ಗಾಯಕಿ ಕನಿಕಾ ಕಪೂರ್ ವಿರುದ್ಧ ಕೇಸು ದಾಖಲು: ವಸುಂಧರಾ ರಾಜೆ ಜೊತೆ ಭಾಗಿಯಾಗಿದ್ದ ಪಾರ್ಟಿ ಫೋಟೋ ವೈರಲ್!
ನವದೆಹಲಿ: ಕೊರೋನಾ ವೈರಸ್ ಗೆ ತುತ್ತಾಗಿರುವ ಬಾಲಿವುಡ್ ಗಾಯಕಿ ಕನಿಕಾ ಕಪೂರ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕನಿಕಾ ಕಪೂರ್ ಅವರು ಸತ್ಯ ಮರೆಮಾಚಿ ಸಾರ್ವಜನಿಕರನ್ನು ಅಪಾಯದ ಸ್ಥಿತಿಗೆ ತಂದೊಡ್ಡಿದ್ದಾರೆ ಎಂದು ಆರೋಪಿಸಿ ಸಾಂಕ್ರಾಮಿಕ ಕಾಯ್ದೆ 1987ರ ಸೆಕ್ಷನ್ 188, 269, 270ರಡಿ ಕೇಸು ದಾಖಲಾಗಿದೆ.
ನಿನ್ನೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಅಧಿಕೃತ ನಿವಾಸದಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ ನಂತರ ಆದೇಶ ಹೊರಡಿಸಿ ಕೇಸು ದಾಖಲಿಸಲಾಗಿದೆ. ''ಕನಿಕಾ ಅವರು ಲಂಡನ್ ನಿಂದ ವಿಮಾನದಲ್ಲಿ ಲಕ್ನೊ ನಿಲ್ದಾಣಕ್ಕೆ ಬಂದಿಳಿದಾಗ ಕೊರೋನಾ ವೈರಸ್ ತಪಾಸಣೆಯ ಶಿಷ್ಠಾಚಾರಗಳನ್ನು ತಿಳಿದಿದ್ದರೂ ಅದನ್ನು ಮಾಡಿಸಿಕೊಳ್ಳಲಿಲ್ಲ. ಕೊರೋನಾ ಲಕ್ಷಣಗಳು ಕಂಡುಬಂದಿದ್ದರೂ ಕೂಡ ಪಾರ್ಟಿಗಳಲ್ಲಿ ಭಾಗಿಯಾಗಿ ಸಾರ್ವಜನಿಕರ ಜೊತೆ ಬೆರೆತಿದ್ದಾರೆ, ಅವರಿಂದಾಗಿ ಇನ್ನಷ್ಟು ಮಂದಿಗೆ ಕೊರೋನಾ ಸೋಂಕು ತಗುಲಿರುವ ಸಾಧ್ಯತೆಯಿದೆ. ಹೀಗೆ ಬೇಜವಬ್ದಾರಿ ತೋರಿದ ಹಿನ್ನಲೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಲಂಡನ್ ನಿಂದ ಮರಳಿದ ಕನಿಕಾ ಮಾಡಿದ್ದೇನು?: ಲಂಡನ್ ನಿಂದ ಮರಳಿದ ನಂತರ ಲಕ್ನೊದಲ್ಲಿ ಪಾರ್ಟಿಯೊಂದರಲ್ಲಿ ಕನಿಕಾ ಭಾಗಿಯಾಗಿದ್ದರು ಎಂದು ಸುದ್ದಿಯಾಗಿದ್ದು ಆ ಪಾರ್ಟಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಫೋಟೋದಲ್ಲಿ ಕನಿಕಾ ಪ್ರಮುಖ ರಾಜಕಾರಣಿ ವಸುಂಧರಾ ರಾಜೆ , ಅವರ ಪುತ್ರ ದುಶ್ಯಂತ್ ಸಿಂಗ್ ಪತ್ನಿ ನಿಹಾರಿಕಾ, ನಟಿ ನೈನಾ ಬಲ್ಸವರ್ ಸೇರಿದಂತೆ ಹಲವರಿದ್ದಾರೆ. ಈ ಪಾರ್ಟಿ ಅದಿಲ್ ಅಹ್ಮದ್ ಎಂಬವರ ಮನೆಯಲ್ಲಿ ನಡೆದದ್ದಾಗಿದ್ದು ಇವರು ಬಿಎಸ್ಪಿ ಸಂಸದ ಅಕ್ಬರ್ ಅಹ್ಮದ್ ದುಂಪಿಯವರ ಅಳಿಯನಾಗಿದ್ದಾರೆ. ವೃತ್ತಿಯಲ್ಲಿ ಖ್ಯಾತ ಒಳಾಂಗಣ ವಿನ್ಯಾಸಕಾರರಾಗಿರುವ ಅದಿಲ್ ವಸುಂಧರಾ ರಾಜೆಯವರ ದೆಹಲಿ ನಿವಾಸದ ಒಳಾಂಗಣ ವಿನ್ಯಾಸ ಮಾಡಿದ್ದರು.
