ರಾಮಾಯಣ ಧಾರಾವಾಹಿಯ 'ಆರ್ಯ ಸುಮಂತ್ 'ಪಾತ್ರಧಾರಿ ಚಂದ್ರಶೇಖರ್ ನಿಧನ
ಪ್ರಮುಖ ನಟ, ದೂರದರ್ಶನದ "ರಾಮಾಯಣ" ಧಾರಾವಾಹಿಯಲ್ಲಿ ಆರ್ಯಸುಮಂತ್ ಪಾತ್ರದ ಮೂಲಕ ಹೆಸರು ವಾಸಿಯಾಗಿದ್ದ ಚಂದ್ರಶೇಖರ್ (98) ವಿಧಿವಶರಾಗಿದ್ದಾರೆ.
ವಯೋ ಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಬುಧವಾರ ಮುಂಬೈನಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ತಂದೆಯವರು ನಿದ್ರೆಯಲ್ಲೇ ಸಾವನ್ನಪ್ಪಿದ್ದಾರೆ. ಅವರಿಗೆ ಯಾವುದೇ ಆರೋಗ್ಯ ಸಮಸ್ಯೆಗಳಿರಲಿಲ್ಲ ವೃದ್ಧಾಪ್ಯದಿಂದ ಮೃತಪಟ್ಟಿದ್ದಾರೆ ಎಂದು ಚಂದ್ರ ಶೇಖರ್ ಅವರ ಪುತ್ರ, ನಿರ್ಮಾಪಕ ಅಶೋಕ್ ಶೇಖರ್ ಟ್ವೀಟ್ ಮಾಡಿದ್ದಾರೆ. ಜಹುವಿನಲ್ಲಿರುವ ಪವನ್‌ಹನ್ಸ್ ಚಿತಾಗಾರದಲ್ಲಿ ಸಂಜೆ ಅಂತ್ಯಕ್ರಿಯೆ ನಡೆಯಿತು.
ಹೈದರಾಬಾದ್ ಮೂಲದವರಾದ ಚಂದ್ರಶೇಖರ್, ನಟನಾಗಬೇಕು ಎಂಬ ಮಹದಾಸೆಯಿಂದ 1950ರಲ್ಲಿ ಸಿನಿಮಾ ರಂಗ ಪ್ರವೇಶಿಸಿದರು. ಆ ನಂತರ “ಸುರಂಗ್” ಎಂಬ ಚಿತ್ರದಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದರು.
‘ಕವಿ‘, ಮಸ್ತಾನ, ಬಸಂತ್ ಬಾಹರ್, ಕಾಲಿ ಟೋಪಿ ವಾಲಾ ರುಮಾಲ್ ಮತ್ತು ಬರ್ಸಾತ್ ಕಿ ರಾತ್ ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿದ ಚಂದ್ರಶೇಖರ್ 1964ರಲ್ಲಿ ಮೊದಲ ಬಾರಿಗೆ ಸಿನಿಮಾ ನಿರ್ಮಾಣ ಮತ್ತು ನಿರ್ದೇಶನಕ್ಕಿಳಿದಿದ್ದರು. ‘ಚಾ ಚಾ‘ ಎಂಬ ಸಿನಿಮಾ ನಿರ್ಮಾಣ ನಿರ್ದೇಶನ ಮಾಡಿದ್ದ ಅವರು 1987ರಲ್ಲಿ ದೂರದರ್ಶನಕ್ಕಾಗಿ ರಮಾನಂದ ಸಾಗರ್ ನಿರ್ಮಾಣ ಮಾಡಿದ ಜನಪ್ರಿಯ ಧಾರಾವಾಹಿ ‘ರಾಮಾಯಣ‘ದಲ್ಲಿ ದಶರಥ ಮಹಾರಾಜನ ಮಂತ್ರಿ ಆರ್ಯ ಸುಮಂತನ ಪಾತ್ರ ಮಾಡಿದ್ದರು.
1990ರವರೆಗೆ 250ಕ್ಕೂ ಚಲನಚಿತ್ರಗಳಲ್ಲಿ ನಟಿಸಿರುವ ಚಂದ್ರಶೇಖರ್ ಅವರು, ಲೇಖಕ–ಸಿನಿಮಾ ನಿರ್ಮಾಪಕ ಗುಲ್ಜಾರ್ ಅವರಿಗೆ ‘ಪರಿಚಯ್‘, ಕೋಶಿಶ್, ಅಚಾನಕ್, ಆಂಧಿ, ಖುಷ್ಬೂ ಮತ್ತು ಮೌಸಮ್ ಸಿನಿಮಾಗಳ ನಿರ್ಮಾಣ, ನಿರ್ದೇಶನದಲ್ಲಿ ಸಹಾಯಕರಾಗಿ ಕೆಲಸ ಮಾಡಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