ರಜನಿಕಾಂತ್ ಬಳಿಕ ಬಾಲಿವುಡ್ ನಟ ಅಕ್ಷಯ್ ಕುಮಾರ್: ಬಂಡೀಪುರ ಅರಣ್ಯದಲ್ಲಿ ಬೇರ್ ಗ್ರಿಲ್ಸ್ ಜೊತೆ ಚಿತ್ರೀಕರಣ
ಮೈಸೂರು: ಮ್ಯಾನ್ ವರ್ಸಸ್ ವೈಲ್ಡ್ ಸಾಕ್ಷ್ಯಚಿತ್ರ ಚಾಮರಾಜನಗರ ಜಿಲ್ಲೆಯ ಬಂಡೀಪುರ ಅರಣ್ಯ ಪ್ರದೇಶದಲ್ಲಿ ಭರದಿಂದ ಸಾಗುತ್ತಿದ್ದು ರಜನಿಕಾಂತ್ ನಂತರ ಇದೀಗ ಬಾಲಿವುಡ್ ನಟ ಅಕ್ಷಯ್ ಕುಮಾರ್ ಭಾಗಿಯಾಗಲಿದ್ದಾರೆ. ಇದಕ್ಕಾಗಿ ಅವರು ಕಳೆದ ರಾತ್ರಿ ವಿಶೇಷ ವಿಮಾನದಲ್ಲಿ ಮೈಸೂರಿಗೆ ಆಗಮಿಸಿದ್ದಾರೆ.
ಬ್ರಿಟನ್ ನ ಖ್ಯಾತ ವನ್ಯಜೀವಿ ಸಾಹಸಿಗ ಸಾಕ್ಷ್ಯಚಿತ್ರ ತಯಾರಕ ಬೇರ್ ಗ್ರಿಲ್ಸ್ ಜೊತೆ ಅಕ್ಷಯ್ ಕುಮಾರ್ ನಿನ್ನೆ ಬಂಡೀಪುರದ ರೆಸಾರ್ಟ್ ನಲ್ಲಿ ಚಿತ್ರೀಕರಣ ಕುರಿತು ಮಾತುಕತೆ ನಡೆಸಿದ್ದಾರೆ. ಅವರು ಇಂದು ಮತ್ತು ನಾಳೆ ಟೈಗರ್ ರೋಡ್, ರಾಂಪುರ್ ಆನೆ ಶಿಬಿರ ಸೇರಿದಂತೆ ನಾಲ್ಕೈದು ಕಡೆಗಳಲ್ಲಿ ದಿನವಿಡೀ ತಂಡ ಶೂಟಿಂಗ್ ನಲ್ಲಿ ನಿರತರಾಗಲಿದ್ದಾರೆ.
ಅಕ್ಷಯ್ ಕುಮಾರ್ ಅವರ ಶೂಟಿಂಗ್ ದಟ್ಟ ಅರಣ್ಯ ಪ್ರದೇಶದೊಳಗೆ ಬೆಳಗ್ಗೆ ಹೊತ್ತಿನಲ್ಲಿ ನಡೆಯಲಿದೆ. ನಾಳೆ ಸಂಜೆಯ ಹೊತ್ತಿಗೆ ತಂಡ ಶೂಟಿಂಗ್ ಮುಗಿಸಲಿದೆ ಎಂದು ಅಲ್ಲಿನ ಅರಣ್ಯ ಇಲಾಖೆ ಸಿಬ್ಬಂದಿ ಹೇಳಿದ್ದಾರೆ. ಮ್ಯಾನ್ ವರ್ಸಸ್ ವೈಲ್ಡ್ ಶೋ 14 ಕಂತುಗಳಲ್ಲಿ ಪ್ರಸಾರವಾಗಲಿದ್ದು ಎರಡು ಮತ್ತು ಮೂರನೇ ಕಂತುಗಳಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನದ ಚಿತ್ರೀಕರಣ ತೋರಿಸಲಾಗುತ್ತದೆ.

