ಸಿಕ್ಕಿಂ ಬಂಡುಕೋರರ ರಾಜ್ಯ ಎಂದು ಕರೆದ ಪ್ರಿಯಾಂಕಾ ಛೋಪ್ರಾಗೆ ಟ್ವಿಟ್ಟರ್ ನಲ್ಲಿ ಟೀಕೆಗಳ ಸುರಿಮಳೆ

ಸಿಕ್ಕಿಂ ರಾಜ್ಯ ಬಂಡುಕೋರರ ಸಮಸ್ಯೆಯನ್ನೆದುರಿಸುತ್ತಿದೆ ಎಂದು ಹೇಳಿದ್ದಕ್ಕೆ ಬಾಲಿವುಡ್ ನಟಿ...
ಪ್ರಿಯಾಂಕಾ ಛೋಪ್ರಾ
ಪ್ರಿಯಾಂಕಾ ಛೋಪ್ರಾ
ಟೊರೊಂಟೊ: ಸಿಕ್ಕಿಂ ರಾಜ್ಯ ಬಂಡುಕೋರರ ಸಮಸ್ಯೆಯನ್ನೆದುರಿಸುತ್ತಿದೆ ಎಂದು ಹೇಳಿದ್ದಕ್ಕೆ ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಇದೀಗ ಸಮಸ್ಯೆಗೀಡಾಗಿದ್ದಾರೆ. ಈ ಬಗ್ಗೆ ಪ್ರಿಯಾಂಕಾ ಛೋಪ್ರಾ ಈಗಾಗಲೇ ಸಿಕ್ಕಿಂ ಸರ್ಕಾರದ ಕ್ಷಮೆ ಕೋರಿದ್ದಾರೆ. ಆದರೂ ಸ್ಪಷ್ಟವಾದ ನುಡಿಗಳಲ್ಲಿ ಮತ್ತೊಮ್ಮೆ ಕ್ಷಮೆ ಕೋರಬೇಕೆಂದು ಸಿಕ್ಕಿಂ ಸರ್ಕಾರ ಹೇಳಿದೆ. 
ಟೊರೆಂಟೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಹೊರಗೆ ಸಂದರ್ಶನವೊಂದರಲ್ಲಿ ಮಾತನಾಡುವಾಗ ಸಿಕ್ಕಿಂ ರಾಜ್ಯದ ಬಗ್ಗೆ ಪ್ರಿಯಾಂಕಾ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ತಮ್ಮ ನಿರ್ಮಾಣದ ಸಿಕ್ಕಿಂ ಚಿತ್ರ 'ಪಹುನಾ: ದ ಲಿಟ್ಲ್ ವಿಸಿಟರ್ಸ್' ಬಗ್ಗೆ ಚರ್ಚೆ ನಡೆಸುತ್ತಿದ್ದರು. ಈ ವೇಳೆ ಇದೊಂದು ಸಿಕ್ಕಿಂ ಚಿತ್ರ. ಸಿಕ್ಕಿಂ ಈಶಾನ್ಯ ಭಾರತದ ಸಣ್ಣ ರಾಜ್ಯವಾಗಿದ್ದು ಇಲ್ಲಿ ಚಲನಚಿತ್ರೋದ್ಯಮವಿರಲಿಲ್ಲ ಮತ್ತು ಇದುವರೆಗೆ ಯಾರೂ ಚಿತ್ರಗಳನ್ನು ಮಾಡಿರಲಿಲ್ಲ. ಇಲ್ಲಿ ಬಂಡುಕೋರರ ಸಮಸ್ಯೆ ಮತ್ತು ಇತ್ಯಾದಿ ತೊಂದರೆಗಳೇ ಹೆಚ್ಚು. ಹೀಗಾಗಿ ಇದುವೇ ಸಿಕ್ಕಿಂ ರಾಜ್ಯದ ಮೊದಲ ಚಿತ್ರವಾಗಿದೆ ಎಂದು ಸಂದರ್ಶನದಲ್ಲಿ ಹೇಳಿದ್ದರು.
