ ಮೌನ ಮುರಿದ ನಟ ಹೃತಿಕ್ ರೋಷನ್: ಕಂಗನಾ ಆರೋಪಕ್ಕೆ ಪ್ರತಿಕ್ರಿಯೆ
ತಮ್ಮ ಮತ್ತು ಕಂಗನಾ ರನೌತ್ ನಡುವಿನ ವಿವಾದ ಕುರಿತು ಹೃತಿಕ್ ರೋಷನ್ ಕೊನೆಗೂ ಪ್ರತಿಕ್ರಿಯೆ ನೀಡಿದ್ದಾರೆ. ತಾವು ಕಳುಹಿಸಿದ ರಹಸ್ಯ ....
ನವದೆಹಲಿ: ತಮ್ಮ ಮತ್ತು ಕಂಗನಾ ರನೌತ್ ನಡುವಿನ ವಿವಾದ ಕುರಿತು ಹೃತಿಕ್ ರೋಷನ್ ಕೊನೆಗೂ ಪ್ರತಿಕ್ರಿಯೆ ನೀಡಿದ್ದಾರೆ. ತಾವು ಕಳುಹಿಸಿದ ರಹಸ್ಯ ಮಾಹಿತಿಗಳನ್ನು ಹೃತಿಕ್ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಕಂಗನಾ ಆರೋಪಿಸಿದ್ದರು.
ಮೊನ್ನೆ ಹೃತಿಕ್ ತಂದೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು. ಆದರೆ ಹೃತಿಕ್ ರೋಷನ್ ಇದುವರೆಗೆ ವಿವಾದಕ್ಕೆ ಸಂಬಂಧಪಟ್ಟಂತೆ ನೇರ ಹೇಳಿಕೆ ನೀಡಿರಲಿಲ್ಲ.
ಮೊನ್ನೆ ನೀಡಿದ ಹೇಳಿಕೆಯಲ್ಲಿ ಹೃತಿಕ್, ಕಂಗನಾ ತಮ್ಮನ್ನು ಬೆಂಬಿಡದೆ ಹಿಂಸಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದೀಗ ಮನಬಿಚ್ಚಿ ಮಾತನಾಡಿದ್ದಾರೆ.
ನಾನು ಸ್ವಂತಿಕೆ ಮತ್ತು ರಚನಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೇನೆ ಮತ್ತು ಆ ದಾರಿಯಲ್ಲಿಯೇ ನಡೆಯುತ್ತಿದ್ದೇನೆ. ಆ ಹೆಜ್ಜೆಯಲ್ಲಿ ಸರಿಹೋಗದಿರುವ, ಹೊಂದಿಕೆಯಾಗದಿರುವ ವಿಚಾರಗಳನ್ನು ನಾನು ನಿರ್ಲಕ್ಷಿಸುತ್ತೇನೆ, ಪಕ್ಕಕ್ಕೆ ಸರಿಸುತ್ತೇನೆ ಮತ್ತು ಅವು ನಮ್ಮ ಕೆಲಸಕ್ಕೆ ಭಂಗವನ್ನುಂಟುಮಾಡುವವು ಎಂದು ಭಾವಿಸುತ್ತೇನೆ.
ನಿರಂತರ ಅನಗತ್ಯ ಕಿರಿಕಿರಿಗಳು ಕೇಳಿಬರುತ್ತಿದ್ದರೆ ಅವುಗಳನ್ನು ಕಡೆಗಣಿಸಿ ಪ್ರತಿಕ್ರಿಯೆ ನೀಡದೆ ಘನತೆಯುಳ್ಳ ಹಾದಿಯಲ್ಲಿ ನಡೆಯುವುದು ಒಳ್ಳೆಯದು ಎಂದು ನಾನು ನಂಬುತ್ತೇನೆ.ಆದರೆ ಕೆಲವೊಮ್ಮೆ ಇಂತಹ ವಿಷಯಗಳನ್ನು ಕಡೆಗಣಿಸಿದರೆ ಅದು ನಮಗೆ ಮಾರಕವಾಗುವ ಸಾಧ್ಯತೆಯಿರುತ್ತದೆ. ಈ ವಿಷಯದಲ್ಲಿ ಆಗಿರುವುದು ಹಾಗೆಯೇ. ಮಾಧ್ಯಮಗಳು ಕೂಡ ಈ ವಿಷಯವನ್ನು ಬಿಡುವ ಹಾಗೆ ಕಾಣಲಿಲ್ಲ ಎನ್ನುತ್ತಾರೆ ಹೃತಿಕ್.
ಇದರಲ್ಲಿ ನನ್ನ ಪಾತ್ರ ಇಲ್ಲದಿರುವಾಗ ಪ್ರತಿಕ್ರಿಯೆ ನೀಡಿ ನನ್ನ ಮರ್ಯಾದೆಯನ್ನು ರಕ್ಷಿಸಿಕೊಳ್ಳುವುದರಲ್ಲಿ ಅರ್ಥವಿದೆ ಎಂದು ನನಗನಿಸುವುದಿಲ್ಲ. ಈ ಕೊಳಕು ಕೆಸರೆರಚಾಟದಲ್ಲಿ ನನ್ನನ್ನು ಎಳೆದುಹಾಕಲಾಗಿದೆ. ಇದು ನನಗೆ ಸಂಬಂಧಿಸದ ವಿಷಯ ಎಂದಿದ್ದಾರೆ.
