ನವದೆಹಲಿ: ಇದೇ 23 ರಂದು ದೆಹಲಿಯಲ್ಲಿ ನಡೆಯಲಿರುವ ೬೬ನೇ ರಾಷ್ಟ್ರೀಯ ಚಲನ ಚಿತ್ರೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಅವರು ಬಾಲಿವುಡ್ ಮೆಗಾ ಸ್ಟಾರ್ ಅಮಿತಾಬ್ ಬಚ್ಚನ್ ಅವರಿಗೆ ಪ್ರತಿಷ್ಟಿತ ೫೦ನೇ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
೨೦೧೮ನೇ ಸಾಲಿನ ೬೬ನೇ ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭ ಅದ್ದೂರಿಯಾಗಿ ನಡೆಸಲು ಸರ್ವಸಿದ್ದತೆಗಳು ನಡೆದಿವೆ.
ಕೇಂದ್ರ ವಾರ್ತಾಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವ್ಡೇಕರ್ ಹಾಗೂ ಇನ್ನಿತರ ಉಪಸ್ಥಿತಿಯಲ್ಲಿ ಉಪರಾಷ್ಟ್ರಪತಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಭಾರತೀಯ ಸಿನಿಮಾ ಅಭಿವೃದ್ದಿ ಹಾಗೂ ಬೆಳವಣಿಗೆಗೆ ಗಮನಾರ್ಹ ಕೊಡುಗೆ ನೀಡಿರುವ ಚಲನ ಚಿತ್ರ ಗಣ್ಯರಿಗೂ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಕಳೆದ ಆಗಸ್ಟ್ ನಲ್ಲಿ ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿಗಳನ್ನು ಸರ್ಕಾರ ಪ್ರಕಟಿಸಿತ್ತು. ಕಛ್ ಪ್ರದೇಶದ ಹೆಣ್ಣು ಮಕ್ಕಳ ಬದುಕಿನ ಬಗೆಗಿನ ಗುಜರಾತಿ ಚಿತ್ರ ’ಹೆಲ್ಲಾರೋ’ ಶ್ರೇಷ್ಠ ಸಿನಿಮಾ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದೆ.
ಅಂಧಾಧುನ್ ಮತ್ತು ಉರಿ: ಸರ್ಜಿಕಲ್ ಚಿತ್ರದ ಶ್ರೇಷ್ಠ ನಟನೆಗಾಗಿ ಆಯುಷ್ಮಾನ್ ಖುರಾನಾ ಮತ್ತು ವಿಕ್ಕಿ ಕೌಶಲ್ ಗೆ ಶ್ರೇಷ್ಠ ನಟ ಪ್ರಶಸ್ತಿ ಪ್ರಕಟಿಸಲಾಗಿದೆ. ಹಿರಿಯ ನಟಿ ಸಾವಿತ್ರಿ ಅವರ ಜೀವನ ಕಥೆ ತೆಲುಗಿನ ’ಮಹಾನಟಿ’ಯ ಅತ್ಯುತ್ತಮ ಅಭಿನಯನಕ್ಕಾಗಿ ಕೀರ್ತಿ ಸುರೇಶ್ ಅವರು ಶ್ರೇಷ್ಠ ನಟಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ವಿಳಂಬಿತ ಗರ್ಭಧಾರಣೆಯಿಂದ ಒಂದು ಕುಟುಂಬ ಅನುಭವಿಸುವ ಸಮಸ್ಯೆಯ ಕುತೂಹಲಭರಿತ ಕಥಾನಕ ಹೊತ್ತ ’ಬಧಾಯಿ ಹೋ’ ಸಂಪೂರ್ಣ ಮನೋರಂಜನೆ ನೀಡುವ ಶ್ರೇಷ್ಠ ಜನಪ್ರಿಯ ಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಅಕ್ಷಯ್ ಕುಮಾರ್ ಅಭಿನಯದ ಪ್ಯಾಡ್ಮ್ಯಾನ್ ಸಾಮಾಜಿಕ ಕಳಕಳಿಯ ಶ್ರೇಷ್ಠ ಚಿತ್ರ ಪ್ರಶಸ್ತಿ ಪಡೆದಿದೆ.
Advertisement