ಸುಧಾಮೂರ್ತಿ ಎಂಜಿನಿಯರಿಂಗ್ ಕೋರ್ಸ್ ಸೇರುವಾಗ ಪ್ರಾಂಶುಪಾಲರು 3 ಷರತ್ತು ಹಾಕಿದ್ದರಂತೆ, ಏನದು? 

ಸೋನಿ ಟಿವಿಯಲ್ಲಿ ಪ್ರಸಾರವಾಗುವ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ನಿರೂಪಣೆಯ ಹಿಂದಿಯ ಕೌನ್ ಬನೇಗಾ ಕರೋಡ್ ಪತಿಯ 11ನೇ ಸಂಚಿಕೆಯ ಕೊನೆಯ ಕಂತು ಇದೇ 29ರಂದು ರಾತ್ರಿ 9 ಗಂಟೆಗೆ ಪ್ರಸಾರವಾಗಲಿದ್ದು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಹಾಟ್ ಸೀಟ್ ನಲ್ಲಿರುವ ವಿಡಿಯೊ ತುಣುಕು ಸಾಕಷ್ಟು ವೈರಲ್ ಆಗಿದೆ.
ಸುಧಾಮೂರ್ತಿ-ಅಮಿತಾಬ್ ಬಚ್ಚನ್
ಸುಧಾಮೂರ್ತಿ-ಅಮಿತಾಬ್ ಬಚ್ಚನ್
Updated on

ಮುಂಬೈ: ಸೋನಿ ಟಿವಿಯಲ್ಲಿ ಪ್ರಸಾರವಾಗುವ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ನಿರೂಪಣೆಯ ಹಿಂದಿಯ ಕೌನ್ ಬನೇಗಾ ಕರೋಡ್ ಪತಿ 11ನೇ ಸಂಚಿಕೆಯ ಕೊನೆಯ ಕಂತು ಇದೇ 29ರಂದು ರಾತ್ರಿ 9 ಗಂಟೆಗೆ ಪ್ರಸಾರವಾಗಲಿದ್ದು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಹಾಟ್ ಸೀಟ್ ನಲ್ಲಿರುವ ವಿಡಿಯೊ ತುಣುಕು ಸಾಕಷ್ಟು ವೈರಲ್ ಆಗಿದೆ.


ಈ ಸಂದರ್ಭದಲ್ಲಿ ಸುಧಾಮೂರ್ತಿಯವರು ತಮ್ಮ ಎಂಜಿನಿಯರಿಂಗ್ ಕಲಿಕೆಯ ದಿನದ ಸಾಕಷ್ಟು ಕುತೂಹಲಕರ ಸಂಗತಿಗಳು ಹಂಚಿಕೊಂಡಿದ್ದಾರೆ.


ಸುಧಾಮೂರ್ತಿಯವರು ಕರ್ನಾಟಕದ ಹಾವೇರಿ ಜಿಲ್ಲೆಯ ಶಿಗ್ಗಾಂವ್ ಮೂಲದವರು. ಚಿಕ್ಕ ವಯಸ್ಸಿನಿಂದಲೇ ಕಲಿಕೆಯಲ್ಲಿ ಮುಂದಿದ್ದ ಅವರಿಗೆ ಎಂಜಿನಿಯರಿಂಗ್ ಓದುವ ಆಸೆಯುಂಟಾಯಿತಂತೆ. ಅದು 1968ರ ಸಮಯ, ಆಗಿನ ಕಾಲದಲ್ಲಿ ಎಂಜಿನಿಯರಿಂಗ್ ಓದುವ ಹುಡುಗಿಯರೇ ಇರಲಿಲ್ಲ ಎನ್ನಬಹುದು. ಎಂಜಿನಿಯರಿಂಗ್ ಓದಿದರೆ ಯಾವ ಹುಡುಗನೂ ಮದುವೆ ಮಾಡಿಕೊಳ್ಳಲು ಮುಂದೆ ಬರಲಿಕ್ಕಿಲ್ಲ ಎಂದು ಸುಧಾಮೂರ್ತಿಯವರ ಮನೆಯಲ್ಲಿ ಹೇಳಿದರಂತೆ.  ಆದರೆ ಸುಧಾ ಅವರು ಹಠ ಬಿಡಲಿಲ್ಲ, ಹೇಗೋ ಮನೆಯವರ ಮನವೊಲಿಸಿ ಹುಬ್ಬಳ್ಳಿಯ ಬಿ ವಿ ಬಿ ಕಾಲೇಜು ಆಫ್ ಎಂಜಿನಿಯರಿಂಗ್ (ಇಂದು ಕೆಎಲ್ಇ ಕಾಲೇಜು) ನಲ್ಲಿ ಎಂಜಿನಿಯರಿಂಗ್ ಪದವಿಗೆ ಸೇರಿಕೊಂಡರು.


