ಸಂಜು ಚಿತ್ರದ ದೃಶ್ಯ
ಸಂಜು ಚಿತ್ರದ ದೃಶ್ಯ

'ಸಂಜು' ಸಿನಿಮಾ ವೀಕ್ಷಿಸಲು ಇಚ್ಛಿಸದ ಈ ವಿಶೇಷ ವ್ಯಕ್ತಿ ಯಾರು ಗೊತ್ತಾ?

ಸಂಜಯ್ ದತ್ ಜೀವನಾಧಾರಿತ ಚಿತ್ರ ಸಂಜು ಬಾಲಿವುಡ್ ನಲ್ಲಿ ಹೆಚ್ಚು ಸದ್ದುಮಾಡಿ ಹಣ ಗಳಿಕೆಯಲ್ಲಿಯೂ ...
Published on

ಸಂಜಯ್ ದತ್ ಜೀವನಾಧಾರಿತ ಚಿತ್ರ ಸಂಜು ಬಾಲಿವುಡ್ ನಲ್ಲಿ ಹೆಚ್ಚು ಸದ್ದುಮಾಡಿ ಹಣ ಗಳಿಕೆಯಲ್ಲಿಯೂ ಮುಂಚೂಣಿಯಲ್ಲಿರುವುದು ಗೊತ್ತೇ ಇದೆ. ಅನೇಕರು ಚಿತ್ರ ವೀಕ್ಷಿಸಿ ರಣಬೀರ್ ಕಪೂರ್ ನಟನೆಗೆ ಸಹ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 

ಸಂಜಯ್ ದತ್ ಜೀವನದಲ್ಲಿ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದು ನಂತರ ಆ ವಿಷಯದಲ್ಲಿ ಜೈಲು ಸೇರಿದ್ದು ಬಹಳ ಪ್ರಮುಖ ಘಟನೆ. 1993 ರ ಮುಂಬೈ ಸ್ಫೋಟ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಸಂಜಯ್ ದತ್ ವಿರುದ್ಧ ಅಕ್ರಮ ಶಸ್ತ್ರಾಸ್ತ್ರ(ಎಕೆ-56 ರೈಫಲ್) ಹೊಂದಿದ್ದ ಅಪರಾಧ ಸಾಬೀತಾಗಿತ್ತು. ಇದೇ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ ಸಂಜಯ್ ದತ್ 2016 ರಲ್ಲಿ ಬಿಡುಗಡೆಯಾಗಿದ್ದರು.

ಸಂಜಯ್ ದತ್ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ವಿಷಯವನ್ನು ಮೊದಲು ಬಯಲಿಗೆ ತಂದಿದ್ದು ಮುಂಬೈಯ ಕ್ರೈಂ ವರದಿಗಾರ ಬಲ್ಜೀತ್ ಪರ್ಮರ್. 1993ರ ಏಪ್ರಿಲ್ 14ರಂದು ಮುಂಬೈಯ ಟಾಬ್ಲಾಯ್ಡ್ ಪತ್ರಿಕೆಯಲ್ಲಿ ಸಂಜಯ್ ದತ್ ಎಕೆ-56 ರೈಫಲ್ ಹೊಂದಿದ್ದಾರೆ ಎಂಬ ಸ್ಫೋಟಕ ಸುದ್ದಿಯನ್ನು ಹೊರಹಾಕಿದ್ದರು. 5 ದಿನಗಳ ನಂತರ ಸಂಜಯ್ ದತ್ ರ ಬಂಧನವೂ ಆಯಿತು.