ಇನ್ನು ಉತ್ತರ ಪ್ರದೇಶದ ಆರೋಗ್ಯ ಸಚಿವ ಜೈ ಪ್ರತಾಪ್ ಸಿಂಗ್ ಮತ್ತು ಅವರ ಪತ್ನಿ ಬಸುಂಧರಾ ಕುಮಾರಿ ಕೂಡ ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎಂದು ಅವರೇ ಮಾಧ್ಯಮಕ್ಕೆ ಖಚಿತಪಡಿಸಿದ್ದಾರೆ. ಈಗ ಮನೆಯಲ್ಲಿಯೇ ಉಳಿದುಕೊಂಡಿದ್ದೇನೆ ಎಂದು ಜೈ ಪ್ರತಾಪ್ ಸಿಂಗ್ ತಿಳಿಸಿದ್ದಾರೆ.
ಕನಿಕಾ ಅವರ ತಂದೆ ರಾಜೀವ್ ಕಪೂರ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ, ಲಕ್ನೊಗೆ ಕನಿಕಾ ಬಂದ ಮೇಲೆ ಮೂರು ಪಾರ್ಟಿಯಲ್ಲಿ ಭಾಗಿಯಾಗಿದ್ದಳು. ಸುಮಾರು 400 ಜನರನ್ನು ಭೇಟಿ ಮಾಡಿದ್ದಾಳೆ ಎನ್ನುತ್ತಾರೆ. ಆದರೆ ಕನಿಕಾ ಕಪೂರ್ ಹೇಳುವುದೇ ಬೇರೆ.
ಕನಿಕಾ ಕಪೂರ್ ಏನು ಹೇಳುತ್ತಾರೆ: ಇದೊಂದು ಕುಟುಂಬ ಸದಸ್ಯರು ಮತ್ತು ಆಪ್ತರು ಮಾತ್ರ ಸೇರಿದ್ದ ಸಣ್ಣ ಔತಣಕೂಟವಾಗಿತ್ತು. ನಾನು ವಿದ್ಯಾವಂತ ಕಠಿಣ ಪರಿಶ್ರಮಪಟ್ಟು ಈ ಮಟ್ಟಕ್ಕೆ ಬಂದ ಹೆಣ್ಣು ಮಗಳು. ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿದ ತಕ್ಷಣ ನಾನು ತಪಾಸಣೆಗೊಳಗಾಗಿದ್ದೆ. ನಾನು ಯಾವುದೇ ನಿರ್ಲಕ್ಷ್ಯ ಮಾಡಿಲ್ಲ. ಅಲ್ಲಿ ಸಿಎಂಒ ಅವರನ್ನು ಕರೆದು ನನ್ನನ್ನು ತಪಾಸಣೆ ಮಾಡಿ ಎಂದಿದ್ದೆ. ನಿಲ್ದಾಣದಲ್ಲಿ ಎಲ್ಲಾ ಅರ್ಜಿಗಳನ್ನು ತುಂಬಿದ್ದೇನೆ ಎನ್ನುತ್ತಾರೆ.
ಲಕ್ನೊದ ಸಂಜೀವ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡಿನಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