ವಿಂತಾ ನಂದಾ ನಂತರ ಸಂಧ್ಯಾ ಮೃದುಲರಿಂದ ನಟ ಅಲೋಕ್ ನಾಥ್ ಮೇಲೆ ಆರೋಪ

ಮಿ ಟೂ ಅಭಿಯಾನದಲ್ಲಿ ಬಾಲಿವುಡ್ ನ ಸಂಸ್ಕಾರಿ ನಟ ಎಂದೇ ಖ್ಯಾತರಾಗಿದ್ದ ಅಲೋಕ್ ನಾಥ್ ವಿರುದ್ಧ ನಿನ್ನೆ ...
ಸಂಧ್ಯಾ ಮೃದುಲಾ
ಸಂಧ್ಯಾ ಮೃದುಲಾ
Updated on

ಮಿ ಟೂ ಅಭಿಯಾನದಲ್ಲಿ ಬಾಲಿವುಡ್ ನ ಸಂಸ್ಕಾರಿ ನಟ ಎಂದೇ ಖ್ಯಾತರಾಗಿದ್ದ ಅಲೋಕ್ ನಾಥ್ ವಿರುದ್ಧ ನಿನ್ನೆ ಹಿರಿಯ ಕಥೆಗಾರ್ತಿ ಹಾಗೂ ನಿರ್ಮಾಪಕಿ ವಿಂತಾ ನಂದಾ 19 ವರ್ಷಗಳ ಹಿಂದೆ ಅತ್ಯಾಚಾರ ನಡೆಸಿದ್ದರು ಎಂದು ಆರೋಪಿಸಿದ್ದರೆ ಇಂದು ಅವರ ಮೇಲೆ ಮತ್ತೊಬ್ಬ ನಟಿ ಕೂಡ ಅಲೋಕ್ ನಾಥ್ ವಿರುದ್ಧ ಲೈಂಗಿಕ ಹಲ್ಲೆ ನಡೆಸಿದ ಆರೋಪ ಮಾಡಿದ್ದಾರೆ.
ಅದು ಸಂಧ್ಯಾ ಮೃದುಲ. ಸಾಮಾಜಿಕ ಜಾಲತಾಣದಲ್ಲಿ ಅಲೋಕ್ ನಾಥ್ ಅವರಿಂದ ಎದುರಿಸಿದ ಕಿರುಕುಳ ಬಗ್ಗೆ ವಿವರವಾಗಿ ಬರೆದಿದ್ದಾರೆ.

''ನನ್ನ ವೃತ್ತಿ ಜೀವನದ ಆರಂಭದಲ್ಲಿ ಜೀ ಟಿವಿಗೆ ಟೆಲಿಫಿಲ್ಮ್ ಗೆಂದು ಕೊಡೈಕನಾಲ್ ಗೆ ಹೋಗಿದ್ದೆ. ನಾನು ಅದರಲ್ಲಿ ಮುಖ್ಯ ಪಾತ್ರಧಾರಿಯಾಗಿದ್ದೆ. ತುಂಬಾ ಹುರುಪಿನಲ್ಲಿ ಕೂಡ ಇದ್ದೆ. ತೆರೆಯ ಮೇಲೆ ಅಲೋಕ್ ನಾಥ್ ನನ್ನ ತಂದೆಯಾಗಿ ಮತ್ತು ರೀಮಾ ಲಗೂ ತಾಯಿಯಾಗಿ ನಟಿಸಿದ್ದರು.

ಅಲೋಕ್ ನಾಥ್ ಗೆ ನನ್ನ ನಟನೆ, ನಡವಳಿಕೆ ಇಷ್ಟವಾಗಿ ನೀನು ದೇವರ ಮಗು ಎಂದು ಕರೆದಿದ್ದರು. ಪ್ರತಿನಿತ್ಯ ನನ್ನನ್ನು ಹೊಗಳುತ್ತಿದ್ದರು. ನಾನು ತುಂಬಾ ಖುಷಿಪಟ್ಟಿದ್ದೆ. ನಾನು ಅವರ ಬಹುದೊಡ್ಡ ಅಭಿಮಾನಿಯಾಗಿದ್ದೆ ಮತ್ತು ಕೆಲಸದಲ್ಲಿ ಖುಷಿ, ಆತ್ಮವಿಶ್ವಾಸ ಉಂಟಾಗಿತ್ತು.

