
ಮುಂಬೈ: ಮಹಾರಾಷ್ಟ್ರ ನವ ನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಅವರನ್ನು ಟೀಕಿಸಿದ್ದಕ್ಕಾಗಿ ಬಾಲಿವುಡ್ ನಟಿ ತನುಶ್ರೀ ದತ್ತ ವಿರುದ್ಧ ಪೊಲೀಸರು ಮಾನಹಾನಿ ಪ್ರಕರಣ ದಾಖಲಿಸಿದ್ದಾರೆ.
ತನುಶ್ರೀ ದತ್ತ ತಮ್ಮ ಪಕ್ಷದ ಮುಖ್ಯಸ್ಥರ ಮಾನ ಹಾನಿ ಮಾಡಿದ್ದಾರೆ ಎಂದು ಆರೋಪಿಸಿ ಎಂಎನ್ ಎಸ್ ಜಿಲ್ಲಾ ಘಟಕದ ಅಧ್ಯಕ್ಷ ಸುಮಂತ್ ದಾಸ್ ದೂರು ದಾಖಲಿಸಿದ್ದ ನಂತರ ಬೀಡ್ ಜಿಲ್ಲೆಯ ಕೈಜ್ ಪೊಲೀಸರು ಮಾನಹಾನಿ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಐಪಿಸಿ ಸೆಕ್ಷನ್ 500 ರ ಅಡಿಯಲ್ಲಿ ತನುಶ್ರೀ ದತ್ತ ವಿರುದ್ಧ ಗುರುತಿಸಲಾಗದ ಅಪರಾಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ. ದೂರುದಾರರು ನ್ಯಾಯಾಲಯದಲ್ಲಿ ಮನವಿ ಮಾಡಿಕೊಳ್ಳುವಂತೆ ಹೇಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
2008ರಲ್ಲಿ ಚಿತ್ರೀಕರಣವೊಂದರ ಸಂದರ್ಭದಲ್ಲಿ ಬಾಲಿವುಡ್ ನಟ ನಾನಾ ಪಟೇಕರ್ ತಮ್ಮ ವಿರುದ್ಧ ಲೈಂಗಿಕ ದೌರ್ಜನ್ಯವೆಸಗಿದ್ದರು ಎಂದು 34 ವರ್ಷದ ತನುಶ್ರೀ ದತ್ತ ಆರೋಪಿಸಿದ್ದರು. ಅಲ್ಲದೇ, ಹಾರ್ನ್ ಓಕೆ ಪ್ಲೀಸಸ್ ಚಿತ್ರದಿಂದ ಹೊರ ಬಂದಾಗ ತಮ್ಮ ಕಾರನ್ನು ಧ್ವಂಸಗೊಳಿಸಿದ ಪ್ರಕರಣದಲ್ಲಿ ಎಂಎನ್ ಎಸ್ ಕೈವಾಡವಿದೆ ಎಂದು ಆಪಾದಿಸಿದ್ದರು.
ಎಂಎನ್ ಎಸ್ ನಿಂದ ತಮಗೆ ಬೆದರಿಕೆ ನೀಡಲಾಗಿದ್ದು, ಇತ್ತೀಚಿಗೆ ಇಬ್ಬರು ವ್ಯಕ್ತಿಗಳು ತಮ್ಮ ಮನೆ ಬಾಗಿಲವರೆಗೂ ಬಂದಿದ್ದರು. ಎಂಎನ್ ಎಸ್ ಯುವ ವಿಭಾಗ ನಿನ್ನೆ ತಾನು ಭಾಗವಹಿಸಿದ್ದ ಬಿಗ್ ಬಾಗ್ ರಿಯಾಲಿಟಿ ಶೋನ ನಿರ್ಮಾಪಕರಿಗೆ ಪತ್ರ ಹಸ್ತಾಂತರಿಸಿದ್ದಾರೆ ಒಂದು ವೇಳೆ ಆಕೆ ಸೆಟ್ ನಲ್ಲಿ ಬಂದರೆ ಪಕ್ಷದ ಕಾರ್ಯಕರ್ತರು ಹಿಂಸಾಚಾರ ನಡೆಸುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ತನುಶ್ರೀ ದತ್ತ ಆರೋಪಿಸಿದ್ದರು.
ಈ ಮಧ್ಯೆ ಮಹಾರಾಷ್ಟ್ರ ಸಚಿವ ದೀಪಕ್ ಕೆಸರ್ಕಾರ್ ನಾನಾ ಪಟೇಕರ್ ಅವರನ್ನು ಬೆಂಬಲಿಸಿದ್ದು, ಅವರೊಬ್ಬ ಸುಪ್ರಸಿದ್ದ ವ್ಯಕ್ತಿತ್ವದ ನಟ, ರಾಜ್ಯಕ್ಕಾಗಿ ಮಹತ್ವಪೂರ್ಣ ಕೆಲಸಗಳನ್ನು ಮಾಡಿದ್ದಾರೆ. ತನುಶ್ರೀ ದತ್ತ ಅವರ ಆರೋಪ ಸತ್ಯಕ್ಕೆ ದೂರವಾಗಿವೆ ಎಂದು ಹೇಳಿಕೆ ನೀಡಿದ್ದರು.
Advertisement