ಉದ್ಯಮಿಗೆ 60 ಕೋಟಿ ರೂ ವಂಚನೆ ಆರೋಪ: ಶಿಲ್ಪಾ ಶೆಟ್ಟಿ-ರಾಜ್ ಕುಂದ್ರಾ ದಂಪತಿ ವಿರುದ್ಧ ಕೇಸ್ ದಾಖಲು
ನವದೆಹಲಿ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ಉದ್ಯಮಿ ರಾಜ್ ಕುಂದ್ರಾ ವಿರುದ್ಧ ಮುಂಬೈ ಮೂಲದ ಉದ್ಯಮಿಯೊಬ್ಬರಿಗೆ 60 ಕೋಟಿ ರೂಪಾಯಿ ವಂಚಿಸಿದ ಆರೋಪ ಮೇಲೆ ಕೇಸು ದಾಖಲಾಗಿದೆ.
ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್‌ಗಾಗಿ ಸಾಲ ಮತ್ತು ಹೂಡಿಕೆ ಒಪ್ಪಂದಕ್ಕೆ ಸಂಬಂಧಿಸಿದೆ. ಉದ್ಯಮಿ ದೀಪಕ್ ಕೊಠಾರಿ ಅವರು 2015-2023ರ ಮಧ್ಯೆ ವ್ಯವಹಾರ ವಿಸ್ತರಣೆಗಾಗಿ 60.48 ಕೋಟಿ ರೂಪಾಯಿಗಳನ್ನು ನೀಡಿದ್ದರು, ಆದರೆ ಶಿಲ್ಪಾ ಶೆಟ್ಟಿ ದಂಪತಿ ಅದನ್ನು ವೈಯಕ್ತಿಕ ವೆಚ್ಚಗಳಿಗೆ ಖರ್ಚು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಕೊಠಾರಿ ಅವರು 2015 ರಲ್ಲಿ ರಾಜೇಶ್ ಆರ್ಯ ಎಂಬ ಏಜೆಂಟ್ ಮೂಲಕ ಶಿಲ್ಪಾ ಶೆಟ್ಟಿ-ರಾಜ್ ಕುಂದ್ರ ಅವರ ಪರಿಚಯವಾಯಿತು ಎಂದು ಹೇಳಿಕೊಂಡಿದ್ದಾರೆ. ಆ ಸಮಯದಲ್ಲಿ, ದಂಪತಿ ಆನ್‌ಲೈನ್ ಶಾಪಿಂಗ್ ಪ್ಲಾಟ್ ಫಾರ್ಮ್ ಬೆಸ್ಟ್ ಡೀಲ್ ಟಿವಿಯ ನಿರ್ದೇಶಕರಾಗಿದ್ದರು; ಶಿಲ್ಪಾ ಶೆಟ್ಟಿ ಆಗ ಕಂಪನಿಯಲ್ಲಿ ಶೇಕಡಾ 87 ಕ್ಕೂ ಹೆಚ್ಚು ಷೇರುಗಳನ್ನು ಹೊಂದಿದ್ದರು.
ಆರ್ಯ ಅವರು ಕಂಪನಿಗೆ ವಾರ್ಷಿಕ ಶೇಕಡಾ 12ರಷ್ಟು ಬಡ್ಡಿಯಲ್ಲಿ 75 ಕೋಟಿ ರೂಪಾಯಿ ಸಾಲ ಪಡೆಯಲು ಬಯಸಿದ್ದರು, ಆದರೆ ಹೆಚ್ಚಿನ ತೆರಿಗೆಗಳನ್ನು ತಪ್ಪಿಸಲು, ಆ ಮೊತ್ತವನ್ನು ಹೂಡಿಕೆ ಎಂದು ಪರಿಗಣಿಸುವಂತೆ ಸೂಚಿಸಿದರು. ಸಭೆ ನಡೆಸಿ, ಸಮಯಕ್ಕೆ ಸರಿಯಾಗಿ ಹಣವನ್ನು ಹಿಂದಿರುಗಿಸಲಾಗುವುದು ಎಂಬ ಭರವಸೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಯಿತು.