ಒಂದು ದಿನ ಶೂಟಿಂಗ್ ರಾತ್ರಿ ಬೇಗ ಮುಗಿದಿತ್ತು. ಎಲ್ಲ ಕಲಾವಿದರು ಊಟಕ್ಕೆ ಹೋಗಿದ್ದೆವು. ಅಂದು ಅಲೋಕ್ ನಾಥ್ ಚೆನ್ನಾಗಿ ಮದ್ಯ ಸೇವಿಸಿ ನನ್ನನ್ನು ಅವರ ಪಕ್ಕ ಕೂರುವಂತೆ, ನೀನು ನನಗೆ ಸೇರಿದವಳೆಂದು ಹೇಳಿ ಅಸಭ್ಯವಾಗಿ ವರ್ತಿಸಲಾರಂಭಿಸಿದರು, ನನಗೆ ಆ ಘಟನೆ ಸಂಪೂರ್ಣ ನೆನಪಿಲ್ಲ, ಅಂತೂ ನನಗೆ ಅವರು ಆ ರೀತಿ ವರ್ತಿಸುವುದು ಇರಿಸುಮುರುಸು ತಂದಿತು. ನನ್ನ ಸಹ ಕಲಾವಿದರು ನನ್ನನ್ನು ಮೇಲೆದ್ದು ಆಚೆ ಬರುವಂತೆ ಹೇಳಿದರು.

ನಾವು ಊಟ ಮಾಡದೆ ಅರ್ಧಕ್ಕೆ ಹೊಟೇಲ್ ಗೆ ಹೋದೆವು. ನಾನು ನನ್ನ ಕೋಣೆಗೆ ಹೋದೆ. ಕಾಸ್ಟ್ಯೂಮ್ ವ್ಯಕ್ತಿ ಬಂದು ಮರುದಿನ ಧರಿಸಬೇಕಾಗಿದ್ದ ಬಟ್ಟೆಗಳನ್ನು ನೀಡಿ ಹೋದರು. ಅವರು ಹೋದ ನಂತರ ಸ್ವಲ್ಪ ಹೊತ್ತಿನಲ್ಲಿ ನನ್ನ ಕೋಣೆಯ ಬಾಗಿಲು ಬಡಿಯಿತು, ಮತ್ತೆ ಕಾಸ್ಟ್ಯೂಮ್ ಮ್ಯಾನ್ ಬಂದಿದ್ದಾನೆ ಎಂದು ಭಾವಿಸಿ ಬಾಗಿಲು ತೆಗೆದೆ, ನೋಡಿದರೆ ಅಲೋಕ್ ನಾಥ್. ನಾನು ಭೀತಿಯಿಂದ ಬಾಗಿಲು ಹಾಕಲು ಪ್ರಯತ್ನಿಸಿದೆ, ಆದರೆ ಅವರು ಬಲವಂತದಿಂದ ನನ್ನನ್ನು ತಳ್ಳಿ ಒಳಗೆ ಬಂದರು. ನಾನು ಭಯದಿಂದ ಬಾತ್ ರೂಂ ಒಳಗೆ ಹೋಗಲು ನೋಡಿದೆ, ಅವರು ಬೆಡ್ ಮೇಲೆ ಕುಳಿತು ನೀನು ನನ್ನವಳು, ನನಗೆ ಸೇರಿದವಳು ಎಂದು ಕಿರುಚುತ್ತಾ ಹೇಳಿದರು. ನಾನು ಬಾತ್ ರೂಂ ಒಳಗಿನಿಂದ ಲಾಕ್ ಮಾಡಿ ಕುಳಿತುಕೊಳ್ಳಲು ಯತ್ನಿಸಿದೆ, ಆದರೆ ಅಲ್ಲಿಗೆ ಕೂಡ ಬರಲು ಯತ್ನಿಸಿದರು. ಕೊನೆಗೆ ನಾನು ಹೇಗೋ ತಪ್ಪಿಸಿಕೊಂಡು ಕೆಳಗೆ ಕಾರಿಡಾರ್ ಗೆ ಬಂದೆ. ಕೊನೆಗೆ ನಮ್ಮ ತಂಡದವರಿಗೆ ವಿಷಯ ತಿಳಿಸಿದೆ. ಅವರು ಕೋಣೆಗೆ ಹೋಗಿ ಅಲೋಕ್ ನಾಥ್ ಅವರನ್ನು ಹೇಗೋ ಕೋಣೆಯಿಂದ ಹೊರಗೆ ಕಳುಹಿಸಿದರು.

