
ಮುಂಬೈ: ಹಿಂದಿಯ ಹಲವು ಜನಪ್ರಿಯ ಧಾರವಾಹಿಗಳಲ್ಲಿ ಅಭಿನಯಿಸಿರುವ ನಟಿ ಪ್ರಿಯಾ ಮರಾಠೆ ಭಾನುವಾರ ಮುಂಬೈನಲ್ಲಿ ನಿಧನರಾದರು. 38 ವರ್ಷ ವಯಸ್ಸಿನ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಭಾನುವಾರ ಬೆಳಿಗ್ಗೆ ನಿಧನ ಹೊಂದಿದ್ದಾರೆ. 1424 ಎಪಿಸೋಡ್‌ಗಳಿಗೂ ಅಧಿಕ ಕಾಲ ಪ್ರಸಾರವಾಗಿದ್ದ ‘ಪವಿತ್ರ ರಿಷ್ತಾ’ ಧಾರಾವಾಹಿಯಲ್ಲಿ ನಟಿಸಿದ್ದರು. 38 ವರ್ಷದ ಪ್ರಿಯಾ ಹಲವು ಟಿವಿ ಶೋಗಳು, ವೆಬ್ ಸರಣಿಗಳಲ್ಲಿ ನಟಿಸಿದ್ದರು. ದೀರ್ಘಕಾಲದಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಮುಂಬೈನ ಮೀರಾ ರಸ್ತೆಯಲ್ಲಿರುವ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಕ್ಯಾನ್ಸರ್‌ನಿಂದ ಚೇತರಿಸಿಕೊಳ್ಳುತ್ತಿದ್ದ ಪ್ರಿಯಾ ಅವರಿಗೆ ಮತ್ತೆ ಕ್ಯಾನ್ಸರ್ ಕಾಣಿಸಿಕೊಂಡಿತ್ತು. ಚಿಕಿತ್ಸೆ ಪಡೆಯುತ್ತಿದ್ದರೂ ಫಲಿಸಲಿಲ್ಲ. ಶನಿವಾರ (ಆಗಸ್ಟ್ 30) ಅವರು ಕೊನೆಯುಸಿರೆಳೆದರು.
1987 ಏಪ್ರಿಲ್ 23ರಂದು ಮುಂಬೈನಲ್ಲಿ ಜನಿಸಿದ ಪ್ರಿಯಾ ಅವರು ಮರಾಠಿ ಧಾರವಾಹಿ ‘ಯಾ ಸುಖನೋಯ’ ಮೂಲಕ ನಟನ ಜೀವನಕ್ಕೆ ಕಾಲಿಟ್ಟಿದ್ದರು. ಜೀ ವಾಹಿನಿಯಲ್ಲಿ ಪ್ರಸಾರವಾದ ‘ಪವಿತ್ರಾ ರಿಶ್ತಾ’ ಧಾರವಾಹಿಯಲ್ಲಿ ‘ವರ್ಷಾ ಸತೀಶ್’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಪಾತ್ರವು ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತ್ತು.
'ಯಾ ಸುಖಾನೋಯ' ಮತ್ತು 'ಚಾರ್ ದಿವಸ್ ಸಾಸುಚೆ' ಎಂಬ ಮರಾಠಿ ಧಾರಾವಾಹಿಯಲ್ಲಿ ಅವರು ನಟಿಸಿದ್ದರು. ಏಕ್ತಾ ಕಪೂರ್ ಅವರ ಬಾಲಾಜಿ ಟೆಲಿಫಿಲ್ಮ್ಸ್‌ನ 'ಕಸಮ್ ಸೆ' ಧಾರಾವಾಹಿಯಲ್ಲಿ ವಿದ್ಯಾ ಬಾಲಿ ಪಾತ್ರದಲ್ಲಿ ನಟಿಸಿದ್ದರು. ಕಾಮಿಡಿ ಸರ್ಕಸ್‌ನ ಮೊದಲ ಸೀಸನ್‌ನಲ್ಲಿಯೂ ಕಾಣಿಸಿಕೊಂಡಿದ್ದರು. ಏಪ್ರಿಲ್ 2012 ರಲ್ಲಿ ಸೋನಿ ಟಿವಿಯ 'ಬಡೇ ಅಚ್ಛೇ ಲಗ್ತೇ ಹೈ' ಧಾರಾವಾಹಿಯಲ್ಲಿ ಜ್ಯೋತಿ ಮಲ್ಹೋತ್ರಾ ಪಾತ್ರವನ್ನು ನಿರ್ವಹಿಸಿದ್ದರು.
'ತೂ ತಿಥೇ ಮೇಂ', 'ಭಾಗೇ ರೇ ಮನ್', 'ಜೈಸ್ತುತೆ', 'ಭಾರತ್ ಕಾ ವೀರ್ ಪುತ್ರ - ಮಹಾರಾಣಾ ಪ್ರತಾಪ್' ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದರು. 2008 ರಲ್ಲಿ ಬಿಡುಗಡೆಯಾದ ಹಿಂದಿ ಸಿನಿಮಾ 'ಹಮ್ನೆ ಜೀನಾ ಸೀಖ್ ಲಿಯಾ'ದಲ್ಲಿ ನಟಿಸಿದ್ದರು. ಗೋವಿಂದ ನಿಹಲಾನಿ ನಿರ್ದೇಶನದ ಮರಾಠಿ ಚಿತ್ರ 'ತೀ ಅನಿ ಇತರ್' ನಲ್ಲಿಯೂ ನಟಿಸಿದ್ದರು.
Advertisement