ನನ್ನನ್ನು ಪ್ರಶ್ನಿಸುವ ಮಹಿಳೆಯನ್ನು ನಾನು ಖಾಸಗಿಯಾಗಿ ಭೇಟಿಯಾಗಲಿಲ್ಲ. ನಾವು ಅನೇಕ ಸಿನಿಮಾಗಳಿಗೆ ಒಟ್ಟಿಗೆ ಕೆಲಸ ಮಾಡಿರಬಹುದು ಎಂದು ಹೇಳಿರುವ ಹೃತಿಕ್ ಇದು ಸತ್ಯ, ನನ್ನನ್ನು ಅರ್ಥಮಾಡಿಕೊಳ್ಳಿ, ಸಂಬಂಧ ಕುರಿತ ಆರೋಪದ ವಿರುದ್ಧ ನಾನು ಹೋರಾಟ ಮಾಡುತ್ತಿಲ್ಲ. ಅಥವಾ ನಾನೊಬ್ಬ ಒಳ್ಳೆ ಮನುಷ್ಯ ಎಂದು ಭಾವನೆ ಮೂಡಿಸಲು ಚಿಕ್ಕಮಕ್ಕಳಂತೆ ಪ್ರಯತ್ನಿಸುತ್ತಿಲ್ಲ.ನನಗೆ ನನ್ನ ತಪ್ಪೇನೆಂಬುದು ಗೊತ್ತು. ನಾನು ಒಬ್ಬ ಮನುಷ್ಯ ಎಂದಿದ್ದಾರೆ ಹೃತಿಕ್.
ಬೇಸರದ ವಿಷಯವೆಂದರೆ ಇಲ್ಲಿ ಸತ್ಯ ಏನೆಂಬುದು ಜನತೆಗೆ ಗೊತ್ತಾಗುತ್ತಿಲ್ಲ. ಕೆಲವೇ ಮಾಧ್ಯಮಗಳು ಮತ್ತು ಕೆಲವೇ ಮಂದಿಗೆ ಇದು ಅರ್ಥವಾಗುತ್ತಿಲ್ಲ. ದಿನದಿಂದ ದಿನಕ್ಕೆ ಈ ವಿಷಯ ಗಂಭೀರವಾಗುತ್ತಾ, ಸೂಕ್ಷ್ಮವಾಗುತ್ತಾ ನಾಶ ಮಾಡಲು ಹೊರಟಿದೆ. ಸಾಮಾನ್ಯವಾಗಿ ಇಂತಹ ವಿಷಯದಲ್ಲಿ ಹೆಣ್ಣನ್ನು ಬಲಿಪಶು ಎಂದು ಜನ ಭಾವಿಸುತ್ತಾರೆ. ಇಲ್ಲಿ ನನ್ನಂತ ಪುರುಷನನ್ನು ಆಕ್ರಮಣಕಾರಿಯಂತೆ ನೋಡುತ್ತಾರೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ.
2014ರಲ್ಲಿ ಪ್ಯಾರಿಸ್ ನಲ್ಲಿ ನಡೆದಿದೆ ಎನ್ನಲಾದ ಘಟನೆಗೆ ಸಂಬಂಧಪಟ್ಟಂತೆ ಯಾವುದೇ ಸಾಕ್ಷಿಗಳಿಲ್ಲ. ನಮ್ಮ ಮಧ್ಯೆ ರೊಮ್ಯಾಂಟಿಕ್ ಸಂಬಂಧಗಳಿದ್ದವು ಎಂಬುದಕ್ಕೆ ಯಾವುದೇ ಕುರುಹುಗಳಿಲ್ಲ. ಆದರೂ ಕೂಡ ಇದು ಹುಡುಗಿ ಹೇಳುತ್ತಿದ್ದಾಳೆ, ಹುಡುಗಿ ಜೀವನ ಎಂದು ಜನರು ನಂಬುತ್ತಾರೆ.
2014 ಜನವರಿಯಲ್ಲಿ ನಾನು ವಿದೇಶಕ್ಕೆ ಹೋಗಿಲ್ಲ ಎಂದು ನನ್ನ ಪಾಸ್ ಪೋರ್ಟ್ ಹೇಳುತ್ತದೆ. ಆ ಸಮಯದಲ್ಲಿಯೇ ಪ್ಯಾರಿಸ್ ನಲ್ಲಿ ಅಕ್ರಮ ಸಂಬಂಧವೇರ್ಪಟ್ಟಿದೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಮಾಧ್ಯಮಗಳಲ್ಲಿ ಫೋಟೊಶಾಪ್ ಮಾಡಿದ ಚಿತ್ರಗಳು ಹರಿದಾಡುತ್ತಿವೆ. ಮರುದಿನವೇ ಈ ಚಿತ್ರವನ್ನು ನನಗೆ ನನ್ನ ಮಾಜಿ ಪತ್ನಿ ಮತ್ತು ಸ್ನೇಹಿತರು ತೋರಿಸಿದ್ದಾರೆ ಎನ್ನುತ್ತಾರೆ ಹೃತಿಕ್.
