ನವದೆಹಲಿ: ರಾಮಾಯಣದ ಕಥೆಯನ್ನು ತೆರೆ ಮೇಲೆ ತಂದಿರುವ ಆದಿಪುರುಷ್ ಚಿತ್ರ ತಂಡ ವಿಎಫ್ಎಕ್ಸ್ ನಲ್ಲಿ ಮಾಡಿಕೊಂಡಿರುವ ಎಡವಟ್ಟುಗಳ ಬಗ್ಗೆ ಹಲವೆಡೆ ಚರ್ಚೆಯಾಗುತ್ತಿದೆ.
ಡಿಡಿಯಲ್ಲಿ ಪ್ರಸಾರವಾಗುತ್ತಿದ್ದ ರಾಮಾಯಣ ಧಾರಾವಾಹಿಯ ನಿರ್ದೇಶಕರಲ್ಲಿ ಒಬ್ಬರಾಗಿದ್ದ ಮೋತಿ ಸಾಗರ್ ಆದಿ ಪುರುಷ್ ಚಿತ್ರ ತಂಡದ ಬಗ್ಗೆ ಮಾತನಾಡಿದ್ದಾರೆ.
ಆದಿಪುರುಷ್ ಸಿನಿಮಾದಲ್ಲಿ ವಿಎಫ್ಎಕ್ಸ್ ಅಷ್ಟೇ ಅಲ್ಲದೇ ಲಂಕಾ ದಹನದ ಸಂದರ್ಭದಲ್ಲಿ ಹನುಮಂತನ ಮಾತುಗಳಿಗಾಗಿ ಡೈಲಾಗ್ ಬರೆದಿರುವ ಮನೋಜ್ ಮುಂತಶಿರ್ ಶುಕ್ಲಾ ವಿರುದ್ಧವೂ ಟ್ರೋಲ್ ಆಗುತ್ತಿದೆ.
ಆದಿ ಪುರುಷ್ ಸಿನಿಮಾದ ಬಗ್ಗೆ ಜಾಲತಾಣಗಳಲ್ಲಿ ಬರುತ್ತಿರುವ ಆಕ್ಷೇಪ, ಟೀಕೆ, ಟ್ರೋಲ್ ಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೋತಿ ಸಾಗರ್, ಚಿತ್ರ ತಂಡ ಇನ್ನಷ್ಟು ಜಾಗರೂಕವಾಗಿರಬಹುದಿತ್ತೇನೋ ಎಂದು ಹೇಳಿದ್ದಾರೆ.
1987 ರಲ್ಲಿ ಮೋತಿ ಸಾಗರ್ ಅವರು ತಮ್ಮ ತಂದೆ ರಮಾನಂದ ಸಾಗರ್ ಹಾಗೂ ಸಹೋದರ ಪ್ರೇಮ್ ಸಾಗರ್ ಅವರೊಂದಿಗೆ ಡಿಡಿಯಲ್ಲಿ ಪ್ರಸಾರವಾಗುತ್ತಿದ್ದ ರಾಮಾಯಣ ಧಾರಾವಾಹಿಯನ್ನು ನಿರ್ದೇಶಿಸಿದ್ದರು.
"ಅವರು (ಬರಹಗಾರ) ಅಂತಹ ಭಾಷೆಯನ್ನು (ಸಿನಿಮಾದಲ್ಲಿರುವ ಭಾಷೆ) ಮಾತನಾಡುವ ಸಾಮಾನ್ಯ ಜನರಿಗೆ ಚಿತ್ರವನ್ನು ಹೆಚ್ಚು ಆಕರ್ಷಕವಾಗಿ ಮಾಡಲು ಯೋಚಿಸಿರಬೇಕು" ಎಂದು ನಿರ್ದೇಶಕ-ನಿರ್ಮಾಪಕರೂ ಆಗಿರುವ ಮೋತಿ ಸಾಗರ್ ಹೇಳಿದ್ದಾರೆ.
ರಾಮಾಯಣದ ಕಥೆಯನ್ನು ಹೊಂದಿರುವ ಆದಿಪುರುಷ್ ಸಿನಿಮಾ ಶುಕ್ರವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಇದರಲ್ಲಿ ರಾಮನ ಪಾತ್ರದಲ್ಲಿ ಆಗಿ ಪ್ರಭಾಸ್, ಸೀತೆಯ ಪಾತ್ರದಲ್ಲಿ ಕೃತಿ ಸನೋನ್ ಮತ್ತು ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ನಟಿಸಿದ್ದಾರೆ.
ಯುವ ಪ್ರೇಕ್ಷಕರಿಗೆ ತಲುಪುವ ನಿಟ್ಟಿನಲ್ಲಿ ನಿರ್ಮಾಪಕರು ಸೂಪರ್ ಹೀರೋ ಚಲನಚಿತ್ರದಂತೆ ರಾಮಾಯಣವನ್ನು ತೆರೆ ಮೇಲೆ ತರಲು ಯತ್ನಿಸಿದ್ದಾರೆ ಎಂದು ಮೋತಿ ಸಾಗರ್ ಅಭಿಪ್ರಾಯಪಟ್ಟಿದ್ದಾರೆ.
"ಇಂದಿನ ಪೀಳಿಗೆಯವರು ಮಾರ್ವೆಲ್ ಕಾಮಿಕ್ಸ್ ಮತ್ತು ಇತರ ವಿಷಯಗಳಂತಹವುಗಳನ್ನು ಸ್ವೀಕರಿಸುತ್ತಾರೆ ಎಂದು ಅವರು ಭಾವಿಸಿದ್ದಿರಬಹುದು ಬಹುಶಃ, ಅವರು ರಾಮಾಯಣದ ಕಥೆಯನ್ನೂ ಹಾಗೆಯೇ, ಯುವಜನತೆಗೆ ಹತ್ತಿರವಾಗುವ ಭಾಷೆಯಲ್ಲಿ ಅದನ್ನು ತಲುಪಿಸಿದರೆ ಅವರು ಹೆಚ್ಚು ಇಷ್ಟಪಡುತ್ತಾರೆಂದು ಭಾವಿಸಿದ್ದರು ಎಂದು ಮೋತಿ ಸಾಗರ್ ಹೇಳಿದ್ದಾರೆ.
Advertisement