ನವದೆಹಲಿ: ಚಿತ್ರರಂಗದಲ್ಲಿ ಹೊರಗಿನವರು ತಾರತಮ್ಯ ಎದುರಿಸಿದರೆ ಧೈರ್ಯಗೆಡಬಾರದು ಎಂದು ಬಾಲಿವುಡ್ ನಟಿ ಕಂಗನಾ ರಾನಾತ್ ಹೇಳಿದ್ದಾರೆ.
ನಿನ್ನೆ ದೆಹಲಿಯಲ್ಲಿ ನ್ಯೂಸ್ 18 ರೈಸಿಂಗ್ ಇಂಡಿಯಾ ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನೀವು ಹೊರಗಿನವರಾಗಿದ್ದರೆ ಆರಂಭದಲ್ಲಿ ತಾರತಮ್ಯ ಎದುರಿಸುವುದು ಸಹಜ. ಯಾಕೆಂದರೆ ಹೊರಗಿನವರು ಹೊಸಬರಾಗಿ ತಿಳಿದುಕೊಳ್ಳುವ ವಿಷಯಗಳು ಹಲವಿರುತ್ತದೆ. ಹೊಸಬರಿಗೆ ಇಲ್ಲಿನ ಜನರು ಜವಾಬ್ದಾರರಾಗುವುದಿಲ್ಲ, ಅವರೇ ನಿರಂತರವಾಗಿ ಪಟ್ಟುಬಿಡದೆ ವಿಷಯಗಳನ್ನು ಗಮನಿಸುತ್ತಾ ತಿಳಿದುಕೊಳ್ಳಬೇಕು. ಇಂದು ನಾನು ಈ ವಿಷಯ ಏಕೆ ಮಾತನಾಡುತ್ತಿದ್ದೇನೆಂದರೆ ನಾನು ಆ ಹಂತಗಳನ್ನು ದಾಟಿ ಈ ಮಟ್ಟಕ್ಕೆ ತಲುಪಿದ್ದೇನೆ. ಸಾಕಷ್ಟು ವಿಷಯಗಳನ್ನು ಇಲ್ಲಿ ಕಲಿತಿದ್ದೇನೆ ಎಂದು ಕಂಗನಾ ಹೇಳಿದರು.
ತಮ್ಮ ಹರಿತವಾದ ದಿಟ್ಟ ಮಾತುಗಳಿಗೆ ಹೆಸರಾಗಿರುವ ಕಂಗನಾ, ಕಳೆದ ವರ್ಷ ಸ್ವಜನಪಕ್ಷಪಾತದ ಕುರಿತು ಮಾತನಾಡಿ ಸಾಕಷ್ಟು ಸುದ್ದಿಯಾಗಿದ್ದರು.
ನಾನು ನನ್ನ ಗಮನವನ್ನು ಕೇಂದ್ರೀಕರಿಸಿ ಹೌದು ಇದು ಹೀಗೆಯೇ ಕೆಲಸ ಮಾಡುವುದು ಎಂದು ಅರ್ಥಮಾಡಿಕೊಳ್ಳುತ್ತೇನೆ. ಆರಂಭದ ಹಂತದಲ್ಲಿ ಪ್ರತಿಯೊಬ್ಬರೂ ನಮ್ಮನ್ನು ಅದೇ ರೀತಿ ನೋಡುತ್ತಾರೆ. ಇದು ನಿಮಗೆ ಮಾತ್ರ ಆಗುತ್ತದೆ ಎಂದು ಭಾವಿಸಬೇಡಿ. ಈ ಜಗತ್ತು ನನ್ನ ಬಗ್ಗೆ ಯಾಕೆ ಹೀಗಿದೆ ಎಂದು ಭಾವಿಸಬೇಡಿ. ಜಗತ್ತು ಇರುವ ಹಾಗೆಯೇ ಇರುತ್ತದೆ. ಅದು ಯಾರಿಗೂ ಸರಿಯಾಗಿರುವುದಿಲ್ಲ. ಅದರ ಸುತ್ತ ಕೆಲಸ ಮಾಡಿ ಸಮಸ್ಯೆಗಳಿಂದ ಹೊರಬರುವ ಜಾಣ್ಮೆ ನಿಮ್ಮಲ್ಲಿರಬೇಕು ಎನ್ನುತ್ತಾರೆ ಈ ನಟಿ.
ಬಾಲಿವುಡ್ ನಲ್ಲಿ ನಟನಾ ಕ್ಷೇತ್ರಕ್ಕೆ ಬಂದ ಆರಂಭದ ದಿನಗಳನ್ನು ಮೆಲುಕು ಹಾಕಿದ ಕಂಗನಾ, ನನಗೆ ಆರಂಭದಲ್ಲಿ ಸಿನಿಮಾದಲ್ಲಿ ಶಾಟ್ ಮತ್ತು ಸೀನ್ ಗಳ ನಡುವಿನ ವ್ಯತ್ಯಾಸ ಗೊತ್ತಾಗುತ್ತಿರಲಿಲ್ಲ. ಯಾರಾದರೂ ಈಗ ನಿಮ್ಮ ಎರಡು ದೃಶ್ಯಗಳಿವೆ ಎಂದು ಹೇಳಿದರೆ ಓ, ಹಾಗಾದರೆ ಇನ್ನು 30 ನಿಮಿಷಗಳಲ್ಲಿ ನನ್ನ ಕೆಲಸ ಮುಗಿಯುತ್ತದೆ ಎಂದು ಭಾವಿಸುತ್ತಿದ್ದೆ.