ಈ ಪ್ರಶ್ನೆಗಳನ್ನೆಲ್ಲಾ ಆರೋಪಿಸುತ್ತಿರುವ ಮಹಿಳೆಗೆ ಯಾರೂ ಕೇಳುವುದಿಲ್ಲ. ಏಕೆಂದರೆ ಆಕೆ ಮಹಿಳೆ ಎಂಬ ಕಾರಣಕ್ಕೆ. ಹೌದು ನಮ್ಮ ಕುಟುಂಬದಲ್ಲಿ ಮಹಿಳೆಗೆ ಗೌರವ ನೀಡುವುದನ್ನು ಹೇಳಿಕೊಟ್ಟಿದ್ದಾರೆ. ನಾನು ನನ್ನ ಮಹಿಳಾ ಸಹೋದ್ಯೋಗಿಗಳನ್ನು ಗೌರವಿಸುತ್ತೇನೆ, ನನ್ನ ಮಕ್ಕಳಿಗೆ ಕೂಡ ಅದನ್ನೇ ಹೇಳಿಕೊಡುತ್ತೇನೆ ಎಂದರು.
ಕಂಗನಾ ಇ ಮೇಲ್ ರವಾನೆಯಾದ ಬಗ್ಗೆ ಮಾಡಿರುವ ಆರೋಪಕ್ಕೆ ಸಂಬಂಧಪಟ್ಟಂತೆ, ನನ್ನ ಕಂಪ್ಯೂಟರ್ ನಿಂದ ಸುಮಾರು 3,000 ಮೇಲ್ ಗಳು ಹೋಗಿವೆ. ಅವುಗಳಲ್ಲಿ ಆರೋಪ ಮಾಡುತ್ತಿರುವವರಿಗೂ ಕಳುಹಿಸಿದ್ದಿದೆ. ನನ್ನ ಲ್ಯಾಪ್ ಟಾಪ್, ಫೋನ್ ಗಳನ್ನು ಸೈಬರ್ ಅಪರಾಧ ಇಲಾಖೆಗೆ ನೀಡಿದ್ದೇನೆ. ಅವರು ತೀರ್ಮಾನ ಮಾಡುತ್ತಾರೆ. ಆದರೆ ಆರೋಪ ಮಾಡುತ್ತಿರುವ ಮಹಿಳೆ ತಮ್ಮ ಬಳಿಯ ಲ್ಯಾಪ್ ಟಾಪ್, ಫೋನ್ ಗಳನ್ನು ಪೊಲೀಸರಿಗೆ ಏಕೆ ನೀಡುತ್ತಿಲ್ಲ ಎಂದು ಕಂಗನಾರನ್ನು ಉದ್ದೇಶಿಸಿ ಹೇಳಿದರು.
ಕಳೆದ 4 ವರ್ಷಗಳಿಂದ ಸತತವಾಗಿ ಈ ವಿಷಯ ಕುರಿತು ನನ್ನನ್ನು ಹಿಂಸಿಸಲಾಗುತ್ತಿದೆ. ಸಮಾಜದಲ್ಲಿ ಮಹಿಳೆಯರ ಪರವಾದ ವಾದ, ಬೇಧಭಾವ ನನ್ನನ್ನು ರಕ್ಷಿಸಿಕೊಳ್ಳಲು ಅಸಹಾಯಕನನ್ನಾಗಿ ಮಾಡಿದೆ. ನನ್ನ ಜೀವನದಲ್ಲಿ ಇಲ್ಲಿಯವರೆಗೆ ಯಾವೊಬ್ಬ ಮಹಿಳೆ ಅಥವಾ ಪುರುಷನ ಜೊತೆ ಜಗಳವಾಡಿಲ್ಲ. ನನ್ನ ವಿಚ್ಛೇದನದಲ್ಲಿ ಕೂಡ ಜಗಳವಾಗಿಲ್ಲ. ನಾನು ಮತ್ತು ನನ್ನ ಸುತ್ತಮುತ್ತಲಿರುವವರು ಸಮಾಧಾನ, ಶಾಂತಿಯನ್ನೇ ಬಯಸಿದ್ದಾರೆ. ಇಲ್ಲಿ ನಾನು ಯಾರನ್ನೂ ಆರೋಪಿಸುತ್ತಿಲ್ಲ ಮತ್ತು ಯಾರ ಬಗ್ಗೆಯೂ ತೀರ್ಪು ನೀಡುತ್ತಿಲ್ಲ. ಆದರೆ ನನ್ನ ಸತ್ಯವನ್ನು ರಕ್ಷಿಸಬೇಕಾಗಿದೆ ಎಂದಿದ್ದಾರೆ.

