
ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ತಮ್ಮ ಬಾಯ್‌ಫ್ರೆಂಡ್, ನಟ ಜಹೀರ್ ಇಕ್ಬಾಲ್ ಜತೆ ಜೂನ್ 23ರಂದು ದಕ್ಷಿಣ ಮುಂಬೈನಲ್ಲಿ ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ
ಈ ಮದುವೆ ಕುರಿತು ನಟ, ರಾಜಕಾರಣಿ ಹಾಗೂ ಸೋನಾಕ್ಷಿ ತಂದೆ ಶತ್ರುಘ್ನ ಸಿನ್ಹಾ ಬಳಿ ಕೇಳಲಾಗಿದೆ. ಮದುವೆ ಬಗ್ಗೆ ಅಸಮಾಧಾನ ಇರುವಂತೆ ಉತ್ತರ ನೀಡಿದ್ದಾರೆ. ಸೋನಾಕ್ಷಿ ನನ್ನ ಬಳಿ ಈ ಬಗ್ಗೆ ಏನನ್ನೂ ಹೇಳಿಲ್ಲ. ಇಂದಿನ ಕಾಲದ ಮಕ್ಕಳು ಮದುವೆಗೆ ಒಪ್ಪಿಗೆ ಕೇಳುವುದಿಲ್ಲ. ಬದಲಿಗೆ ತಮ್ಮ ನಿರ್ಧಾರದ ಬಗ್ಗೆ ಕುಟುಂಬದವರಿಗೆ ಮಾಹಿತಿ ನೀಡುತ್ತಾರೆ ಎಂದಿದ್ದಾರೆ ಶತ್ರುಘ್ನ ಸಿನ್ಹಾ.
ನಾನೀಗ ದೆಹಲಿಯಲ್ಲಿದ್ದೇನೆ. ಚುನಾವಣಾ ಫಲಿತಾಂಶದ ನಂತರ ನಾನು ಇಲ್ಲಿಗೆ ಬಂದೆ. ನನ್ನ ಮಗಳ ಬಗ್ಗೆ, ಅವಳ ಯೋಜನೆಗಳ ಬಗ್ಗೆ ನಾನು ಯಾರೊಂದಿಗೂ ಮಾತನಾಡಿಲ್ಲ. ಅವಳು ಮದುವೆ ಬಗ್ಗೆ ನನಗೆ ಏನನ್ನೂ ಹೇಳಿಲ್ಲ. ಮಾಧ್ಯಮದಲ್ಲಿ ಏನು ವರದಿ ಆಗಿದೆಯೋ ನನಗೂ ಅಷ್ಟೇ ತಿಳಿದಿದೆ. ಅವಳು ನಮಗೆ ಆಮಂತ್ರಣ ನೀಡಿದರೆ ನಾನು ಮತ್ತು ನನ್ನ ಹೆಂಡತಿ ಹೋಗಿ ಆಶೀರ್ವಾದ ಮಾಡುತ್ತೇವೆ. ಅವಳ ಸಂತೋಷವನ್ನು ನಾವು ಬಯಸುತ್ತೇವೆ ಎಂದು ಶತ್ರುಘ್ನ ಸಿನ್ಹಾ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಸೋನಾಕ್ಷಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವ ವಿಶ್ವಾಸವಿದೆ ಎಂದೂ ಶತ್ರುಘ್ನ ಸಿನ್ಹಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಮ್ಮ ಮಗಳ ನಿರ್ಧಾರ ಯಾವತ್ತೂ ಸರಿಯಾಗಿರುತ್ತದೆ ಎನ್ನುವ ವಿಶ್ವಾಸವಿದೆ. ಅವಳು ಎಂದಿಗೂ ಸಂವಿಧಾನೇತರ ಅಥವಾ ಕಾನೂನುಬಾಹಿರ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಅವಳು ಪ್ರಬುದ್ಧೆಯಾಗಿದ್ದು, ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕನ್ನು ಹೊಂದಿದ್ದಾಳೆ. ನನ್ನ ಮಗಳ ಮದುವೆಯಲ್ಲಿ ಡ್ಯಾನ್ಸ್ ಮಾಡಲು ಇಷ್ಟಪಡುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಸೋನಾಕ್ಷಿ ಹಾಗೂ ಜಹೀರ್ ಹಲವು ವರ್ಷಗಳಿಂದ ಸುತ್ತಾಟ ನಡೆಸುತ್ತಿದ್ದರೂ ಪ್ರೀತಿ ವಿಚಾರವನ್ನು ಎಂದಿಗೂ ಒಪ್ಪಿಕೊಂಡಿಲ್ಲ. ಇತ್ತೀಚೆಗೆ ಇವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಇವರು ಈಗ ವಿವಾಹ ಆಗುವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದೂ ಕೆಲವು ಮಾಧ್ಯಮಗಳು ವರದಿ ಮಾಡಿವೆ.
Advertisement