ಇದಕ್ಕೆ ಸಿಕ್ಕಿಂ ರಾಜ್ಯದವರಿಂದ ಮತ್ತು ಬೇರೆಯವರಿಂದ ಟ್ವಿಟ್ಟರ್ ನಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಸಿಕ್ಕಿಂ ಒಂದು ಶಾಂತಿಯುತ ರಾಜ್ಯವಾಗಿದ್ದು ಇಲ್ಲಿ ಬಂಡುಕೋರರ ಸಮಸ್ಯೆಯಿಲ್ಲ. ಜವಾಬ್ದಾರಿಯುತವಾಗಿ ಮಾತನಾಡಿ ಎಂದು ಸಿಕ್ಕಿಂ ರಾಜಧಾನಿ ಗಾಂಗ್ ಟಾಕ್ ನಿಂದ ಒಬ್ಬರು ಹೇಳಿದ್ದರೆ ಮತ್ತೊಬ್ಬರು, ಸೆಲೆಬ್ರಿಟಿಗಳು ರಾಜಕೀಯವಾಗಿ ಅನಕ್ಷರಸ್ಥರಾಗಿರುತ್ತಾರೆ. ಈ ಹಿಂದೆ ಕೆಲವು ಸೆಲೆಬ್ರಿಟಿಗಳಿಗೆ ಭಾರತದ ರಾಷ್ಟ್ರಪತಿ ಯಾರು ಎಂದು ಕೇಳಿದರೆ ಗೊತ್ತಿರಲಿಲ್ಲ. ಹೀಗಾಗಿ ಅವರಿಂದ ರಾಜಕೀಯ ಜ್ಞಾನವನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಮತ್ತೊಬ್ಬರು ಸಿಕ್ಕಿಂ ರಾಜ್ಯದ ಮೊದಲ ಸಿನಿಮಾ ಪಹುನಾ ಅಲ್ಲ ಎಂದು ಕೂಡ ಕಮೆಂಟ್ ಮಾಡಿದ್ದಾರೆ. 
ಇಲ್ಲಿ ಇನ್ನೊಂದು ಆಸಕ್ತಿಕರ ವಿಷಯವೆಂದರೆ ಪ್ರಿಯಾಂಕಾ ಛೋಪ್ರಾ ಬಿಜೆಪಿ ನೇತೃತ್ವದ ಅಸ್ಸಾಂ ಸರ್ಕಾರದ ಪ್ರವಾಸೋದ್ಯಮ ಅಂಬಾಸಿಡರ್ ಕೂಡ ಹೌದು. 
ಪ್ರಿಯಾಂಕಾ ಛೋಪ್ರಾ ನಿರ್ಮಾಣದ ಪಹುನಾ ಚಿತ್ರ ಮೂವರು ನೇಪಾಳಿ ಮಕ್ಕಳ ಕುರಿತಾಗಿದ್ದು, ಅವರು ತಮ್ಮ ಪೋಷಕರಿಂದ ಬೇರ್ಪಟ್ಟಿರುತ್ತಾರೆ. ನೇಪಾಳದಲ್ಲಿ ಮಾವೋವಾದಿಗಳಿಂದ ತಪ್ಪಿಸಿಕೊಂಡು ಸಿಕ್ಕಿಂಗೆ ಹೋಗುತ್ತಾರೆ.
ಈ ಬಗ್ಗೆ ಪ್ರಿಯಾಂಕಾ ಛೋಪ್ರಾ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಆದರೆ ರಾಜ್ಯ ಸರ್ಕಾರ ಔಪಚಾರಿಕವಾಗಿ ಮತ್ತೊಮ್ಮೆ ನಟಿಯಿಂದ ಕ್ಷಮೆ ಕೋರಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com