
ಬಾಲಿವುಡ್ ಖ್ಯಾತನಟ ನಾಸಿರುದ್ಧೀನ್ ಶಾ ವಿರುದ್ಧ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕಟುನುಡಿಯಾಡಿದ್ದಾರೆ. ಹಿರಿಯ ನಟನನ್ನು ವಿವೇಕ್ ಅಗ್ನಿಹೋತ್ರಿ ಭಯೋತ್ಪಾದಕರ ಬೆಂಬಲಿಗರಿಗೆ ಹೋಲಿಸಿದ್ದಾರೆ. ತಮ್ಮ ಸಿನಿಮಾಗಳ ಬಗ್ಗೆ ನಾಸಿರುದ್ಧೀನ್ ಆಡಿದ ಮಾತುಗಳಿಗೆ ತಿರುಗೇಟು ನೀಡಿದ್ದಾರೆ.
ಬಾಲಿವುಡ್ ಹಿರಿಯ ನಟ ನಾಸಿರುದ್ಧೀನ್ ಶಾ ಇತ್ತೀಚೆಗಷ್ಟೆ, ‘ದಿ ಕಾಶ್ಮೀರ್ ಫೈಲ್ಸ್’, ‘ದಿ ಕೇರಳ ಸ್ಟೋರಿ’, ‘ಗದರ್ 2’ ಸಿನಿಮಾಗಳ ಬಗ್ಗೆ ಮಾತನಾಡುತ್ತಾ, ಅವೆಲ್ಲ ಸಮಾಜವನ್ನು ಒಡೆಯುವ ನೀತಿಯನ್ನು ಹೊಂದಿವೆ ಎಂಬರ್ಥದ ಮಾತುಗಳನ್ನಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನರಮೇಧವನ್ನು ಬೆಂಬಲಿಸುವ ಸಿನಿಮಾಗಳಲ್ಲಿ ನಟಿಸುವುದನ್ನು ಅವರು (ನಾಸಿರುದ್ದೀನ್ ಶಾ) ಎಂಜಾಯ್ ಮಾಡುತ್ತಾರೆ. ಅದು ಅವರ ಧರ್ಮದ ಕಾರಣಕ್ಕೋ ಅಥವಾ ಅವರ ವೈಯಕ್ತಿಕ ದ್ವೇಷಕ್ಕೋ ಗೊತ್ತಿಲ್ಲ. ಕಾರಣ ಏನಾದರೂ ಇರಲಿ, ಅವರು ಭಯೋತ್ಪಾದಕರನ್ನು ಬೆಂಬಲಿಸುತ್ತಾರೆ.
ನಾನು ಬೆಂಬಲಿಸುವುದಿಲ್ಲ. ನಾಸಿರ್ ನನ್ನ ಬಗ್ಗೆ, ನನ್ನ ಸಿನಿಮಾ ಬಗ್ಗೆ ಏನು ಹೇಳಿದ್ದಾರೆ ಎಂಬ ಬಗ್ಗೆ ನಾನು ಯೋಚನೆ ಸಹ ಮಾಡುವುದಿಲ್ಲ. ಏಕೆಂದರೆ ನಾನು ಭಯೋತ್ಪಾದನೆಯನ್ನು ಬೆಂಬಲಿಸುವುದಿಲ್ಲ ಎಂದಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಸನ್ನಿ ಡಿಯೋಲ್ ನಟನೆಯ ಗದರ್ 2 ಬಗ್ಗೆ ನಾಸಿರುದ್ದೀನ್ ಶಾ ಪ್ರತಿಕ್ರಿಯೆ ನೀಡಿದ್ದರು. ಅತಿಯಾದ ದೇಶಪ್ರೇಮ ಅಪಾಯಕಾರಿ. ಸಿನಿಮಾದ ಜನಪ್ರಿಯತೆ ಅನ್ನೋದು ಇದರಿಂದಲೇ ಪ್ರೇರಿತಗೊಂಡಿದೆ. ಇಂದು ನಿಮ್ಮ ದೇಶವನ್ನು ಪ್ರೀತಿಸಿದರೆ ಸಾಕಾಗುವುದಿಲ್ಲ, ಕಾಲ್ಪನಿಕ ಶತ್ರುಗಳನ್ನು ಸೃಷ್ಟಿಸಿಕೊಳ್ಳಬೇಕು. ದಿ ಕೇರಳ ಸ್ಟೋರಿ, ಗದರ್ 2 ಚಿತ್ರಗಳು ಸಾಕಷ್ಟು ಹಾನಿಕರ. ನಾನು ಆ ಚಿತ್ರಗಳನ್ನು ನೋಡಿಲ್ಲ. ಆದರೆ, ಅವು ಯಾವ ವಿಚಾರದ ಬಗ್ಗೆ ಇದೆ ಅನ್ನೋದು ಗೊತ್ತಿದೆ ಎಂದಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಅಗ್ನಿಹೋತ್ರಿ, ನಾಸಿರ್ ಅವರು ನನ್ನ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನೋಡಿ ಅದು ಹೇಳುತ್ತಿರುವ ನಿಜ ಕಂಡು ಹತಾಶೆಗೆ ಒಳಗಾಗಿರಬೇಕು. ಅವರು ಮುಚ್ಚಿಟ್ಟಿದ್ದನ್ನು ಕಾಶ್ಮೀರ್ ಫೈಲ್ಸ್ ಸಿನಿಮಾ ಬಿಚ್ಚಿಟ್ಟಿದ್ದು ಕಂಡು ಹತಾಶರಾಗಿದ್ದಾರೆ. ಅವರಿಗೆ ಜಗತ್ತಿನ ಎದುರು ಬೆತ್ತಲೆ ಆಗಿದ್ದಕ್ಕೆ ಕೋಪ ಬಂದಿದೆ. ಹಾಗಾಗಿಯೇ ಅವರು ಈ ಬಗ್ಗೆ ಪ್ರತಿ ಬಾರಿ ಋಣಾತ್ಮಕವಾಗಿ ಮಾತನಾಡುತ್ತಿದ್ದಾರೆ ಎಂದಿದ್ದಾರೆ ವಿವೇಕ್ ಅಗ್ನಿಹೋತ್ರಿ.
Advertisement