ಆಗ ಕಾಲೇಜಿನಲ್ಲಿ 600 ಮಂದಿ ವಿದ್ಯಾರ್ಥಿಗಳಲ್ಲಿ ಸುಧಾ ಒಬ್ಬರೇ ಹುಡುಗಿ! ಇವರ ಪಿಯುಸಿ ಅಂಕ ನೋಡಿ ಕಾಲೇಜಿನಲ್ಲಿ ಪ್ರಾಂಶುಪಾಲರು ಸೀಟು ಕೊಡಲು ತಯಾರಿದ್ದರು,  ಆದರೆ ಮೂರು ಷರತ್ತು ಹಾಕಿದ್ದರಂತೆ, ಅದೇನೆಂದರೆ, ಸೀರೆ ಮಾತ್ರ ಉಟ್ಟುಕೊಂಡು ಕಾಲೇಜಿಗೆ ಬರಬೇಕು, ಕಾಲೇಜು ಕ್ಯಾಂಟೀನಿಗೆ ಯಾವತ್ತೂ ಹೋಗಬಾರದು ಮತ್ತು ಹುಡುಗರ ಜೊತೆ ಮಾತನಾಡಬಾರದು ಎಂದು.


ಮೊದಲೆರಡು ಷರತ್ತುಗಳು ಸುಧಾಮೂರ್ತಿಯವರಿಗೆ ಕಷ್ಟವಾಗಲಿಲ್ಲವಂತೆ. ಮೂರನೇ ವಿಷಯವನ್ನು ಕೂಡ ಸುಧಾ ಒಪ್ಪಿಕೊಂಡರು. ಅವರು ಕಾಲೇಜಿಗೆ ಪ್ರವೇಶ ಪಡೆದು ತಮ್ಮ ಪಾಡಿಗೆ ಬಂದು ಕಲಿಯುವುದರಲ್ಲಿ ತೊಡಗಿಸಿಕೊಂಡಿದ್ದರು.  ಯಾವ ಹುಡುಗರ ಜೊತೆಗೂ ಮಾತನಾಡುತ್ತಿರಲ್ಲವಂತೆ. ನಂತರ ಎರಡನೇ ವರ್ಷದಲ್ಲಿ ಸುಧಾ ಅವರು ಕಲಿಕೆಯಲ್ಲಿ ಮುಂದಿರುವುದನ್ನು ನೋಡಿ ಹುಡುಗರೇ ಅವರ ಬಳಿ ಬಂದು ಮಾತನಾಡಿಸುತ್ತಿದ್ದರಂತೆ.


ಸುಧಾಮೂರ್ತಿ ಹೀಗೆ ಹೇಳಿದಾಗ ಕುಳಿತಿದ್ದ ಪ್ರೇಕ್ಷಕರು ಚಪ್ಪಾಳೆ ಹೊಡೆದು ನಕ್ಕರು. ಇನ್ನು ಕಾಲೇಜಿನಲ್ಲಿ ಸುಧಾ ಅವರು ಪಟ್ಟ ಕಷ್ಟವೆಂದರೆ ಹೆಣ್ಣುಮಕ್ಕಳಿಗೆ  ಸರಿಯಾಗಿ ಶೌಚಾಲಯ ವ್ಯವಸ್ಥೆ ಇಲ್ಲದಿದ್ದದ್ದು. ಇದರ ಮಹತ್ವವನ್ನು ಅರಿದ ಅವರು ನಂತರ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆಯಾದ ಮೇಲೆ 16 ಸಾವಿರ ಶೌಚಾಲಯಗಳನ್ನು ಅಗತ್ಯವಿರುವವರಿಗೆ ಕಟ್ಟಿಸಿಕೊಟ್ಟರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com