ಕೊಠಾರಿ ಅವರು ಏಪ್ರಿಲ್ 2015 ರಲ್ಲಿ ಮೊದಲ ಕಂತಿನ ಸುಮಾರು 31.95 ಕೋಟಿ ರೂಪಾಯಿ ವರ್ಗಾಯಿಸಿದರು. ಆದರೆ ತೆರಿಗೆ ಸಮಸ್ಯೆ ಮುಂದುವರೆದು ಸೆಪ್ಟೆಂಬರ್‌ನಲ್ಲಿ ಎರಡನೇ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಜುಲೈ 2015 ಮತ್ತು ಮಾರ್ಚ್ 2016 ರ ನಡುವೆ ಅವರು 28.54 ಕೋಟಿ ರೂಪಾಯಿ ರ್ಗಾಯಿಸಿದ್ದಾರೆ ಎಂದು ಉದ್ಯಮಿ ಹೇಳಿದರು.
ಒಟ್ಟಾರೆಯಾಗಿ, ಈ ಒಪ್ಪಂದಕ್ಕಾಗಿ 60.48 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ವರ್ಗಾಯಿಸಿದ್ದಾರೆ, ಜೊತೆಗೆ 3.19 ಲಕ್ಷ ರೂ.ಗಳನ್ನು ಸ್ಟ್ಯಾಂಪ್ ಡ್ಯೂಟಿಯಾಗಿ ಪಾವತಿಸಿದ್ದಾರೆ. ಶಿಲ್ಪಾ ಶೆಟ್ಟಿ ಏಪ್ರಿಲ್ 2016 ರಲ್ಲಿ ಅವರಿಗೆ ವೈಯಕ್ತಿಕ ಗ್ಯಾರಂಟಿ ಸಹ ನೀಡಿದ್ದರು ಎಂದು ಕೊಠಾರಿ ಹೇಳಿದ್ದಾರೆ. ಆದರೆ ತಿಂಗಳುಗಳ ನಂತರ, ಸೆಪ್ಟೆಂಬರ್‌ನಲ್ಲಿ, ಅವರು ಕಂಪನಿಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಶೀಘ್ರದಲ್ಲೇ, ಕಂಪನಿಯ ವಿರುದ್ಧ 1.28 ಕೋಟಿ ರೂಪಾಯಿ ದಿವಾಳಿತನ ಪ್ರಕರಣ ಕೇಳಿಬಂತು. ಅದು ಕೊಠಾರಿಯವರಿಗೆ ತಿಳಿದಿರಲಿಲ್ಲ. ಅವರ ಹಣಕ್ಕಾಗಿ ಅವರು ಪದೇ ಪದೇ ಮನವಿ ಮಾಡಿಕೊಂಡರೂ ಶಿಲ್ಪಾ ಶೆಟ್ಟಿ ದಂಪತಿ ಕ್ಯಾರೇ ಅನ್ನಲಿಲ್ಲ.
ತಮ್ಮ ದೂರಿನಲ್ಲಿ ಕೊಠಾರಿ ಅವರು, ಸೆಲೆಬ್ರಿಟಿ ದಂಪತಿ 2015-2023ರ ಅವಧಿಯಲ್ಲಿ ಯೋಜಿತ ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದರಲ್ಲಿ ಅವರು ವ್ಯಾಪಾರ ಉದ್ದೇಶಗಳಿಗಾಗಿ ಹಣವನ್ನು ತೆಗೆದುಕೊಂಡು ವೈಯಕ್ತಿಕ ವೆಚ್ಚಗಳಿಗಾಗಿ ಬಳಸಿಕೊಂಡಿದ್ದಾರೆ.
ಆರಂಭದಲ್ಲಿ ಜುಹು ಪೊಲೀಸ್ ಠಾಣೆಯಲ್ಲಿ ನಕಲಿ ಮತ್ತು ವಂಚನೆಗಾಗಿ ಪ್ರಕರಣ ದಾಖಲಾಗಿತ್ತು, ಆದರೆ ನಂತರ ಮೊತ್ತವು 10 ಕೋಟಿ ರೂ.ಗಳನ್ನು ಮೀರಿದ್ದರಿಂದ ಆರ್ಥಿಕ ಅಪರಾಧಗಳ ವಿಭಾಗಕ್ಕೆ (EOW) ಹಸ್ತಾಂತರಿಸಿ ಈಗ ಪ್ರಕರಣದ ತನಿಖೆ ನಡೆಸಲಾಗುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