
ಮುಂಬೈ: 'ಜವಾನ್' ಸಕ್ಸಸ್ ಅಲೆಯಲ್ಲಿ ತೇಲುತ್ತಿರುವ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್, ಗಣಪತಿ ದರ್ಶನಕ್ಕಾಗಿ ವಾಣಿಜ್ಯ ನಗರಿಯಲ್ಲಿ ರೌಂಡ್ ಹೊಡೆಯುತ್ತಿದ್ದಾರೆ. ಭಾನುವಾರ ಸಂಜೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಮನೆಯಲ್ಲಿ ಗಣಪತಿ ಪೂಜೆಯಲ್ಲಿ ಭಾಗವಹಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಸಲ್ಮಾನ್ ಖಾನ್ ಸೇರಿದಂತೆ ಹಲವಾರು ತಾರೆಯರೊಂದಿಗೆ ಶಾರುಖ್ ಖಾನ್ ಗಣಪತಿ ಪೂಜೆಯಲ್ಲಿ ಪಾಲ್ಗೊಂಡರು.
ಬಳಿಕ ಟಿ- ಸೀರೀಸ್ ಕಚೇರಿಯಲ್ಲಿಯೂ ಕಾಣಿಸಿಕೊಂಡಿದ್ದಾರೆ. ಪ್ರೊಡಕ್ಷನ್ ಹೌಸ್ ಕಚೇರಿಗೆ ತಡರಾತ್ರಿ ಭೇಟಿ ನೀಡಿದ್ದು, ಅಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣಪತಿ ಪ್ರತಿಮೆಗೆ ಪೂಜೆ ಸಲ್ಲಿಸಿದ್ದಾರೆ. ಈ ಕುರಿತ ವಿಡಿಯೋವನ್ನು ಪಾಪರಾಜಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಡಿದ್ದಾರೆ. ನೀಲಿ ಬಣ್ಣದ ಪಠಾನಿ ಸೂಟ್ ಧರಿಸಿ ಕಚೇರಿಗೆ ತೆರಳಿದ ಶಾರುಖ್ ಖಾನ್, ಭೂಷಣ್ ಕುಮಾರ್ ಅವರೊಂದಿಗೆ ಪೋಸ್ ನೀಡುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ಈ ಹಿಂದೆ ಸೆಪ್ಟೆಂಬರ್ 21 ರಂದು ಗುರುವಾರ ತಮ್ಮ ಕಿರಿಯ ಮಗ ಅಬ್ರಾಮ್ ಜೊತೆಗೆ ಮುಂಬೈನ ಪ್ರಸಿದ್ಧ 'ಲಾಲ್‌ಬಾಗ್ಚ ರಾಜಾದಲ್ಲಿ ಶಾರುಖ್ ವಿಶೇಷ ಪೂಜೆ ಸಲ್ಲಿಸಿದ್ದರು. ಲಾಲ್‌ಬಾಗ್ಚ ರಾಜಾ ಮುಂಬೈನ ಲಾಲ್‌ಬಾಗ್‌ನಲ್ಲಿ ಇರಿಸಲಾಗಿರುವ ದೊಡ್ಡ ಗಣೇಶನ ವಿಗ್ರಹವಾಗಿದೆ. ಅಲ್ಲದೇ ಗಣೇಶ ಚತುರ್ಥಿ ದಿನದಂದು ತಮ್ಮ ಮನೆಗೆ ಗಣಪತಿ ಮೂರ್ತಿ ತಂದು ಪ್ರತಿಷ್ಠಾಪಿಸುವ ಮೂಲಕ ಅಭಿಮಾನಿಗಳಿಗೆ ಶುಭ ಹಾರೈಸಿದ್ದರು.
'ಜವಾನ್' ಚಿತ್ರ ಬಿಡುಗಡೆಯಾದಾಗಿನಿಂದ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿಯುತ್ತಿದೆ. ಈ ಚಿತ್ರ ವಿಶ್ವದಾದ್ಯಂತ 1000 ಕೋಟಿ ರೂ. ಕಲೆಕ್ಷನ್ ನತ್ತ ಕಾಲಿಡುತ್ತಿದೆ. ಪಠಾಣ್ ಮತ್ತು ಜವಾನ್ ಚಿತ್ರದ ಬ್ಲಾಕ್ ಬಸ್ಟರ್ ಯಶಸ್ಸಿನ ನಂತರ, ಶಾರುಖ್ ಖಾನ್ ಡುಂಕಿಯೊಂದಿಗೆ ಅಬ್ಬರಿಸುವ ಮೂಲಕ ವರ್ಷವನ್ನು ಕೊನೆಗೊಳಿಸಲಿದ್ದಾರೆ. ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಈ ಚಿತ್ರದಲ್ಲಿ ಚಿತ್ರದಲ್ಲಿ ತಾಪ್ಸಿ ಪನ್ನು ಕಾಣಿಸಿಕೊಳ್ಳಲಿದ್ದಾರೆ.ಈ ಕ್ರಿಸ್‌ಮಸ್‌ಗೆ ಚಿತ್ರ ಬಿಡುಗಡೆಯಾಗುತ್ತಿದೆ ಎಂದು ಸೂಪರ್‌ಸ್ಟಾರ್ ಖಚಿತಪಡಿಸಿದ್ದಾರೆ. ಶಾರುಖ್ ಖಾನ್ ಅಭಿಮಾನಿಗಳು ಈಗಾಗಲೇ ಕ್ಷಣಗಣನೆ ಆರಂಭಿಸಿದ್ದಾರೆ.
Advertisement