
ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ಅಭಿನಯದ 'ಎಮರ್ಜೆನ್ಸಿ' ಚಿತ್ರ ವಿವಾದಗಳಲ್ಲಿ ಸಿಲುಕಿಕೊಂಡಿದೆ. ಈ ಚಿತ್ರ ಇದೇ ಸೆಪ್ಟೆಂಬರ್ 6ರಂದು ಬಿಡುಗಡೆಯಾಗಬೇಕಿತ್ತು. ಆದರೆ ಚಿತ್ರದ ಬಿಡುಗಡೆ ಈಗ ಮುಂದಕ್ಕೆ ಹೋಗಿದೆ.
ಸೆನ್ಸಾರ್ ಮಂಡಳಿ ಇನ್ನೂ ಪ್ರಮಾಣಪತ್ರ ನೀಡಿಲ್ಲ. ಹೀಗಾಗಿ ತಕ್ಷಣವೇ ಪ್ರಮಾಣಪತ್ರ ನೀಡುವಂತೆ ಸೆನ್ಸಾರ್ ಮಂಡಳಿಗೆ ನಿರ್ದೇಶನ ನೀಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಜಾ ಮಾಡಿದೆ. ಅಲ್ಲದೆ ಈ ರೀತಿ ನಿರ್ದೇಶನ ನೀಡಿದರೆ ಮಧ್ಯಪ್ರದೇಶ ಹೈಕೋರ್ಟ್ ನ ಆದೇಶಕ್ಕೆ ವ್ಯತಿರಿಕ್ತವಾಗುತ್ತದೆ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
ಜಬಲ್‌ಪುರ್ ಸಿಖ್ ಸಂಗತ್ ಸಲ್ಲಿಸಿರುವ ಆಕ್ಷೇಪಣೆಗಳ ಬಗ್ಗೆ ನಿರ್ಧರಿಸಲು ಸೆನ್ಸಾರ್ ಮಂಡಳಿಗೆ ಮಧ್ಯಪ್ರದೇಶ ಹೈಕೋರ್ಟ್ ಈಗಾಗಲೇ ಆದೇಶ ನೀಡಿರುವುದರಿಂದ, ಪ್ರಮಾಣಪತ್ರವನ್ನು ನೀಡುವಂತೆ ಸಿಬಿಎಫ್‌ಸಿಗೆ ನಿರ್ದೇಶಿಸಲು ಸಾಧ್ಯವಿಲ್ಲ ಎಂದು ವಿಚಾರಣೆಯ ಸಂದರ್ಭದಲ್ಲಿ ಬಾಂಬೆ ಹೈಕೋರ್ಟ್ ಹೇಳಿದೆ. ಸಿಖ್ ಸಂಗತ್ ಚಿತ್ರ ಮತ್ತು ಅದರ ಟ್ರೇಲರ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. ಜಬಲ್ಪುರ್ ಸಿಖ್ ಸಂಗತ್ ಅಥವಾ ಬೇರೆಯವರು ಎತ್ತಿರುವ ಆಕ್ಷೇಪಗಳ ಬಗ್ಗೆ ಸೆಪ್ಟೆಂಬರ್ 18ರೊಳಗೆ ನಿರ್ಧಾರ ತೆಗೆದುಕೊಳ್ಳುವಂತೆ ಸಿಬಿಎಫ್‌ಸಿಗೆ ಹೈಕೋರ್ಟ್ ಆದೇಶಿಸಿದೆ.
ಕಂಗನಾ ರಣಾವತ್ ಅವರ ಚಿತ್ರಕ್ಕೆ CBFC ಪ್ರಮಾಣಪತ್ರವನ್ನು ನೀಡಿಲ್ಲ. ಹೀಗಾಗಿ ಝೀ ಎಂಟರ್‌ಟೈನ್‌ಮೆಂಟ್ ಬಾಂಬೆ ಹೈಕೋರ್ಟ್‌ನ ಮೊರೆ ಹೋಗಿತ್ತು. ಸೆನ್ಸಾರ್ ಪ್ರಮಾಣಪತ್ರ ನೀಡುವಂತೆ ಕಂಪನಿಯು ಹೈಕೋರ್ಟ್‌ಗೆ ಮನವಿ ಮಾಡಿತ್ತು. ಆದರೆ ಇದನ್ನು ಹೈಕೋರ್ಟ್ ನಿರಾಕರಿಸಿದೆ.
ಝೀ ಎಂಟರ್‌ಟೈನ್‌ಮೆಂಟ್ ಎಮರ್ಜೆನ್ಸಿ ಚಿತ್ರದ ನಿರ್ಮಾಪಕರು. ಅರ್ಜಿಯಲ್ಲಿ ಕಂಪನಿಯು ಸಿಬಿಎಫ್‌ಸಿ ಅನಿಯಂತ್ರಿತವಾಗಿ ಪ್ರಮಾಣೀಕರಣವನ್ನು ತಡೆಹಿಡಿದಿದೆ ಎಂದು ಹೇಳಿಕೊಂಡಿದೆ. ಈ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಬಿಪಿ ಕೊಲಬಾವಾಲಾ ಮತ್ತು ಫಿರ್ದೋಶ್ ಪೂನಿವಾಲಾ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
Advertisement