ಬ್ರಾಂಡ್ ಬಿಲ್ಡಿಂಗ್ ಮತ್ತು ಬ್ರಾಂಡ್ ಎಂಡೋರ್ಸ್ ಮೆಂಟ್ ಗಳ ಅರ್ಥ ಕೂಡ ನನಗೆ ಗೊತ್ತಾಗುತ್ತಿರಲಿಲ್ಲ. ಯಾವುದೋ ಒಂದು ಮ್ಯಾಗಜಿನ್ ನನ್ನ ಫೋಟೋವನ್ನು ಮುಖಪುಟದಲ್ಲಿ ಹಾಕಲು ಇಚ್ಚಿಸುತ್ತದೆ ಎಂದಾಗ ನನ್ನ ಮ್ಯಾನೇಜರ್ ಹತ್ತಿರ ಹಣದ ವಿಚಾರ ಕುರಿತು ಮಾತನಾಡಿ ಎಂದು ಹೇಳಿದ್ದೆ. ಅದಕ್ಕೆ 5 ವರ್ಷಗಳ ಕಾಲ ನನಗೆ ಅವರು ನಿಷೇಧ ಹೇರಿದರು. ಆದರೆ ಆಗ ಅದರ ವ್ಯತ್ಯಾಸ ನನಗೆ ತಿಳಿದಿರಲಿಲ್ಲ. ಸಿನಿಮಾ ಹಿನ್ನೆಲೆಯಿಲ್ಲದೆ ಬಂದ ನಾನು ಆರಂಭದ ದಿನಗಳಲ್ಲಿ ಅಪ್ರಬುದ್ಧಳಾಗಿದ್ದೆ. ನನಗೆ ಹೀಗೆ ಮಾಡು, ಹಾಗೆ ಮಾಡು ಎಂದು ಮಾರ್ಗದರ್ಶನ ಮಾಡುವವರು ಯಾರೂ ಇರಲಿಲ್ಲ, ನನ್ನಷ್ಟಕ್ಕೆ ನಾನು ಕಲಿತುಕೊಂಡೆ ಎನ್ನುತ್ತಾರೆ.
ಬಾಲಿವುಡ್ ಚಿತ್ರ ನಿರ್ದೇಶಕ ಕರಣ್ ಜೋಹರ್ ಬಗ್ಗೆ ತಮ್ಮ ಅಭಿಪ್ರಾಯ ಬದಲಾಗಿದೆಯೇ ಎಂದು ಕೇಳಿದಾಗ, ಹಾಗೆ ಮಾಡಲು ನಾನು ಯಾರು? ನನ್ನ ಉದ್ದೇಶ ಅದು ಆಗಿರಲಿಲ್ಲ. ರಕ್ತಪಾತ, ಹಣ, ಸಂಪತ್ತಿನಲ್ಲಿ ಅವರಿಗೆ ನಂಬಿಕೆಯಿದೆ. ಅಂತಹ ಪ್ರತಿಭೆಗಳು ಅವರಿಗೆ ಬೇಕಾಗಿದೆ. ಅವರು ನಂಬದಿರುವ ಪ್ರತಿಭೆಗಳಲ್ಲಿ ನಂಬಿಕೆಯಿಡಬೇಕೆಂದು ನಾನು ಹೇಳಲು ಸಾಧ್ಯವಿಲ್ಲ, ನಾನು ಏನು ಹೇಳಲು ಬಯಸುತ್ತೇನೆಯೋ ಅದನ್ನು ಹೇಳಲು ಸಾಧ್ಯ ಎಂದರು.
ನಾನು ಗಮನಿಸಿದ ಮತ್ತು ಕಂಡುಕೊಂಡ ರೀತಿಯಲ್ಲಿ ಸ್ವಜನಪಕ್ಷಪಾತದ ಬಗ್ಗೆ ಹೇಳಿದ್ದೇನೆ. ಸಮಾಜಸೇವೆ ಮಾಡಲು ಇಚ್ಛೆಯಿದ್ದರೂ ಕೂಡ ನಾನಿಲ್ಲಿ ಕಾರ್ಯಕರ್ತೆ ಅಲ್ಲ, ಸ್ವಜನಪಕ್ಷಪಾತವೆಂಬುದು ಎಲ್ಲಾ ಕಡೆ ಇರುತ್ತದೆ. ಅವುಗಳನ್ನು ನೋಡಿಕೊಂಡೇ ನಾವು ಬೆಳೆದಿದ್ದೇವೆ. ನಾನು ಅದರ ಬಗ್ಗೆ ಮಾತನಾಡಿದಾಗ ಜನರು ಉಪಪ್ರಜ್ಞೆಯಿಂದ ನೋಡುತ್ತಿದ್ದಿರಬಹುದು, ಅವರು ಅದರ ಬಗ್ಗೆ ಮಾತನಾಡಲು ಇಚ್ಛಿಸಿದ್ದಿರಬಹುದು. ನಾನು ನೀಡಿದ ಹೇಳಿಕೆಗೆ ಬೇಗನೆ ಪ್ರತಿಕ್ರಿಯೆ ಸಿಕ್ಕಿತು ಎಂದು ಕಂಗನಾ ರಾನಾತ್ ಹೇಳಿದರು.
Advertisement