ಆಸಿಡ್ ದಾಳಿ ಸಂತ್ರಸ್ತ ಯುವತಿ ಪಾತ್ರದಲ್ಲಿ ದೀಪಿಕಾ ಪಡುಕೋಣೆ, ನಿರ್ಮಾಣಕ್ಕೂ ಮುಂದು!

ಮೇಘನಾ ಗುಲ್ಜಾರ್ ನಿರ್ದೇಶನದ ಆಸಿಡ್ ದಾಳಿಗೆ ತುತ್ತಾಗಿ ಬದುಕುಳಿದ ಹೆಣ್ಣು ಮಗಳ ಪಾತ್ರವನ್ನು ...
ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ

ಮೇಘನಾ ಗುಲ್ಜಾರ್ ನಿರ್ದೇಶನದ ಆಸಿಡ್ ದಾಳಿಗೆ ತುತ್ತಾಗಿ ಹೋರಾಟ ನಡೆಸಿದ ಹೆಣ್ಣು ಮಗಳ ಪಾತ್ರವನ್ನು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಿರ್ವಹಿಸುತ್ತಿದ್ದು, ಇದಕ್ಕೆ ಬಂಡವಾಳ ಹೂಡುವ ಮೂಲಕ ನಿರ್ಮಾಣಕ್ಕಿಳಿಯುತ್ತಿದ್ದಾರೆ.

ಇನ್ನೂ ಈ ಚಿತ್ರಕ್ಕೆ ಹೆಸರಿಟ್ಟಿಲ್ಲ, ಚಿತ್ರದಲ್ಲಿ ಲಕ್ಷ್ಮಿ ಅಗರ್ವಾಲ್ ಪಾತ್ರದಲ್ಲಿ ದೀಪಿಕಾ ಕಾಣಿಸಿಕೊಳ್ಳಲಿದ್ದಾರೆ. '' ಈ ಚಿತ್ರದ ಕಥೆ ಕೇಳಿದಾಗ ನನ್ನ ಮನಸ್ಸಿನ ಮೇಲೆ ಆಳವಾಗಿ ತಟ್ಟಿತು. ಇಲ್ಲಿ ಕೇವಲ ಹಿಂಸೆಯ ಬಗ್ಗೆ ಹೇಳಲು ಹೊರಟಿಲ್ಲ, ಬದಲಿಗೆ ಮಹಿಳೆಯ ಶಕ್ತಿ ಮತ್ತು ಧೈರ್ಯ, ಆಶಾವಾದ ಮತ್ತು ಗೆಲುವಿನ ಬಗ್ಗೆ ಕೂಡ ವಿವರಿಸಲಾಗಿದೆ. ಕಥೆ ನನ್ನ ಮೇಲೆ ಅಗಾಧ ಪರಿಣಾಮ ಬೀರಿತು. ವೈಯಕ್ತಿಕವಾಗಿ ಮತ್ತು ಸೃಜನಾತ್ಮಕವಾಗಿ ನಾನು ಇಲ್ಲಿ ನಟಿಯಾಗಿ ಕಾಣಿಸಿಕೊಳ್ಳುವುದು ಮಾತ್ರವಲ್ಲದೆ ಅದಕ್ಕಿಂತ ಮುಂದೆ ಹೋಗಬೇಕೆಂದು ಭಾವಿಸಿ ನಿರ್ಮಾಣಕ್ಕೂ ಇಳಿದೆ ಎನ್ನುತ್ತಾರೆ ದೀಪಿಕಾ.

2005ರಲ್ಲಿ, ದೆಹಲಿಯ ಬಸ್ ನಿಲ್ದಾಣದಲ್ಲಿ ಲಕ್ಷ್ಮಿ ಬಸ್ಸಿಗಾಗಿ ಕಾಯುತ್ತಿದ್ದಾಗ ದುಷ್ಕರ್ಮಿ ಆಕೆಯ ಮೇಲೆ ಆಸಿಡ್ ದಾಳಿ ಮಾಡುತ್ತಾರೆ. ಅದು ಕೂಡ ಆಕೆಯ ಕುಟುಂಬಕ್ಕೆ ಗೊತ್ತಿರುವ ವಯಸ್ಸಿನಲ್ಲಿ ಆಕೆಗಿಂತ ಎರಡು ಪಟ್ಟು ಹೆಚ್ಚಿನವನಾದವನಿಂದ. ಲಕ್ಷ್ಮಿ ಮೇಲೆ ಆಸಿಡ್ ದಾಳಿಯಾದ ನಂತರ 10 ವರ್ಷಗಳ ಕಾಲ ಆಕೆಯ ಜೀವನ ಪಯಣ ಮತ್ತು ಸುಪ್ರೀಂ ಕೋರ್ಟ್ ನಲ್ಲಿ ಹೂಡಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತು 2013ರಲ್ಲಿ ಆಸಿಡ್ ಕಾನೂನಿಗೆ ಸಂಬಂಧಪಟ್ಟಂತೆ ನ್ಯಾಯಾಲಯ ನೀದಿದ ತಿದ್ದುಪಡಿ ಇತ್ಯಾದಿಗಳನ್ನು ಚಿತ್ರದಲ್ಲಿ ತೋರಿಸಲಾಗುತ್ತಿದೆ.