ತುಂಬಾ ಭಯಗೊಂಡಿದ್ದ ನಾನು ಕೇಶವಿನ್ಯಾಸಕಿಯನ್ನು ಬರಹೇಳಿ ನನ್ನ ಕೋಣೆಯಲ್ಲಿ ಮಲಗಲು ಹೇಳಿದೆ. ಈ ಘಟನೆ ನಡೆದು ಕೆಲವೇ ಗಂಟೆಗಳಲ್ಲಿ ಚಿತ್ರದಲ್ಲಿ ತಂದೆಯ ಪಾತ್ರ ಮಾಡಿದ ಅಲೋಕ್ ನಾಥ್ ಅವರ ತೊಡೆಯ ಮೇಲೆ ತಲೆಯಿಟ್ಟು ಅಳುವ ದೃಶ್ಯದಲ್ಲಿ ನಟಿಸಬೇಕಾಗಿತ್ತು. ನನಗೀಗ ಅದನ್ನು ನೆನೆಸಿಕೊಂಡರೆ ನಿಜಕ್ಕೂ ವಾಕರಿಕೆ ಅನುಭವವಾಗುತ್ತದೆ ಎಂದರು.

ಅದೊಂದೇ ದಿನವಲ್ಲ, ಅನೇಕ ದಿನ ರಾತ್ರಿ ಕುಡಿದು ಬಂದು ನನ್ನ ಕೋಣೆಯತ್ತ ಬಂದು ಗಲಾಟೆ ಮಾಡುತ್ತಿದ್ದರು, ನನಗೆ ಫೋನ್ ಮಾಡುತ್ತಿದ್ದರು. ಭಯದಿಂದ ಕೇಶವಿನ್ಯಾಸಕಿಯನ್ನು ಶೂಟಿಂಗ್ ಮುಗಿಯುವವರೆಗೆ ನನ್ನ ಕೋಣೆಯಲ್ಲಿರಿಸಿಕೊಂಡೆ. ನಂತರ ಒಂದು ದಿನ ಬಂದು ನಾನು ಕುಡಿದ ಅಮಲಿನಲ್ಲಿ ಹೀಗೆಲ್ಲಾ ವರ್ತಿಸಿದೆ, ನನ್ನ ದುರಭ್ಯಾಸದಿಂದಾಗಿ ಮನೆಯವರಿಗೆ, ಕುಟುಂಬದವರಿಗೆ ತೊಂದರೆಯಾಗಿದೆ. ನಾನು ಚಿಕಿತ್ಸೆ ಪಡೆಯಲು ನಿರ್ಧರಿಸಿದ್ದೇನೆ, ನನ್ನಿಂದ ತಪ್ಪಾದರೆ ಕ್ಷಮಿಸಿ ಎಂದೆಲ್ಲಾ ಹೇಳಿದರು.

ನಾನು ಆ ಸಮಯದಲ್ಲಿ ಬಾಲಿವುಡ್ ಗೆ ಹೊಸಬಳು, ಅಲೋಕ್ ನಾಥ್ ದೊಡ್ಡ ಖ್ಯಾತ ನಟ, ನನ್ನ ಮಾತನ್ನು ನಂಬುವ ಸ್ಥಿತಿಯಲ್ಲಿ ಅಥವಾ ನಾನು ಬಹಿರಂಗವಾಗಿ ಈ ನಡೆದ ಘಟನೆಯನ್ನು ಹೇಳುವ ಸ್ಥಿತಿಯಲ್ಲಿರಲಿಲ್ಲ'' ಎಂದು ತಮಗಾದ ಅನುಭವವನ್ನು ಹೇಳಿರುವ ಸಂಧ್ಯಾ ಮೃದುಲ ವಿಂತಾ ನಂದಾಗೆ ಬೆಂಬಲ ಸೂಚಿಸಿದ್ದಾರೆ.


Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com