ಮುಂಬೈ: ಮಾಜಿ ಕೇಂದ್ರ ಸಚಿವ ದಿ.ಪ್ರಮೋದ್ ಮಹಾಜನ್ ಅವರ ಪುತ್ರ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ರಾಹುಲ್ ಮಹಾಜನ್ ಅವರು ಮಂಗಳವಾರ ಮೂರನೇ ಮದುವೆಯಾಗಿದ್ದು, ಮುಂಬೈನ ಖಾಸಗಿ ಸಮಾರಂಭದಲ್ಲಿ ಕಜಕಿಸ್ತಾನ ಮಾಡೆಲ್ ನತಾಲಿಯಾ ಇಲಿನಾ ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ.
ಮುಂಬೈನ ಮಲಬಾರ್ ಹಿಲ್ಸ್ ನ ದೇವಸ್ಥಾನದಲ್ಲಿ 43 ವರ್ಷದ ರಾಹುಲ್ 25 ವರ್ಷದ ನತಾಲಿಯಾಳನ್ನು ವಿವಾಹವಾದರು. ಆಪ್ತ ಸ್ನೇಹಿತರು ಮತ್ತು ಸಂಬಂಧಿಕರು ಮಾತ್ರ ಈ ಮದುವೆಯಲ್ಲಿ ಭಾಗವಹಿಸಿದ್ದರು.
ತಮ್ಮ ಮೂರನೇ ಮದುವೆ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ರಾಹುಲ್, ಮೊದಲಿನ ಎರಡು ಮದುವೆ ಕೂಡ ತುಂಬಾ ತರಾತುರಿಯಲ್ಲಿ ಆಯಿತು. ಯೋಚಿಸಿ ನಿರ್ಧಾರ ಕೈಗೊಳ್ಳಲು ಸಮಯವಿರಲಿಲ್ಲ. ಇದು ನನ್ನ ಮೂರನೇ ಮದುವೆ. ಇಬ್ಬರೂ ಇಷ್ಟಪಟ್ಟು, ಯೋಚಿಸಿ ನಿರ್ಧಾರ ಕೈಗೊಂಡಿದ್ದೇವೆ ಎಂದಿದ್ದಾರೆ.
ವಾಸ್ತವವಾಗಿ ನಾನು ಈ ವಿಚಾರವಾಗಿ ಕನಿಷ್ಟ ಒಂದು ವರ್ಷದವರೆಗೆ ಯಾರಿಗೂ ಹೇಳಲು ಬಯಸಿರಲಿಲ್ಲ. ಇದು ನನ್ನ ಮೂರನೇ ಮದುವೆಯಾಗಿದೆ. ಆದ್ದರಿಂದ ಜನರು ಮತ್ತೊಮ್ಮೆ ಗಾಸಿಪ್ ಮಾಡುವುದನ್ನು ನಾನು ಬಯಸುವುದಿಲ್ಲ ಎಂದರು.
ಇದಕ್ಕೂ ಮುಂಚಿತವಾಗಿ, ರಾಹುಲ್ ಮಹಾಜನ್ ಅವರು ಪೈಲಟ್ ಶ್ವೇತಾ ಸಿಂಗ್ ಮತ್ತು ರಿಯಾಲಿಟಿ ಶೋ ಸ್ಪರ್ಧಿ ದಿಮ್ಪಿ ಗಂಗೂಲಿಯವರನ್ನು ಮದುವೆಯಾಗಿದ್ದರು.
ಈಗಾಗಲೇ ಎರಡು ಮದುವೆ ಆಗಿ ಮುರಿದುಬಿದ್ದ ನಂತರ, ಮೂರನೇ ಮದುವೆ ಬಗ್ಗೆ ಜನರು ಗಾಸಿಪ್ ಮಾಡುತ್ತಾರೆ ಎಂದರಿತ ಅವರು, ಮದುವೆ ವಿಚಾರ ಬಹಿರಂಗಪಡಿಸಿರಲಿಲ್ಲ.