ಆಸಿಡ್ ಮಾರಾಟಕ್ಕೆ ನಿಯಂತ್ರಣ ತಂದಿದ್ದರೂ ಮತ್ತು ಆಸಿಡ್ ದಾಳಿ ಬಗ್ಗೆ ಕಾನೂನಿನಲ್ಲಿ ಬದಲಾವಣೆಗಳನ್ನು ತಂದರೂ ಕೂಡ ವಾಸ್ತವ ಪರಿಸ್ಥಿತಿ ಮಾತ್ರ ಇನ್ನೂ ಬಿಗಡಾಯಿಸಿದೆ. ಇಂದು ಕೂಡ ಸಮಾಜದಲ್ಲಿ ಮಹಿಳೆಯರು ಮತ್ತು ಯುವತಿಯರ ಮೇಲೆ ಆಸಿಡ್ ದಾಳಿಗಳು ನಡೆಯುತ್ತಲೇ ಇವೆ. ಆಸಿಡ್ ದಾಳಿಗೆ ತುತ್ತಾದವರಿಗೆ ವೈದ್ಯಕೀಯ ಚಿಕಿತ್ಸೆ, ಪರಿಹಾರ, ಪುನರ್ವಸತಿ ಇತ್ಯಾದಿಗಳು ಇನ್ನು ಕೂಡ ಸವಾಲಾಗಿವೆ ಎಂದು ನಿರ್ದೇಶಕಿ ಮೇಘನಾ ಗುಲ್ಜರ್ ಹೇಳುತ್ತಾರೆ.

ಲಕ್ಷ್ಮಿಯ ಕಥೆ ಬಳಸಿಕೊಂಡು ಆಸಿಡ್ ಹಿಂಸೆಯ ಬಗ್ಗೆ ನಾವು ಸಮಾಜದಲ್ಲಿ ನಡೆಯುತ್ತಿರುವ ಹಲವು ಆಯಾಮಗಳನ್ನು ತೋರಿಸುತ್ತೇವೆ. ಈ ಮೂಲಕ ಕಥೆ ಇಂದಿಗೂ ಪ್ರಸ್ತುತ ಎಂದು ಹೇಳುತ್ತೇವೆ. ಬದಲಾವಣೆಗೆ ಅದರ ಬಗ್ಗೆ ಜಾಗೃತಿಯೇ ಮೊದಲ ಹೆಜ್ಜೆ ಎನ್ನುತ್ತಾರೆ ಗುಲ್ಜರ್.
ಲಕ್ಷ್ಮಿ ಪಾತ್ರ ಭಾವನಾತ್ಮಕವಾಗಿ ಮತ್ತು ಶಾರೀರಿಕವಾಗಿ ಸವಾಲಾಗಿದ್ದು ಪಾತ್ರಕ್ಕೆ ದೀಪಿಕಾ ನ್ಯಾಯ ಒದಗಿಸುತ್ತಾರೆ ಎಂಬ ನಂಬಿಕೆ ಇದೆ ಎನ್ನುತ್ತಾರೆ ನಿರ್ದೇಶಕಿ.

ನಿರ್ದೇಶಕಿ ಕಥೆ ವಿವರಿಸಿದ ತಕ್ಷಣ ಹಿಂದೆ ಮುಂದೆ ಯೋಚಿಸದೆ ದೀಪಿಕಾ ಯಸ್ ಎಂದು ಒಪ್ಪಿಗೆ ಕೊಟ್ಟರಂತೆ. ಪದ್ಮಾವತ್ ದೀಪಿಕಾ ಅಭಿನಯದ ಬಿಡುಗಡೆಯಾದ ಇತ್ತೀಚಿನ ಕೊನೆಯ ಚಿತ್ರ. ನಿರ್ದೇಶಕ ವಿಶಾಲ್ ಭಾರದ್ವಾಜ್ ಮತ್ತು ಇರ್ಫಾನ್ ಖಾನ್ ಚಿತ್ರದಲ್ಲಿ ದೀಪಿಕಾ ಅಭಿನಯಿಸಬೇಕಾಗಿತ್ತು. ಇಲ್ಲಿ ಗ್ಯಾಂಗ್ ಸ್ಟರ್ ಪಾತ್ರದಲ್ಲಿ ದೀಪಿಕಾ ಕಾಣಿಸಿಕೊಳ್ಳಬೇಕಾಗಿತ್ತು. ಆದರೆ ನಟ ಇರ್ಫಾನ್ ಖಾನ್ ಅನಾರೋಗ್ಯದಿಂದ ಚಿತ್ರದ ಶೂಟಿಂಗ್ ಮುಂದೂಡಲ್ಪಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com