
ನಟಿ ಕಂಗನಾ ರಣಾವತ್ ಅವರು ವಿವಾದಗಳಿಂದಲೇ ಹೆಚ್ಚು ಸುದ್ದಿ ಆಗುತ್ತಾರೆ. ಬಾಲಿವುಡ್ನ ಅನೇಕರನ್ನು ಅವರು ಎದುರು ಹಾಕಿಕೊಂಡಿದ್ದಾರೆ. ಈಗ ಏಕಾಏಕಿ ಜಾವೇದ್ ಅಖ್ತರ್ ಅವರನ್ನು ಕಂಗನಾ ರಣಾವತ್ ಹೊಗಳಿದ್ದಾರೆ.
ಆದರೆ ಅವರ ಮಾತುಗಳಿಂದ ಜಾವೇದ್ ಅಖ್ತರ್ ಸಂತಸಗೊಂಡಿಲ್ಲ. ಬದಲಿಗೆ, ‘ಕಂಗನಾ ರಣಾವತ್ ಮುಖ್ಯವೇ ಅಲ್ಲ’ ಎಂದು ಹೇಳಿದ್ದಾರೆ. ಹಿರಿಯ ಗೀತರಚನಾಕಾರ ಜಾವೇದ್ ಅಖ್ತರ್ ಅವರು ಇತ್ತೀಚೆಗೆ ಪಾಕಿಸ್ತಾನದಲ್ಲಿ ನೀಡಿದ ಹೇಳಿಕೆ ಎಲ್ಲರ ಮೆಚ್ಚುಗೆ ಪಡೆದುಕೊಂಡಿದೆ. 26/11ರ ಮುಂಬೈ ದಾಳಿ ನಡೆಸಿದ ಭಯೋತ್ಪಾದಕರು ಪಾಕಿಸ್ತಾನದವರೇ ಹೊರತು ಬೇರೆ ದೇಶದವರಲ್ಲ ಎಂದು ಜಾವೇದ್ ಅಖ್ತರ್ ಅವರು ಪಾಕ್ ನೆಲದಲ್ಲಿಯೇ ನಿಂತು ಗುಡುಗಿದ್ದಾರೆ. ಅವರ ಧೈರ್ಯವಂತಿಕೆಗೆ ಕಂಗನಾ ಕೂಡ ಭೇಷ್ ಎಂದಿದ್ದಾರೆ. ಈ ಕುರಿತು ಅವರು ಟ್ವೀಟ್ ಮಾಡಿದ್ದಾರೆ.
‘ಜಾವೇದ್ ಅವರ ಕವಿತೆ ಕೇಳಿದಾಗಲೆಲ್ಲ ಸರಸ್ವತಿಯೇ ಅವರಿಗೆ ಆಶೀರ್ವಾದ ಮಾಡಿದ್ದಾಳೆ ಎನಿಸುತ್ತದೆ. ಅವರಲ್ಲಿ ಸತ್ಯ ಇರುವ ಕಾರಣಕ್ಕೇ ಆ ದೈವಿ ಗುಣ ಇದೆ. ಜೈ ಹಿಂದ್. ಪಾಕಿಸ್ತಾನದವರ ಮನೆಗೆ ನುಗ್ಗಿ ಹೊಡೆದಿದ್ದಾರೆ’ ಎಂದು ಕಂಗನಾ ರಣಾವತ್ ಅವರು ಪೋಸ್ಟ್ ಮಾಡಿದ್ದಾರೆ.
ಕಂಗನಾ ರಣಾವತ್ ಅವರ ಹೇಳಿಕೆಗೆ ಪ್ರತಿಕ್ರಿಯೆ ಪಡೆಯಲು ಮಾಧ್ಯಮದವರು ಜಾವೇದ್ ಅಖ್ತರ್ ಅವರನ್ನು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿದ ಜಾವೇದ್ ಅವರು, ‘ಕಂಗನಾ ಅವರನ್ನು ನಾನು ಮುಖ್ಯ ಎಂದು ಪರಿಗಣಿಸಿಲ್ಲ. ಅವರು ಹೇಗೆ ಮುಖ್ಯವಾದ ಹೇಳಿಕೆ ನೀಡಲು ಸಾಧ್ಯ? ಅವರನ್ನು ಬಿಡಿ, ಮುಂದೆ ಹೋಗೋಣ’ ಎಂದು ಜಾವೇದ್ ಅಖ್ತರ್ ಹೇಳಿದ್ದಾರೆ.
Advertisement