ಅಕ್ರಮ ಶಸ್ತ್ರಾಸ್ತ್ರ ಹೊಂದುವುದರ ವಿರುದ್ಧ ಇರುವ ಟಾಡಾ ಕಾಯ್ದೆಯಡಿ ಅವರನ್ನು ಬಂಧಿಸಲಾಯಿತು. ಹಲವು ವರ್ಷಗಳ ಕಾನೂನಾತ್ಮಕ ಹೋರಾಟದ ನಂತರ 2006ರ ನವೆಂಬರ್ ನಲ್ಲಿ ಟಾಡಾ ನ್ಯಾಯಾಲಯ ಅವರ ವಿರುದ್ಧ ಭಯೋತ್ಪಾದನೆಗೆ ಕುಮ್ಮಕ್ಕು ನೀಡಿದ್ದ ಕೇಸಿನಿಂದ ಬಿಡುಗಡೆಗೊಳಿಸಿತು. ಸ್ವರಕ್ಷಣೆಗಾಗಿ ಅವರು ಬಂದೂಕು ಹೊಂದಿದ್ದರು ಎಂದು ತೀರ್ಪು ನೀಡಿತು. ಆದರೆ ಶಸ್ತ್ರಾಸ್ತ್ರ ಕಾಯ್ದೆಯಡಿ ಅಪರಾಧಿ ಎಂದು ಸಾಬೀತಾಗಿ ನಂತರ 6 ವರ್ಷಗಳ ಕಾಲ ಜೈಲುವಾಸ ಅನುಭವಿಸಿದರು.

ಈ ವಿಷಯ ಇತ್ತೀಚೆಗೆ ರಾಜ್ ಕುಮಾರ್ ಹಿರಾನಿ ನಿರ್ದೇಶನದ ಸಂಜು ಚಿತ್ರದಲ್ಲಿ ತೋರಿಸಲಾಗಿದೆ. ಆದರೆ ಬಲ್ಜೀತ್ ಪರ್ಮರ್ ಈ ಚಿತ್ರವನ್ನು ನೋಡಿಲ್ಲ. ನೋಡುವುದೂ ಇಲ್ಲ ಎಂದು ದೃಢ ನಿಶ್ಚಯ ಮಾಡಿದ್ದಾರೆ. ಇದೊಂದು ತರಾತುರಿಯಲ್ಲಿ ವ್ಯಕ್ತಿಯನ್ನು ವೈಭವೀಕರಿಸಿ ತರಾತುರಿಯಲ್ಲಿ ಮಾಡಿರುವ ಚಿತ್ರವಷ್ಟೆ, ಹೀಗಾಗಿ ನೋಡುವ ಆಸಕ್ತಿಯಿಲ್ಲ ಎಂದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಜೀವನಾಧಾರಿತ ಚಿತ್ರಗಳೆಂದು ಹೇಳಿಕೊಳ್ಳುವ ಸಿನಿಮಾಗಳು ಆ ವ್ಯಕ್ತಿಗೆ ಹೊಂದುವಂತೆ ನಿರೂಪಿಸಲಾಗುತ್ತದೆ. ಇದು ಪ್ರೇಕ್ಷಕರಿಗೆ ಉತ್ತೇಜನ ನೀಡುವುದಿಲ್ಲ. ಬದಲಿಗೆ ಅವರ ಮನಸ್ಸಿಗೆ ಅಸ್ಪಷ್ಟವಾಗಿ ಕಾಣಿಸುವ ತೆರೆಯ ಮೇಲಿನ ಹೊಗೆಯಂತಾಗಿರುತ್ತದೆ ಎಂದಿದ್ದಾರೆ.
ಡ್ರಗ್ಸ್ ಬಗ್ಗೆ ಹೇಳುವುದು, ಹೆಂಗಳೆಯರೊಂದಿಗೆ ಹಾಸಿಗೆ ಹಂಚಿಕೊಂಡಿರುವುದನ್ನು ಹೇಳುವುದು, ಸಮಾಜದಲ್ಲಿ ಅಥವಾ ವ್ಯವಸ್ಥೆಯಲ್ಲಿ ಲೋಪದೋಷ ಕಂಡುಹುಡುಕುವುದು, ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದನ್ನು ವೈಭವೀಕರಿಸುವುದು ಇತ್ಯಾದಿಗಳು ಸಂಜುವಿನಲ್ಲಿದ್ದರೆ ಅದನ್ನು ನೋಡದಿರುವುದಕ್ಕೆ ನನಗೆ ಯಾವ ಪಶ್ಚಾತಾಪ ಕೂಡ ಇಲ್ಲ ಎನ್ನುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com